ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 26-11-2020

>> ಸಂವಿಧಾನ ದಿನಾಚರಣೆಯಲ್ಲಿ ನ್ಯಾಯದಾನದ ವಿಳಂಬದ ಬಗ್ಗೆ ಎಜಿ ಕಳವಳ >> ದಾದಿಯರಿಗಾಗಿ ಜಾರಿಗೊಳಿಸಿರುವ ನೂತನ ನೀತಿ >> ಸ್ಕೋಡಾ ಫೋಕ್ಸ್‌ ವ್ಯಾಗನ್ ಮೇಲ್ಮನವಿ >> ನಟ ಆಮಿರ್ ಖಾನ್‌ ವಿರುದ್ಧದ ಕ್ರಮಕ್ಕೆ ಕೋರಿದ್ದ ಮನವಿ ವಜಾ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 26-11-2020
Published on

ನ್ಯಾಯಿಕ ವಿಳಂಬದಿಂದ ಬಡವರು, ಮಧ್ಯಮ ವರ್ಗಕ್ಕೆ ಸಮಸ್ಯೆಯೇ ಹೊರತು ಶ್ರೀಮಂತರು-ಕಾರ್ಪೊರೇಟ್‌ಗಳಿಗಲ್ಲ: ಸಂವಿಧಾನ ದಿನಾಚರಣೆಯಲ್ಲಿ ಎ ಜಿ ವೇಣುಗೋಪಾಲ್‌ ಕಳವಳ

ನ್ಯಾಯದಾನ ವ್ಯವಸ್ಥೆಯಲ್ಲಿನ ಪ್ರಕರಣಗಳ ಬಾಕಿ ಮತ್ತು ನ್ಯಾಯ ವಿಳಂಬ ಕುರಿತು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ (ಎಸ್‌ಸಿಬಿಎ) ಸಂವಿಧಾನ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಹನವಾಗಿ ಮಾತನಾಡಿದರು.

Attorney General KK Venugopal
Attorney General KK Venugopal

ಕೋವಿಡ್‌ ಸಾಂಕ್ರಾಮಿಕತೆಯಿಂದ ಜಗತ್ತು ಚೇತರಿಸಿಕೊಂಡ ಮೇಲೆ ಬಾಕಿ ಪ್ರಕರಣಗಳ ವಿಚಾರವು ಆತಂಕ ಹೆಚ್ಚಿಸಲಿದೆ ಎಂದಿರುವ ವೇಣುಗೋಪಾಲ್‌ ಅವರು “ಕೋವಿಡ್‌ ವ್ಯಾಪಿಸಿದ್ದರಿಂದ ಪ್ರಕರಣ ದಾಖಲಿಸುವ ಮಿತಿಯನ್ನು ವಿಸ್ತರಿಸಿತು ಸುಪ್ರೀಂ ಕೋರ್ಟ್‌ ವಿಸ್ತರಿಸಿತು. ನನ್ನ ಆತಂಕವೇನೆಂದರೆ ಕೋವಿಡ್‌ ಪರಿಸ್ಥಿತಿ ಮುಗಿದ ಮೇಲೆ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಬಹುದು” ಎಂದರು. ಭಾರತದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ನ್ಯಾಯಿಕ ದತ್ತಾಂಶ ಗ್ರಿಡ್‌ ಪ್ರಕಾರ 3.61 ಕೋಟಿ ಪ್ರಕರಣ ಬಾಕಿ ಇವೆ. ಅವುಗಳಲ್ಲಿ ಸುಮಾರು 4.29 ಲಕ್ಷ ಪ್ರಕರಣಗಳು 30 ವರ್ಷಗಳಿಗಿಂತ ಹೆಚ್ಚು ದೀರ್ಘವಾಗಿ ವಿಚಾರಣಾ ಹಂತದಲ್ಲಿ ಇರುವಂತಹವು ಎನ್ನುವುದು ಆತಂಕಕಾರಿ. 50-60 ವಯೋಮಾನದವರು ನ್ಯಾಯದ ಆಶಯ ಮತ್ತು ಆಕಾಂಕ್ಷೆಗಳನ್ನಿರಿಸಿಕೊಂಡು ಮೊಕದ್ದಮೆಯೊಂದನ್ನು ದಾಖಲಿಸಿದರೆ ಅದರ ಫಲವನ್ನು ಕಾಣಲು ಇರುವುದಿಲ್ಲ. ಸಿರಿವಂತರು, ಪ್ರಬಲರು, ಮತ್ತು ಕಾರ್ಪೊರೆಟ್‌ಗಳಿಗೆ ಈ ವಿಳಂಬದಿಂದ ಹೆಚ್ಚಿನ ಪರಿಣಾಮವಾಗದು. ಅವರು ಅಲ್ಲಿಯವರೆಗೂ ಕಾಯಬಲ್ಲರು. ಆದರೆ ಮಧ್ಯಮ ಮತ್ತು ಬಡವರ್ಗದ ಜನತೆಗೆ ಇಷ್ಟು ಸುದೀರ್ಘ ಅವಧಿಯನ್ನು ಕಾಯುವುದು ತ್ರಾಸದಾಯಕ. ಅವರ ಹಣ ಮತ್ತು ತಾಳ್ಮೆ ಎರಡೂ ಬರಿದಾಗಿರುತ್ತವೆ," ಎಂದು ವಾಸ್ತವ ಸ್ಥಿತಿಗತಿಯ ಬಗ್ಗೆ ವಿಷಾದಿಸಿದರು.

