ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |17-3-2021
ಅಡುಗೆ ಮನೆ, ಉಪಾಹಾರ ಸ್ಥಳ, ಹುಲ್ಲುಹಾಸು, ವಾಹನದಲ್ಲಿ ಕುಳಿತು ವಕೀಲರು ಕಲಾಪದಲ್ಲಿ ಪಾಲ್ಗೊಳ್ಳುವಂತಿಲ್ಲ: ವಿಸಿ ವಿಚಾರಣೆಗೆ ಹೊಸ ಮಾರ್ಗಸೂಚಿ ಹೊರಡಿಸಿದ ಹೈಕೋರ್ಟ್
ವಿಡಿಯೋ ಕಾನ್ಫರೆನ್ಸ್ ಕಲಾಪದಲ್ಲಿ ಭಾಗವಹಿಸುವಾಗ ವಕೀಲರು/ಪಕ್ಷಕಾರರು ಗಂಭೀರವಾಗಿ ಪ್ರೊಟೊಕಾಲ್ ಅನ್ನು ಅನುಸರಿಸದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ನೂತನ ವಿಡಿಯೋ ಕಾನ್ಫರೆನ್ಸ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಮಾನ್ಯ ರೀತಿಯಲ್ಲಿ ನ್ಯಾಯಾಲಯದ ಕಲಾಪಗಳಲ್ಲಿ ವಕೀಲರು ಭಾಗವಹಿಸುವ ಮೂಲಕ ನ್ಯಾಯಾಲಯದ ಕಾರ್ಯಕಲಾಪ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. “ಮುಕ್ತ ನ್ಯಾಯಾಲಯದ ವಿಚಾರಣೆಯ ಬದಲಿಗೆ ವಿಡಿಯೋ ಕಾನ್ಫರೆನ್ಸ್ ಬಂದಿದೆ. ಸಾಮಾನ್ಯವಾಗಿ ನಡೆಯುವ ಕಲಾಪದ ಸಂಹಿತೆಯೇ ವಿಡಿಯೋ ಕಾನ್ಫರೆನ್ಸ್ ವಿಚಾರಣೆಗೂ ಅನ್ವಯಿಸುತ್ತದೆ” ಎಂದು ಹೇಳಲಾಗಿದೆ.
ನೂತನ ಮಾರ್ಗಸೂಚಿಯ ಪ್ರಕಾರ ವಕೀಲರು/ಪಕ್ಷಕಾರರು ಅಡುಗೆ ಮನೆ, ಉಪಾಹಾರ ಸೇವಿಸುವ ಸ್ಥಳ, ಹುಲ್ಲುಹಾಸು, ವಾಹನ ಅಥವಾ ಸಾರ್ವಜನಿಕ ಅಡೆತಡೆಗಳಿರುವ ಸ್ಥಳಗಳಲ್ಲಿ ನಿಂತು/ಕುಳಿತು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸುವಂತಿಲ್ಲ ಎಂದು ಹೇಳಲಾಗಿದೆ. “ನ್ಯಾಯಾಲಯಗಳ ಘನತೆ ಮತ್ತು ಅಲಂಕಾರಿಕತೆಗೆ ಅನುಗುಣವಾದ ಸ್ಥಳದಲ್ಲಿ ಕುಳಿತು ವೀಡಿಯೊ ಕಾನ್ಫರೆನ್ಸ್ ವಿಚಾರಣೆಯಲ್ಲಿ ಭಾಗವಹಿಸಬೇಕು” ಎಂದು ಪೀಠ ಹೇಳಿದೆ. ಕಲಾಪ ನಡೆಸುವ ಪೀಠದ ಘನತೆಗೆ ಧಕ್ಕೆಯಾಗಬಹುದಾದ ರೀತಿಯಲ್ಲಿ ಊಟ ಮಾಡುವಾಗ, ಫೋನ್ ಕರೆ ಸ್ವೀಕರಿಸುವುದು, ಮಕ್ಕಳ ಜೊತೆ ಮಾತನಾಡುವುದು ಅಥವಾ ನಿದ್ರಿಸುತ್ತಾ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಬಾರದು ಎಂದು ನ್ಯಾಯಾಲಯವು ಕಟ್ಟುನಿಟ್ಟಾಗಿ ಹೇಳಿದೆ.
