ಪ್ರದರ್ಶನದ ವೇಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಂಧನಕ್ಕೊಳಗಾದ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಮತ್ತು ನಳಿನ್ ಯಾದವ್ ಅವರು ಸಲ್ಲಿಸದ್ದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ. ಇದೇ ವೇಳೆ ನ್ಯಾಯಾಲಯ “ನೀವು ಮತ್ತೊಬ್ಬರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಹೇಗೆ ಸಾಧ್ಯ?ʼ ಎಂದು ಪ್ರಶ್ನಿಸಿತು.
ಪ್ರದರ್ಶನದ ವೇಳೆ ಹಿಂದೂ ದೇವತೆಗಳ ಕುರಿತಾಗಿ ಫಾರೂಕಿ ನಿಂದನೆ ಮಾಡಿದ ಬಗ್ಗೆ ಯಾವುದೇ ಪುರಾವೆ ಅಥವಾ ವಿಡಿಯೋ ಇಲ್ಲ ಎಂದು ಫಾರೂಕಿ ಪರ ವಕೀಲರು ಪ್ರತಿಪಾದಿಸಿದರು. ಮೇ 2020ರಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದ ಸಂದರ್ಭದಲ್ಲಿ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಫಾರೂಕಿ ಅವರನ್ನು ವಶಕ್ಕೆ ನೀಡಬೇಕು ಎಂದು ಕೋರಿದ ಉತ್ತರ ಪ್ರದೇಶ ಪೊಲೀಸರ ನಡೆಗೆ ಕೂಡ ಆಕ್ಷೇಪ ವ್ಯಕ್ತಪಡಿಸಲಾಯಿತು. ವಿಚಾರಣೆ ವೇಳೆ ನ್ಯಾಯಮೂರ್ತಿ ರೋಹಿತ್ ಆರ್ಯ ಅವರು ಅರ್ಜಿಯನ್ನು ಹಿಂಪಡೆಯುವಿರಾ ಎಂದು ಫಾರೂಕಿ ಪರ ವಕೀಲ ವಿವೇಕ್ ಟಂಖಾ ಅವರನ್ನು ಪ್ರಶ್ನಿಸಿದರು. ಟಂಖಾ ಅವರು ನಕಾರಾತ್ಮಕ ಪ್ರತಿಕ್ರಿಯೆ ನೀಡಿ ವಾದ ಮಂಡನೆಗೆ ಮುಂದಾದರು. ಬಳಿಕ ನ್ಯಾಯಾಲಯ ಆದೇಶ ಕಾಯ್ದಿರಿಸಿತು. ತಮ್ಮ ಸ್ಟಾಂಡ್ ಅಪ್ ಕಾಮಿಡಿ ಪ್ರದರ್ಶನದ ವೇಳೆ ಹಿಂದೂ ದೈವಗಳನ್ನು ಅವಮಾನಿಸಿದ್ದಾರೆ ಎಂದು ಹಿಂದೂ ರಕ್ಷಕ್ ಸಂಘಟನೆಯ ಮುಖಂಡ ಏಕಲವ್ಯ ಸಿಂಗ್ ಗೌರ್ ಸಲ್ಲಿಸಿದ್ದ ದೂರಿನ ಮೇರೆಗೆ ಜನವರಿ 1ರಂದು ಫಾರೂಕಿ ಅವರನ್ನು ಬಂಧಿಸಲಾಗಿತ್ತು.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ʼನ್ಯಾಯಾಂಗ ನೇಮಕಾತಿಯಲ್ಲಿ ಸಾಮಾಜಿಕ ವಿವಿಧತೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಸಿದ್ದಾರೆ. ನ್ಯಾಯಾಂಗ ನೇಮಕಾತಿಯಲ್ಲಿ ಸಾಕಷ್ಟು ವೈವಿಧ್ಯ ತರಲು ಒತ್ತಾಯಿಸಿ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ಪಿ ವಿಲ್ಸನ್ ಅವರು ಬರೆದ ಪತ್ರಕ್ಕೆ ಅವರು ಪ್ರತಿಕ್ರಿಯಿಸಿ ಈ ಹೇಳಿಕೆ ನೀಡಿದ್ದಾರೆ. ಉನ್ನತ ನ್ಯಾಯಾಂಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳಾ ವರ್ಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಜಾತಿ ಅಥವಾ ವರ್ಗದ ಆಧಾರದ ಮೇಲೆ ನ್ಯಾಯಾಂಗ ಹುದ್ದೆಗಳ ಮೀಸಲಾತಿಗೆ ಸಂವಿಧಾನ ಅವಕಾಶ ನೀಡಿಲ್ಲ. ಆದ್ದರಿಂದ ಈ ಉದ್ದೇಶಕ್ಕಾಗಿ ರೂಪಿಸಿದ ಜಾತಿ ಅಥವಾ ವರ್ಗವಾರು ಮಾಹಿತಿ ಕೇಂದ್ರದ ಬಳಿ ಇಲ್ಲ. ನ್ಯಾಯಾಲಯಗಳು, ನ್ಯಾಯಮಂಡಳಿಗಳಿಗೆ ಅಭ್ಯರ್ಥಿಗಳನ್ನು ಶಿಫಾರಸು ಮಾಡುವಾಗ ಸಾಮಾಜಿಕ ವೈವಿಧ್ಯ ಪ್ರತಿನಿಧಿಸುವ ಸೂಕ್ತ ಅಭ್ಯರ್ಥಿಗಳನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಲ್ಸನ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಸಚಿವರಿಗೆ ಪತ್ರಬರೆದಿದ್ದರು. ಈ ಹಿಂದೆ ಅಕ್ಟೋಬರ್‌ನಲ್ಲಿ ನೀಡಿದ ಬೇರೊಂದು ಪ್ರತಿಕ್ರಿಯೆಯಲ್ಲಿ ಹೈಕೋರ್ಟ್‌ಗಳಿಗೆ ನೇಮಕಾತಿ ಮಾಡುವಾಗ ವೈವಿಧ್ಯತೆಯನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ಒತ್ತಾಯಿಸುತ್ತಿರುವುದಾಗಿ ಸಚಿವರು ತಿಳಿಸಿದ್ದರು.