ದಾದಿಯರಿಗೆ ಜಾರಿಗೊಳಿಸಿರುವ ನೂತನ ವ್ಯವಸ್ಥೆಯು “ಗೌಪ್ಯತೆಯ ಶುದ್ಧ ಉಲ್ಲಂಘನೆ”: ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ ದಾದಿಯರ ಒಕ್ಕೂಟ

ಕೇಂದ್ರ ಸರ್ಕಾರವು ದಾದಿಯರಿಗಾಗಿ ಜಾರಿಗೊಳಿಸಿರುವ ನೂತನ ನೀತಿಯ ಪ್ರಕಾರ ದಾದಿಯರು ತಮ್ಮ ದಾಖಲಾತಿ ಮತ್ತು ನೋಂದಣಿಗೆ ಖಾಸಗಿ ಸಂಸ್ಥೆಗೆ ವೈಯಕ್ತಿಕ ಮಾಹಿತಿ ನೀಡಬೇಕಿದ್ದು, ಇದು ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದ ಎಂದು ಆರೋಪಿಸಿ ಕೇರಳ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

United Nurses Association
United Nurses Association

ಕೇಂದ್ರ ಸರ್ಕಾರದ ನೂತನ ನೀತಿಯ ಪ್ರಕಾರ ನೋಂದಣಿ ಮಾಡಿಸಿರುವ ನಿರ್ದಿಷ್ಟ ರಾಜ್ಯದಲ್ಲಿ ಮಾತ್ರ ಅವರು ವೃತ್ತಿ ಕೈಗೊಳ್ಳಬಹುದಾಗಿದೆ ಎಂಬ ನೀತಿಯನ್ನು ವೃತ್ತಿಪರ ದಾದಿಯರಿಗಾಗಿ ರಚನೆಗೊಂಡಿರುವ ಸಮಗ್ರ ದಾದಿಯರ ಒಕ್ಕೂಟವು (ಅಧ್ಯಕ್ಷ ಜಾಸ್ಮಿನ್‌ಶಾ ಎಂ) ಪ್ರಶ್ನಿಸಿದೆ. ಭಾರತೀಯ ದಾದಿಯರ ಒಕ್ಕೂಟವು ಜಾರಿಗೊಳಿಸಿರುವ ದಾದಿಯರ ನೋಂದಣಿ ಮತ್ತು ಟ್ರ್ಯಾಕಿಂಗ್‌ ವ್ಯವಸ್ಥೆಯು ದಾದಿಯರ ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಕೀಲರಾದ ಶ್ರೀರಾಮ್‌ ಪರಕ್ಕತ್‌, ಕೆ ಆರ್‌ ಶ್ರೀಪತಿ ಮತ್ತು ಅನುಪಮಾ ಸುಬ್ರಮಣಿಯನ್‌ ಅವರ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ವಿವರಿಸಲಾಗಿದೆ.

[ಮಾಲಿನ್ಯ ವಂಚನೆ ಸಾಧನ] ಎಫ್‌ಐಆರ್‌ ವಜಾ ಕೋರಿದ್ದ ಸ್ಕೋಡಾ ಫೋಕ್ಸ್‌ ವ್ಯಾಗನ್‌ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಕಾರುಗಳಲ್ಲಿ ಮಾಲಿನ್ಯ ವಂಚನೆ ಸಾಧನ ಅಳವಡಿಸಿದ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ದಾಖಲಿಸಲಾಗಿರುವ ಪ್ರಥಮ ಮಾಹಿತಿ ವರದಿಯನ್ನು ವಜಾಗೊಳಿಸುವಂತೆ ಸ್ಕೋಡಾ ಫೋಕ್ಸ್‌ ವ್ಯಾಗನ್‌ ಸಲ್ಲಿಸಿದ್ದ ಮನವಿಯನ್ನು ಗುರುವಾರ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

Skoda in trouble?
Skoda in trouble?