ಟೂಲ್‌ಕಿಟ್ ಪ್ರಕರಣ: ಮಾಧ್ಯಮಗಳಿಗೆ ಮಾಹಿತಿ ಸೋರಿಕೆ - ದಿಶಾ ರವಿ ಮನವಿ ಸಂಬಂಧ ಕೇಂದ್ರ, ದೆಹಲಿ ಪೊಲೀಸ್‌ಗೆ ಅಂತಿಮ ಅವಕಾಶ ಕಲ್ಪಿಸಿದ ದೆಹಲಿ ಹೈಕೋರ್ಟ್
ರೈತರ ಹೋರಾಟದ ಜೊತೆ ತಳುಕು ಹಾಕಿಕೊಂಡಿರುವ ಟೂಲ್‌ಕಿಟ್ ಎಫ್‌ಐಆರ್ ಪ್ರಕರಣದ ವಿಚಾರಣಾ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಕುರಿತು ದಿಶಾ ರವಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಪ್ರತಿಕ್ರಿಯೆ ಸಲ್ಲಿಸಲು ಅಂತಿಮ ಅವಕಾಶ ಕಲ್ಪಿಸಿದೆ.
ಪ್ರತ್ಯುತ್ತರ ಮನವಿ ಸಲ್ಲಿಸಲು ಪ್ರತಿವಾದಿಗಳಿಗೆ ಕೊನೆಯ ಬಾರಿಗೆ ಎರಡು ವಾರಗಳ ಕಾಲಾವಕಾಶ ನೀಡಿರುವ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿದೆ. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿರುವ ಮಾಹಿತಿಯನ್ನು ತೆಗೆದುಹಾಕುವ ಸಂಬಂಧ ದಿಶಾ ಸಲ್ಲಿಸಿರುವ ಮಧ್ಯಂತರ ಕೋರಿಯನ್ನು ಪರಿಗಣಿಸಲಾಗುವುದು ಎಂದು ಪೀಠ ಹೇಳಿದೆ. ತನಿಖೆಯ ಮಾಹಿತಿ ಸೋರಿಕೆ ಮತ್ತು ಪೂರ್ವಾಗ್ರಹ ಪೀಡಿತ ಮಾಧ್ಯಮ ಹೇಳಿಕೆಯನ್ನು ಆಧರಿಸಿ ದೆಹಲಿ ಪೊಲೀಸರು ಮತ್ತು ಹಲವು ಮಾಧ್ಯಮ ಸಂಸ್ಥೆಗಳು ತಮ್ಮ ಮೇಲೆ ದಾಳಿ ನಡೆಸಿವೆ ಎಂದು ದಿಶಾ ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ. ಹೀಗೆ ಮಾಡುವ ಮೂಲಕ ತಮ್ಮ ನ್ಯಾಯಯುತವಾದ ವಿಚಾರಣೆಯ ಹಕ್ಕನ್ನು ಉಲ್ಲಂಘಿಸಿ, ನ್ಯಾಯಾದಾನದ ಆಡಳಿತಕ್ಕೆ ಧಕ್ಕೆಯುಂಟು ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಣಿಪುರ ಎನ್‌ಕೌಂಟರ್ ಹತ್ಯೆ: 'ಸಿಬಿಐ, ಕಾನೂನಿನ ಮೇಲೆ ಸವಾರಿ ಮಾಡಲು ಅನುಮತಿಸಲಾಗದು' ಅಮಿಕಸ್ ಕ್ಯೂರಿಯ ಮಿತಿ ಗುರುತಿಸುವಂತೆ ಸುಪ್ರೀಂ ಕೋರಿದ ಎಸ್‌ಜಿ ತುಷಾರ್ ಮೆಹ್ತಾ
ನ್ಯಾಯಾಲಯಕ್ಕೆ ಸಲಹೆ ನೀಡಲು ನೇಮಿಸಲಾಗುವ ಅಮಿಕಸ್ ಕ್ಯೂರಿಗಳ ಪಾತ್ರದ ಮಿತಿಯನ್ನು ಗುರುತಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರಿಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಸಶಸ್ತ್ರ ಮೀಸಲು ಪಡೆಗಳು ಕಾನೂನುಬಾಹಿರವಾಗಿ ಹತ್ಯೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದ ಮಣಿಪುರ ಎನ್‌ಕೌಂಟರ್ ಹತ್ಯೆ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸುವ ಸಂದರ್ಭದಲ್ಲಿ ಮೆಹ್ತಾ ಮನವಿ ಮಾಡಿದರು.
