ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |9-6-2021

>> ಒಂದೂವರೆ ಲಕ್ಷ ವಾಹನಗಳ ಬಿಡುಗಡೆಗೆ ಆದೇಶ >> ವಿಚಾರಣೆಯ ಲೈವ್ ವರದಿಗಾರಿಕೆ ಅನುಮತಿ ಕುರಿತಂತೆ ಆದೇಶ ಕಾಯ್ದಿರಿಸಿದ ಹೈಕೋರ್ಟ್ >>ಕೋವಿಡ್‌: ಹೋಮಿಯೋಪಥಿಕ್‌ ವೈದ್ಯರು ಔಷಧ ಸಲಹೆ ಮಾಡಬಹುದು >> ಆರೋಪಿಯು ತಪ್ಪೊಪ್ಪಿಗೆ: ಮಾರ್ಗಸೂಚಿ ಬಿಡುಗಡೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |9-6-2021

ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ್ದ 1.5 ಲಕ್ಷ ವಾಹನಗಳ ಬಿಡುಗಡೆಗೆ ಆದೇಶಿಸಿದ ಕರ್ನಾಟಕ ಹೈಕೋರ್ಟ್‌

ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ವಶಪಡಿಸಿಕೊಂಡಿದ್ದ 1.5 ಲಕ್ಷ ವಾಹನಗಳ ಬಿಡುಗಡೆ ಮಾಡುವಂತೆ ಕರ್ನಾಟಕ ಹೈಕೋರ್ಟ್‌, ಆಯಾ ನ್ಯಾಯವ್ಯಾಪ್ತಿಯ ಪೊಲೀಸ್‌ ಅಧಿಕಾರಿಗಳಿಗೆ ಮಂಗಳವಾರ ಸೂಚಿಸಿದೆ. ಇಷ್ಟು ವಾಹನಗಳ ನಿಲುಗಡೆ ಮಾಡಲು ಪೊಲೀಸರಿಗೆ ಸೂಕ್ತ ಸ್ಥಳಾವಕಾಶ ದೊರೆಯುವುದು ಕಷ್ಟ ಎಂಬುದನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ವೇಳೆ ಗಮನಿಸಿತು.

Air pollution, cars
Air pollution, cars

ವಾಹನಗಳ ಬಿಡುಗಡೆಗೆ ಅವಕಾಶ ನೀಡುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ವಾಹನ ಮರಳಿಸುವಂತೆ ಮಾಲೀಕರು ನ್ಯಾಯಾಲಯಗಳ ಮೊರೆ ಹೋದರೆ ಕೆಳ ಹಂತದ ನ್ಯಾಯಾಲಯಗಳ ಹೊರೆ ಹೆಚ್ಚುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಇತ್ತ ಸರ್ಕಾರ ಇಡೀ ರಾಜ್ಯಕ್ಕೆ ಅನ್ವಯವಾಗುವಂತಹ ಪರಿಹಾರ ಬಯಸಿತ್ತು. ಈ ಹಿನ್ನೆಲೆಯಲ್ಲಿ ಆದೇಶ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ವಿಚಾರಣೆಯ ನೇರ ವರದಿಗಾರಿಕೆಗೆ ಅನುಮತಿ ಕೋರಿದ್ದ ಅರ್ಜಿ: ಆದೇಶ ಕಾಯ್ದಿರಿಸಿದ ಮಧ್ಯಪ್ರದೇಶ ಹೈಕೋರ್ಟ್‌

