ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 28-11-2020

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 28-11-2020

>> ಪ್ರಶಾಂತ್‌ ಭೂಷಣ್‌ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಗೆ ಅಸಮ್ಮತಿ >> ಮಧ್ಯಂತರ ಆದೇಶಗಳ ವಿಸ್ತರಣೆ >> ನಿರೀಕ್ಷಣಾ ಜಾಮೀನು ಕುರಿತಾದ ಪ್ರಕರಣ >>ಪತ್ನಿ ಮಗಳಿಗೆ ಜೀವನಾಂಶ ನೀಡುವ ವಿಚಾರ

ತಮ್ಮ ಟ್ವೀಟ್‌ಗೆ ವಕೀಲ ಪ್ರಶಾಂತ್‌ ಭೂಷಣ್‌ ವಿಷಾದಿಸಿದ್ದಾರೆ: ನ್ಯಾಯಾಂಗ ನಿಂದನೆ ದಾಖಲಿಸಲು ಎಜಿ‌ ಅಸಮ್ಮತಿ

ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಿದ್ದ ಮನವಿಗೆ ಅಟಾರ್ನಿ ಜನರಲ್‌ ಒಪ್ಪಿಗೆ ನಿರಾಕರಿಸಿದ್ದಾರೆ. ಪ್ರಶಾಂತ್ ಭೂಷಣ್‌ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ವಕೀಲ ಸುನೀಲ್‌ ಸಿಂಗ್‌ ಮುಂದಾಗಿದ್ದರು.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ಇತ್ತೀಚೆಗೆ ಕನ್ಹಾ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ ಸಂದರ್ಭ ಮಧ್ಯಪ್ರದೇಶ ಸರ್ಕಾರದ ಹೆಲಿಕಾಪ್ಟರ್‌ ಬಳಸಿದ್ದು ಮತ್ತು ಅದೇ ಹೆಲಿಕಾಪ್ಟರ್‌ನಲ್ಲಿ ಅವರ ನಾಗಪುರದ ಮನೆ ತಲುಪಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು. ಆದರೆ, ತದನಂತರ ಅವರು ತಮ್ಮ ಈ ಟ್ವೀಟ್‌ ಕುರಿತು ವಿಷಾದ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನಾ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಕೋರಿದ್ದ ಮನವಿಗೆ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್ ಅಸಮ್ಮತಿ ಸೂಚಿಸಿದ್ದಾರೆ.

ಜನವರಿ 7ರ ವರೆಗೆ ಎಲ್ಲಾ ಮಧ್ಯಂತರ ಆದೇಶಗಳನ್ನು ವಿಸ್ತರಿಸಿದ ಕರ್ನಾಟಕ ಹೈಕೋರ್ಟ್‌

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಹೈಕೋರ್ಟ್‌ ತಾನು ಹೊರಡಿಸಿರುವ ಹಾಗೂ ರಾಜ್ಯಾದ್ಯಂತ ಇರುವ ಅಧೀನ ನ್ಯಾಯಾಲಯಗಳು ಹಾಗೂ ನ್ಯಾಯಾಧಿಕರಣಗಳು ಹೊರಡಿಸಿರುವ ಎಲ್ಲಾ ಮಧ್ಯಂತರ ಆದೇಶಗಳ ಅವಧಿಯನ್ನು ವಿಸ್ತರಿಸಿದೆ. ಒಂದು ತಿಂಗಳ ಒಳಗೆ ಮುಗಿಯುತ್ತಿದ್ದ ಮಧ್ಯಂತರ ಆದೇಶಗಳ ಅವಧಿಯನ್ನು ಮುಂದಿನ ವರ್ಷದ ಜನವರಿ 7ರ ವರೆಗೆ ವಿಸ್ತರಿಸಲಾಗಿದೆ.

Covid-19
Covid-19

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲ ಬಾರಿಗೆ ಏಪ್ರಿಲ್‌ 16ರಂದು ಮಧ್ಯಂತರ ಆದೇಶಗಳ ಅವಧಿಯನ್ನು ವಿಸ್ತರಿಸಿತ್ತು. ಕಾಲಕಾಲಕ್ಕೆ ತಕ್ಕಂತೆ ಆದೇಶಗಳ ಅವಧಿ ವಿಸ್ತರಣೆಯನ್ನು ನವೀಕರಿಸಲಾಗಿದೆ. ಈ ಹಿಂದೆ, ಅಕ್ಟೋಬರ್‌ 1ರಂದು ನ್ಯಾಯಾಲಯವು ಮಧ್ಯಂತರ ಆದೇಶಗಳ ಅವಧಿಯನ್ನು ವಿಸ್ತರಿಸಿತ್ತು.