ಹಿರಿಯ ವಕೀಲೆ ಡಾ. ಮೇನಕಾ ಗುರುಸ್ವಾಮಿ ಅವರು ಸದರಿ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿದ್ದಾರೆ. ಪ್ರಕರಣದ ವಿಚಾರಣೆಗೆ ನೇಮಿಸಿದ್ದ ವಿಶೇಷ ತನಿಖಾ ದಳದಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಡಿಐಜಿ ಹುದ್ದೆಗೆ ಬಡ್ತಿ ಪಡೆದಿರುವುದರಿಂದ ತಮ್ಮನ್ನು ಎಸ್‌ಐಟಿಯಿಂದ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಪೀಠ ನಡೆಸಬೇಕಿತ್ತು. ಈ ಪ್ರಕರಣದಿಂದ ಅಧಿಕಾರಿಯನ್ನು ಬಿಡುಗಡೆ ಮಾಡುವ ಸಂಬಂಧ ಅಮಿಕಸ್ ಕ್ಯೂರಿ ಹೇಳುವುದು ಏನೂ ಇಲ್ಲ. “ಪ್ರತಿಯೊಂದು ಪ್ರಕರಣದಲ್ಲೂ ಇದು ನಡೆಯುತ್ತದೆ. ಕಾನೂನಿನ ಪ್ರಶ್ನೆ ಉದ್ಭವಿಸಿದಾಗ ಅವರು ಏನಾದರೂ ಹೇಳಬಹುದೇ ವಿನಾ ಬೇರೇನೂ ಇಲ್ಲ. ಇತರೆ ಪ್ರಕರಣಗಳಲ್ಲೂ ಇದು ನಡೆಯುತ್ತದೆ” ಎಂದು ಮೆಹ್ತಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ರಮಣ “ನೀವು ಹಿರಿಯ ಅಧಿಕಾರಿ ಮತ್ತು ಸಾಲಿಸಿಟರ್ ಜನರಲ್, ಅಮಿಕಸ್ ಏನು ಮಾಡುತ್ತಾರೆ ಎಂಬುದು ನಮಗೆ ಗೊತ್ತು. ಅದರ ಬಗ್ಗೆ ಚರ್ಚೆ ಬೇಕಿಲ್ಲ. ಪದನ್ನೋತಿ ಪಡೆದ ಅಧಿಕಾರಿಯ ಸ್ಥಳಕ್ಕೆ ಯಾರನ್ನು ನೇಮಿಸುತ್ತೀರಿ ತಿಳಿಸಿ” ಎಂದರು. “ಅಮಿಕಸ್ ಕ್ಯೂರಿಯ ಮಿತಿಯನ್ನು ಗುರುತಿಸಬೇಕು. ಅವರು ಸಿಬಿಐ ಅನ್ನು ನಿಯಂತ್ರಿಸಲಾಗದು” ಎಂದು ಮೆಹ್ತಾ ಹೇಳಿದರು. ಯಾವುದೇ ಆದೇಶ ಮಾಡದ ಪೀಠವು ಎಸ್‌ಐಟಿ ಅಧಿಕಾರಿಯನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಲು ಅನುಮತಿಸಿತು. ತುರ್ತಾಗಿ ಆ ಸ್ಥಾನವನ್ನು ತುಂಬುವಂತೆ ಕೇಂದ್ರಕ್ಕೆ ನ್ಯಾಯಾಲಯ ಆದೇಶಿಸಿದೆ.
ಆಕೆ ಸಮ್ಮಿತಿಸಿಲ್ಲ ಎಂದು ಹೇಳಿದರೆ ನ್ಯಾಯಾಲಯವು ಹಾಗೆ ಭಾವಿಸಿಕೊಳ್ಳುತ್ತದೆ: ಅತ್ಯಾಚಾರ ಆರೋಪಿ ಟಿವಿ ನಿರೂಪಕನಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ
ಅತ್ಯಾಚಾರ ಆರೋಪ ಎದುರಿಸುತ್ತಿರುವ ಟಿವಿ ನಿರೂಪಕನಾದ 28 ವರ್ಷದ ವರುಣ್ ಹಿರೇಮಠ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯನ್ನು ದೆಹಲಿ ನ್ಯಾಯಾಲಯವು ವಜಾಗೊಳಿಸಿದೆ. “ಆರೋಪಿಯ ವಿರುದ್ಧದ ಆರೋಪಗಳು ಹಾಗೂ ತನಿಖಾಧಿಕಾರಿ ಸಂಗ್ರಹಿಸಿರುವ ಸಾಕ್ಷಿಗಳು, ವಾಸ್ತವಿಕ ಅಂಶಗಳು ಮತ್ತು ಪರಿಸ್ಥಿತಿ, ಅಪರಾಧದ ಮಹತ್ವ ಹಾಗೂ ಚರ್ಚೆಯನ್ನು ಆಧರಿಸಿ… ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನನಗೆ ಇಷ್ಟವಿಲ್ಲ” ಎಂದು ಪಟಿಯಾಲ ಹೌಸ್ ಕೋರ್ಟ್‌ನಲ್ಲಿರುವ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜಯ್ ಖನಗ್ವಾಲ್ ಹೇಳಿದ್ದಾರೆ.