ನ್ಯಾಯಾಲಯದ ವಿಚಾರಣೆಯ ನೇರ ವರದಿಗಾರಿಕೆಗೆ ಅನುಮತಿ ನೀಡಲು ಮಧ್ಯಂತರ ಪರಿಹಾರ ಒದಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ ಕಾಯ್ದಿರಿಸಿತು. ಇದೇ ವೇಳೆ ನ್ಯಾಯಾಲಯು ʼನಿಮ್ಮ ವರದಿಗಾರಿಕೆಯ ಹಕ್ಕನ್ನು ಯಾರೂ ಪ್ರಶ್ನಿಸಲಾಗದುʼ ಎಂದು ಕೂಡ ಪೀಠ ತಿಳಿಸಿತು. ʼಮಧ್ಯಪ್ರದೇಶ ಹೈಕೋರ್ಟ್‌ ವೀಡಿಯೊ ಕಾನ್ಫರೆನ್ಸಿಂಗ್‌ ಮತ್ತು ದೃಶ್ಯ ಶ್ರವಣ ಎಲೆಕ್ಟ್ರಾನಿಕ್‌ ಸಂಪರ್ಕ ನಿಯಮ- 2020ʼನ್ನು ಪ್ರಶ್ನಿಸಿ ʼಬಾರ್‌ ಅಂಡ್‌ ಬೆಂಚ್‌ʼ ವರದಿಗಾರ ಸೇರಿದಂತೆ ನಾಲ್ವರು ಪತ್ರಕರ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಪತ್ರಕರ್ತರ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ನಿಧೇಶ್‌ ಗುಪ್ತಾ ಪತ್ರಕರ್ತರು ಕೇಳುತ್ತಿರುವುದು ಸಣ್ಣ ಸಂಗತಿ, ಹೈಕೋರ್ಟ್‌ನ ಕಲಾಪವನ್ನು ವೀಕ್ಷಿಸಲು ಅಗತ್ಯವಿರುವ ಲಿಂಕ್‌ ಕುರಿತಾದದ್ದು. ಕಾನೂನು ಪ್ರಕ್ರಿಯೆ ಕಾನೂನಿನ ಉದ್ದೇಶವನ್ನು ಸೋಲಿಸಲಾಗದು ಎಂದು ನಾನು ನಂಬುತ್ತೇನೆ ಎಂದರು. ಮಧ್ಯಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲ ಆದಿತ್ಯ ಅಧಿಕಾರಿ ಇತ್ತೀಚೆಗೆ ನಟಿ ಜೂಹಿ ಚಾವ್ಲಾ ಅಭಿಮಾನಿಗಳು ನ್ಯಾಯಾಲಯ ಕಲಾಪದ ನೇರ ಪ್ರಸಾರದ ವೇಳೆ ವಿಚಾರಣೆಗೆ ಅಡ್ಡಿಪಡಿಸಿದ್ದನ್ನು ಪ್ರಸ್ತಾಪಿಸಿದರು. ಎಲ್ಲಾ ವಾದಗಳನ್ನು ಆಲಿಸಿದ ಪೀಠ “ನ್ಯಾಯಾಲಯ ವ್ಯವಸ್ಥೆಗೆ ತೊಂದರೆಯಾಗದಂತೆ, ಆದರೆ ವ್ಯವಸ್ಥೆಯನ್ನು ಜನ ನೋಡುವಂತಾಗುವ ಪಾರದರ್ಶಕವಾದ ಒಂದು ವ್ಯವಸ್ಥೆ ವಿಕಾಸವಾಗುವಂತೆ ಮಾಡೋಣ” ಎಂದಿತು.

ಕೋವಿಡ್‌ ನಿಯಂತ್ರಣ ಮತ್ತು ರೋಗ ಲಕ್ಷಣ ಚಿಕಿತ್ಸೆಗೆ ಹೋಮಿಯೋಪಥಿ ವೈದ್ಯರು ಔಷಧ ಸಲಹೆ ಮಾಡಬಹುದು

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಔಷಧ ಸಲಹೆ ಮಾಡಲು ಅರ್ಹ ಹೋಮಿಯೋಪಥಿ ವೈದ್ಯರಿಗೆ ಕಳೆದ ವಾರ ಕೇರಳ ಹೈಕೋರ್ಟ್‌ ಅನುಮತಿಸಿದೆ. ಭಾರತ ಸರ್ಕಾರ ಹೊರಡಿಸಿರುವ ಹಲವು ಮಾರ್ಗಸೂಚಿ ಮತ್ತು ಹೈಕೋರ್ಟ್‌ ವಿಭಾಗೀಯ ಪೀಠಗಳು ಮತ್ತು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಪರಿಗಣಿಸಿ ನ್ಯಾಯಮೂರ್ತಿ ಎನ್‌ ನಗರೇಶ್‌ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿದೆ.