ಪೊಲೀಸರು ಪ್ರಕರಣ ದಾಖಲಿಸುವುದರ ನಡುವೆ ನ್ಯಾಯಾಲಯಗಳು ಅನಗತ್ಯವಾಗಿ ಮಧ್ಯಪ್ರವೇಶಿಸಲಾಗದು: ಮದ್ರಾಸ್‌ ಹೈಕೋರ್ಟ್‌

ಬಂಧನ ಮತ್ತು ಮೊಕದ್ದಮೆಯನ್ನು ದಾಖಲಿಸುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂಚಿತವಾಗಿ ನೋಟಿಸ್‌ ನೀಡಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ತಾನು ಎಲ್ಲದಕ್ಕೂ ಅನ್ವಯಿಸುವಂತಹ ನಿರ್ದೇಶನವನ್ನು ನೀಡಲಾಗದು ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ. ಹಾಗೆ ಮಾಡುವುದು ಕರ್ತವ್ಯ ನಿರತ ಪೊಲೀಸರನ್ನು ಅನಗತ್ಯ ಗೊಂದಲಕ್ಕೆ ದೂಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.

Madurai Bench
Madurai Bench

ಪಿತೂರಿ, ಸುಳ್ಳು ದಾಖಲೆ ಸೃಷ್ಟಿ ಮತ್ತು ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸಬಹುದು ಎಂದು ನ್ಯಾಯಾಲಯಕ್ಕೆ ವಿವರಿಸಿದ ಆರೋಪಿಯು ಸಿಆರ್‌ಪಿಸಿ ಸೆಕ್ಷನ್‌ 41 (A)ರ ಅಡಿ ಪೊಲೀಸರು ತಮಗೆ ನೋಟಿಸ್‌ ನೀಡಬಹುದಾಗಿದೆ. ತಮ್ಮ ವಿರುದ್ಧ ಯಾವುದೇ ದೂರು ದಾಖಲಿಸಿದರೂ ನ್ಯಾಯಾಲಯದಲ್ಲಿ ತಾನು ನಿರೀಕ್ಷಣಾ ಜಾಮೀನು ಪಡೆಯಲು ಆದೇಶ ಮಾಡುವಂತೆ ಮನವಿ ಮಾಡಿದ್ದರು. ಬಂಧನ ಮತ್ತು ಪ್ರಕರಣ ದಾಖಲಿಸುವುದಕ್ಕೆ ಸಂಬಂಧಿಸಿದಂತೆ ಪೂರ್ವಾನ್ವಯವಾಗುವ ರೀತಿಯಲ್ಲಿ ಆದೇಶ ಹೊರಡಿಸುವ ಮೂಲಕ ಪೊಲೀಸರನ್ನು ಗೊಂದಲಕ್ಕೆ ಈಡು ಮಾಡಲಾಗದು ಎಂದಿರುವ ಏಕಸದಸ್ಯ ಪೀಠವು ಆರೋಪಿಯ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿತು.

ಕುಟುಂಬ ಉಳಿಸಿಕೊಳ್ಳುವ ಹೊಣೆ ತಾಯಿಗಿಂತ ಹೆಚ್ಚು ತಂದೆಗಿದೆ: ಜಮ್ಮು ಮತ್ತು ಕಾಶ್ಮೀರ ನ್ಯಾಯಾಲಯ

ತಾಯಿಗೆ ಹೋಲಿಸಿದರೆ ತಂದೆಗೆ ತಮ್ಮ ಕುಟುಂಬವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಹೆಚ್ಚಿಗೆ ಇದೆ ಎಂದು ಜಮ್ಮು ಮತ್ತು ಕಾಶ್ಮೀರದ ಹೆಚ್ಚುವರಿ ಕೌಟುಂಬಿಕ ಸೆಷನ್ಸ್‌ ನ್ಯಾಯಾಲಯವೊಂದು ತಿಳಿಸಿದೆ. ಪತ್ನಿ ಮತ್ತು ಮಗಳಿಗೆ ಜೀವನಾಂಶ ನೀಡುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ತಾಹಿರ್ ಖುರ್ಷಿದ್ ರೈನಾ ಈ ಅಭಿಪ್ರಾಯಪಟ್ಟರು.

Family Court
Family Court

ತಂದೆಯಾದವರು ಆರ್ಥಿಕವಾಗಿ ದುರ್ಬಲರಾಗಿದ್ದಾಗ ಮತ್ತು ಅವರ ಪತ್ನಿ ಸಾಕಷ್ಟು ಉತ್ತಮ ಸಂಪಾದನೆ ಹೊಂದಿದ್ದಾಗ ಮಾತ್ರ ಜೀವನಾಂಶ ವೆಚ್ಚವನ್ನು ಹಂಚಿಕೊಳ್ಳಲು ಹೆಂಡತಿಯು ಸಮ್ಮತಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಮೂಲಕ ವಿಚಾರಣಾ ನ್ಯಾಯಾಲಯವೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ತೀರ್ಪನ್ನು ಅನೂರ್ಜಿತಗೊಳಿಸಿದೆ.

No stories found.
Kannada Bar & Bench
kannada.barandbench.com