ನೋಯಿಡಾದಲ್ಲಿ ದಾಖಲಿಸಲಾಗಿದ್ದ ಎಫ್‌ಐಆರ್‌ ವಜಾಗೊಳಿಸುವಂತೆ ಸ್ಕೋಡಾ ಫೋಕ್ಸ್‌ ವ್ಯಾಗನ್ ಕೋರಿದ್ದ ಮನವಿಯನ್ನು ಅಲಾಹಾಬಾದ್‌ ಹೈಕೋರ್ಟ್‌ ಜುಲೈ 10ರಂದು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸಂಸ್ಥೆಯು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ಕುರಿತಾಗಿ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠ ತೀರ್ಪು ಪ್ರಕಟಿಸಿದೆ. ವಂಚನೆಯ ಉದ್ದೇಶದಿಂದ ಅಳವಡಿಸಲಾಗಿದ್ದ ಸಾಧನಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಫೋಕ್ಸ್‌ ವ್ಯಾಗನ್‌ ಇಂಡಿಯಾಕ್ಕೆ ದಂಡ ವಿಧಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಎಫ್‌ಐಆರ್‌ ಅನ್ನು ದಾಖಲಿಸಲಾಗಿದ್ದು, ಅದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.

Also Read
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 25-11-2020

ಅಸಹಿಷ್ಣುತೆ ಕುರಿತು ಬಾಲಿವುಡ್‌ ನಟ ಆಮಿರ್ ಖಾನ್ ಹೇಳಿಕೆ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿ ವಜಾಗೊಳಿಸಿದ ಛತ್ತೀಸ್‌ಗಢ ನ್ಯಾಯಾಲಯ

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ 2015ರಲ್ಲಿ ರಾಮನಾಥ್‌ ಗೋಯೆಂಕಾ ಪ್ರಶಸ್ತಿ ಸಮಾರಂಭದಲ್ಲಿ ಕಳವಳ ವ್ಯಕ್ತಪಡಿಸಿದ್ದ ಬಾಲಿವುಡ್‌ ನಟ ಆಮಿರ್ ಖಾನ್‌ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ದಾಖಲಿಸಿದ್ದ ಪ್ರಕರಣದ ಮೇಲ್ಮನವಿ ಅರ್ಜಿಯನ್ನು ಛತ್ತೀಸ್‌ಗಢ ಹೈಕೋರ್ಟ್‌ ಇತ್ತೀಚೆಗೆ ವಜಾಗೊಳಿಸಿದೆ.

Actor Aamir Khan
Actor Aamir Khan

ಪ್ರಕರಣದಲ್ಲಿ ಯಾವುದೇ ಸತ್ವ ಇಲ್ಲದಿರುವುದನ್ನು ಮನಗಂಡ ನ್ಯಾಯಮೂರ್ತಿ ಸಂಜಯ್‌ ಕೆ ಅಗರ್‌ವಾಲ್ ಅವರಿದ್ದ ಪೀಠವು ಅದನ್ನು ವಜಾಗೊಳಿಸುತ್ತಿರುವುದಾಗಿ ತಿಳಿಸಿತು. ಪ್ರಕರಣವನ್ನು ಈ ಹಿಂದೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಪರಿಗಣಿಸಿದ್ದರೂ ಕೂಡ ತದನಂತರ ಸೆಕ್ಷನ್‌ 153-ಎ ಅಡಿಯ ಕ್ರಿಮಿನಲ್‌ ಅಪರಾಧಗಳ ವಿಚಾರಣೆ ನಡೆಸಲು ರಾಜ್ಯ ಸರ್ಕಾರದ ಒಪ್ಪಿಗೆಯ ಅಗತ್ಯವಿದ್ದು, ಅದಿಲ್ಲದಿರುವುದರಿಂದ ವಜಾಗೊಳಿಸುತ್ತಿರುವುದಾಗಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರಾದ ವಕೀಲ ದೀಪಕ್‌ ದಿವಾನ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆಮಿರ್‌ ಖಾನ್‌ ಹೇಳಿಕೆಯು ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಭಾಗವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.

Kannada Bar & Bench
kannada.barandbench.com