Kerala High Court, homoeopathy
Kerala High Court, homoeopathy

ಕೋವಿಡ್ ನಿಯಂತ್ರಿಸಲು ಹಾಗೂ ರೋಗನಿರೋಧಕ ಹೋಮಿಯೋಪತಿ ಔಷಧಿಗಳನ್ನು ಅರ್ಹವಾದ ಹೋಮಿಯೋಪತಿ ವೈದ್ಯರು ಶಿಫಾರಸ್ಸು ಮಾಡಬಹುದು ಮತ್ತು ವಿತರಿಸಬಹುದು. ಕೋವಿಡ್ ರೋಗಲಕ್ಷಣದ ನಿರ್ವಹಣೆಗಾಗಿ ಹೋಮಿಯೋಪತಿ ವೈದ್ಯರು ಹೋಮಿಯೋಪತಿಯನ್ನು ಆಶ್ರಯಿಸಬಹುದು ಸೇರಿದಂತೆ ಹಲವು ನಿರ್ದೇಶನಗಳನ್ನು ಪೀಠ ನೀಡಿದೆ.

ಒಂದೇ ಒಂದು ಪದವಾದ 'ಹೌದು' ಎಂಬುದನ್ನು ತಪ್ಪೊಪ್ಪಿಗೆ ಮನವಿಯಾಗಿ ಸ್ವೀಕರಿಸಲಾಗದು: ಕೇರಳ ಹೈಕೋರ್ಟ್‌

ನ್ಯಾಯಾಲಯದ ನಿರ್ದಿಷ್ಟ ಪ್ರಶ್ನೆಗೆ ಒಂದೇ ಒಂದು ಪದದಲ್ಲಿ ʼಹೌದುʼ ಎಂಬ ಉತ್ತರವನ್ನು ತಪ್ಪೊಪ್ಪಿಗೆ ಹೇಳಿಕೆಯಾಗಿ ಸ್ವೀಕರಿಸಲಾಗದು ಎಂದು ಮಂಗಳವಾರ ಕೇರಳ ಹೈಕೋರ್ಟ್‌ ಹೇಳಿದೆ. ಅಪರಾಧಕ್ಕೆ ಸಂಬಂಧಿಸಿದಂತೆ ಆರೋಪಿಯು ತಪ್ಪೊಪ್ಪಿಕೊಂಡಾಗ ಕೆಳಗಿನ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ನ್ಯಾಯಮೂರ್ತಿ ವಿ ಜಿ ಅರುಣ್‌ ಅವರಿದ್ದ ಏಕಸದಸ್ಯ ಪೀಠವು ಹಲವು ಅಂಶಗಳುಳ್ಳ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಆರೋಪಿಯ ವಿರುದ್ಧ ಮಾಡಲಾಗಿರುವ ಅಪರಾಧಗಳನ್ನು ಆಧರಿಸಿ ಮ್ಯಾಜಿಸ್ಟ್ರೇಟ್‌ ದೋಷಾರೋಪ ಸಿದ್ಧಪಡಿಸಬೇಕು ಮತ್ತು ಆರೋಪಗಳ ಗಂಭೀರತೆ ಹಾಗೂ ತಪ್ಪೊಪ್ಪಿಕೊಳ್ಳುವುದರಿಂದ ಎದುರಿಸಬೇಕಾದ ಪರಿಣಾಮಗಳನ್ನು ಅರ್ಥಮಾಡಿಕೊಂಡ ನಂತರವಷ್ಟೇ ಆರೋಪಿ ತಪ್ಪೊಪ್ಪಿಕೊಳ್ಳಬೇಕು. ತಪ್ಪೊಪ್ಪಿಗೆ ಮನವಿ ಸ್ವಯಂಪ್ರೇರಿತವಾಗಿರಬೇಕು ಮತ್ತು ಸ್ಪಷ್ಟ ಮತ್ತು ನಿಸ್ಸಂದಿಗ್ಧವಾಗಿರಬೇಕು. ಸಾಧ್ಯವಾದಷ್ಟು ಆರೋಪಿಯ ಮಾತಿನಲ್ಲಿಯೇ ಮನವಿಯನ್ನು ದಾಖಲಿಸಬೇಕು ಎಂಬುದೂ ಸೇರಿದಂತೆ ಹಲವು ಅಂಶಗಳ ಮಾರ್ಗಸೂಚಿಯನ್ನು ನ್ಯಾಯಾಲಯ ಹೊರಡಿಸಿದೆ. ಪರಪ್ಪನಂಗಡಿಯಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯನ್ನು ಆಲಿಸುವಾಗ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿದೆ.

Related Stories

No stories found.
Kannada Bar & Bench
kannada.barandbench.com