ಸಂಭೋಗವು ಒಪ್ಪಿಗೆಯ ಮೇಲೆ ನಡೆದಿದ್ದು, ತನ್ನನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡುವಂತೆ ಹಿರೇಮಠ ಕೋರಿದ್ದರು. ಮಹಿಳೆಯು ತಾನು ಸಲ್ಲಿಸಿರುವ ದೂರು ಮತ್ತು ಕ್ರಿಮಿನಲ್ ಅಪರಾಧ ಸಂಹಿತೆಯ ಸೆಕ್ಷನ್ 164ರ ಅಡಿ ಸಂಭೋಗವು ಒಪ್ಪಿತ ಎಂಬುದನ್ನು ಅಲ್ಲಗಳೆದಿದ್ದು, ಆರೋಪಿಯ ಆಕ್ರಮಣಕಾರಿ ನಡತೆ ಹೊಂದಿದ್ದು, ಹಲ್ಲೆ ಮಾಡಬಹುದು ಎಂದು ಅದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ ಎಂಬ ಮಹಿಳೆಯ ವಾದವನ್ನು ಪರಿಗಣಿಸಿದೆ. ಆನಂತರ ಉಭಯತ್ರರ ನಡುವೆ ನಡೆದಿರುವ ಸಂವಹನದಲ್ಲಿ ಆರೋಪಿಯು ತನ್ನ ನಡತೆಯ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿರುವುದನ್ನು ಪೀಠವು ಗಣನೆಗೆ ತೆಗೆದುಕೊಂಡಿದೆ.
ನಿರ್ದಿಷ್ಟ ಕಾಲಮಿತಿಯಲ್ಲಿ ನ್ಯಾಯಾಲಯದ ಆದೇಶಗಳನ್ನು ಪ್ರತಿದಿನ ಅಪ್‌ಲೋಡ್ ಮಾಡುವ ಕುರಿತಾದ ಮನವಿ: ಕೇಂದ್ರ, ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ದೆಹಲಿ ಹೈಕೋರ್ಟ್
ನಿರ್ದಿಷ್ಟ ಕಾಲಮಿತಿಯೊಳಗೆ ಪ್ರತಿ ದಿನ ನ್ಯಾಯಾಲಯದ ಆದೇಶಗಳನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಸಂಬಂಧ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ದೆಹಲಿ ವಕೀಲರ ಪರಿಷತ್‌ನಲ್ಲಿ ನೋಂದಾಯಿಸಿಕೊಂಡಿರುವ ವಕೀಲ, ಅರ್ಜಿದಾರರಾದ ಸನ್ಸೀರ್ ಪಾಲ್ ಸಿಂಗ್ ಅವರು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ನ್ಯಾಯಾಲಯದ ಆದೇಶಗಳನ್ನು ಅಪ್‌ಲೋಡ್ ಮಾಡದೇ ಇರುವುದರಿಂದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. “ಗೌರವಾನ್ವಿತ ನ್ಯಾಯಾಲಯದ ವೆಬ್‌ಸೈಟ್/ಪೋರ್ಟಲ್‌ನಲ್ಲಿ ಆದೇಶಗಳನ್ನು ಅಪ್‌ಲೋಡ್ ಮಾಡದೇ ಇರುವುದರಿಂದ ಆದೇಶಗಳನ್ನು ಓದಲು ಅರ್ಜಿದಾರರು ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಇದು ಅರ್ಜಿದಾರರು, ನ್ಯಾಯಾಲಯಗಳು ಮತ್ತು ನ್ಯಾಯಾಲಯದ ಸಿಬ್ಬಂದಿಯ ಸಮಯ ತಿನ್ನುತ್ತಿದೆ. ಅಲ್ಲದೇ ಕಾಗದ ಮತ್ತು ನ್ಯಾಯಾಲಯದ ಶುಲ್ಕವನ್ನೂ ಪಾವತಿಸಬೇಕಿದೆ” ಎಂದು ಹೇಳಿದ್ದಾರೆ. ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು ನೋಟಿಸ್ ಜಾರಿಗೊಳಿಸಿದ್ದು, ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಪ್ರತಿಕ್ರಿಯಿಸುವಂತೆ ಸೂಚಿಸಿದ್ದಾರೆ. ವಿಚಾರಣೆಯನ್ನು ಏಪ್ರಿಲ್ 30ಕ್ಕೆ ಮುಂದೂಡಿದ್ದಾರೆ.