ವಾಟ್ಸಾಪ್‌ನ ನೂತನ ಗೌಪ್ಯತಾ ನೀತಿಯಿಂದಾಗಿ ಉದ್ಭವಿಸುವ ಮಾಹಿತಿ ಗೌಪ್ಯತಾ ಸಮಸ್ಯೆಗಳನ್ನು ಗಮನಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ವೇದಿಕೆಯಾದ ವಾಟ್ಸಾಪ್‌ಗೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಐರೋಪ್ಯ ಬಳಕೆದಾರರಿಗೆ ನೀಡಲಾಗಿರುವ ಗೌಪ್ಯತೆ ನೀತಿ (ಇದರಲ್ಲಿ ಅವರು ಹೊರಗುಳಿಯುವ ಆಯ್ಕೆ ನೀಡಲಾಗಿದೆ). ಭಾರತೀಯ ಬಳಕೆದಾರರಿಗೆ ಇಲ್ಲ. ಈ ತರತಮ ಧೋರಣೆ ಕಳವಳಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಗೌಪ್ಯತಾ ನೀತಿಯನ್ನು ಪ್ರಶ್ನಿಸಿ ವಕೀಲ ಚೈತನ್ಯ ರೋಹಿಲ್ಲಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಕೇಂದ್ರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ ಅವರಿಗೆ ಈ ವಿವರಣೆ ನೀಡಿದ್ದಾರೆ. ಭಾರತೀಯ ಬಳಕೆದಾರರಿಗೆ ಆಯ್ಕೆಯ ಅವಕಾಶ ನೀಡದೆ ವಾಟ್ಸಾಪ್ ತನ್ನ ತೀರ್ಮಾನದಂತೆ ನಡೆದುಕೊಳ್ಳುತ್ತಿದೆ. ಇದನ್ನು ಕೇಂದ್ರ ಸರ್ಕಾರ ಗಮನಿಸಿದೆ ಎಂದು ಅವರು ಹೇಳಿದ್ದಾರೆ. ಫೇಸ್‌ಬುಕ್ ಮತ್ತು ವಾಟ್ಸಾಪ್ ಕಂಪೆನಿಗಳ ಪರವಾಗಿ ಹಿರಿಯ ನ್ಯಾಯವಾದಿಗಳಾದ ಮುಕುಲ್ ರೋಹಟ್ಗಿ, ಅರವಿಂದ್ ದಾತಾರ್ ಹಾಗೂ ಕಪಿಲ್ ಸಿಬಲ್ ಅವರು ವಾದ ಮಂಡಿಸಿದರು. ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯ ಫಲಿತಾಂಶ ಕಾದು ನೋಡಲು ನ್ಯಾಯಾಲಯ ಪ್ರಕರಣವನ್ನು ಮುಂದೂಡಿತು. ಕೇಂದ್ರ ಸರ್ಕಾರ ಪ್ರಕರಣವನ್ನು ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಟಿಸ್ ನೀಡಲು ನಿರಾಕರಿಸಿತು. ಮಾರ್ಚ್ 1ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ಖಾತ್ರಿಪಡಿಸಿಕೊಳ್ಳಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಸೋಮವಾರ ವಜಾಗೊಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ನಕಲಿ ಮತಗಳು ಹಾಗೂ ಮುಸ್ಲಿಂ ಮತದಾರರಿಂದ ತುಂಬಿಹೋಗಿರುತ್ತವೆ ಎಂದು ಆಕ್ಷೇಪಿಸಿ ದೆಹಲಿ ಮೂಲದ ವಕೀಲ ಪುನೀತ್ ಕೌರ್ ಧಂಡಾ ಅವರು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್, ಹೇಮಂತ್ ಗುಪ್ತಾ ಹಾಗೂ ಆರ್ ಸುಭಾಷ್ ರೆಡ್ಡಿ ಅವರಿದ್ದ ಪೀಠ ಇದು ಸಂವಿಧಾನದ 32ನೇ ವಿಧಿಗೆ ಸಂಬಂಧಿಸಿದ ಅರ್ಜಿ. ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗದು. ಅರ್ಜಿದಾರರು ಪಶ್ಚಿಮ ಬಂಗಾಳದವರು ಕೂಡ ಅಲ್ಲ ಎಂದು ತಿಳಿಸಿತು. ಅಲ್ಲದೆ ಅರ್ಜಿಯನ್ನು ವಜಾಗೊಳಿಸಿತು.