ಸಿಆರ್‌ಪಿಸಿ ಅಡಿಯ ಅಪರಾಧಗಳಿಗೆ ಸಂಬಂಧಿಸಿದಂತೆ ದೊರೆಯುವ ಪರಿಹಾರ ಕುರಿತು ಕೇರಳ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದ್ದು ಅದರಂತೆ ನಿಬಂಧನೆಗಳು ಜಾರಿಯಾಗುವ ಮೊದಲೇ ಸಂತ್ರಸ್ತರಾಗಿದ್ದವರಿಗೆ ಕೂಡ ಪರಿಹಾರ ಮೊತ್ತ ದೊರೆಯಲಿದೆ. ಇದೆ ಸಂದರ್ಭದಲ್ಲಿ ಪೀಠ, ಸಿಆರ್‌ಪಿಸಿಯ 357 ಎ (4) ಸೆಕ್ಷನ್ ವ್ಯಾಖ್ಯಾನಿಸುವಾಗ, ನ್ಯಾಯಾಲಯಗಳು ಸಂತ್ರಸ್ತರ ಸಂಕಟದ ಮುಖ ಮರೆಯಲು ಸಾಧ್ಯವಿಲ್ಲ. ಅಪರಾಧಿಗಳನ್ನು ಗುರುತಿಸಲು ಸಾಧ್ಯವಾಗದ ಸಂದರ್ಭದಲ್ಲಿ, ಪತ್ತೆ ಹಚ್ಚಲು ಆಗದಿದ್ದಾಗ ಅಥವಾ ವಿಚಾರಣೆ ನಡೆಯದ ಸಂದರ್ಭದಲ್ಲಿ ಸಂತ್ರಸ್ತರು ಅನುಭವಿಸಿದ ಆಘಾತ, ತೊಂದರೆ ದೊಡ್ಡದು ಎಂಬುದಾಗಿ ಹೇಳಿದೆ.
2008ರಲ್ಲಿ ನಡೆದ ಮೋಟಾರು ಅಪಘಾತವೊಂದರಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಲಪ್ಪುಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಸರ್ಕಾರ ಅರ್ಜಿ ಸಲ್ಲಿಸಿತ್ತು. ನ್ಯಾ. ಬೆಚು ಕುರಿಯನ್ ಥಾಮಸ್ ಅವರಿದ್ದ ಪೀಠ ಪ್ರಕರಣದ ವಿಚಾರಣೆಗೂ ಮುನ್ನವೇ ಈ ತೀರ್ಪು ನೀಡಿ ಅರ್ಜಿಯನ್ನು ತಿರಸ್ಕರಿಸಿದೆ. ಅಲ್ಲದೆ ಪರಿಹಾರ ಧನ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತನ್ನ ಪದಾಧಿಕಾರಿಗಳ ಆಯ್ಕೆಗಾಗಿ ಮೊಟ್ಟ ಮೊದಲ ಬಾರಿಗೆ ವರ್ಚುವಲ್ ರೂಪದಲ್ಲಿ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ವಕೀಲರ ಸಂಘ (ಎಸ್‌ಸಿಬಿಎ) ಸಜ್ಜಾಗಿದೆ. 2021ರ ಜನವರಿಯಲ್ಲಿ ಮತದಾನ ನಡೆಯಬೇಕೆಂದರೆ ಅದನ್ನು ಎನ್‌ಎಸ್‌ಡಿಎಲ್ ನ (ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟಿರಿ ಲಿಮಿಟೆಡ್) ಇ ವೋಟಿಂಗ್ ಪ್ಲಾಟ್‌ಫಾರ್ಮ್ ಬಳಸಿ ವರ್ಚುವಲ್ ರೂಪದಲ್ಲಿ ನಡೆಸಬೇಕು ಎಂದು ಎಸ್‌ಸಿಬಿಎ ಚುನಾವಣಾ ಸಮಿತಿ ಸೂಚಿಸಿದೆ. ವಾರ್ಷಿಕ ಮತದಾನದ ಮೂಲಕ ವಕೀಲರ ಸಂಘವನ್ನು ನಿಯಂತ್ರಿಸುವ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಚುನಾಯಿಸುವ ಪರಿಪಾಠ ಇದೆ.
ಕೊರೊನಾ ಹಾವಳಿ ನಡುವೆ ಮತದಾರರು ಮತ್ತು ಸ್ವಯಂಸೇವಕರು ಭೌತಿಕವಾಗಿ ಹಾಜರಿರಬೇಕಾಗುತ್ತದೆ ಎಂಬ ಕಾರಣಕ್ಕೆ ಭೌತಿಕ ಚುನಾವಣೆ ನಡೆಸುವ ಆಯ್ಕೆಯನ್ನು ಸಮಿತಿ ತಿರಸ್ಕರಿಸಿತು. ಚುನಾವಣೆಯನ್ನು ವರ್ಚುವಲ್ ಆಗಿ ನಡೆಸುವ ಸಂಬಂಧ ಸಮಿತಿ ಈಗಾಗಲೇ ಎನ್‌ಎಸ್‌ಡಿಎಲ್ ಜೊತೆ ಮಾತುಕತೆ ನಡೆಸಿದೆ. ಸಂಪೂರ್ಣ ಸುರಕ್ಷಿತ ರೀತಿಯಲ್ಲಿ ಚುನಾವಣೆ ನಡೆಸಲು ಎನ್‌ಎಸ್‌ಡಿಎಲ್ ಒಪ್ಪಿಕೊಂಡಿದೆ ಎಂದು ಅದು ತಿಳಿಸಿದೆ. ಮತದಾರರ ಪಟ್ಟಿ ಸಿದ್ಧವಾದ ಬಳಿಕ ಚುನಾವಣಾ ವೇಳಾಪಟ್ಟಿ ಘೋಷಿಸಲಾಗುತ್ತದೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿರುವ ಸುಧಾ ಭಾರದ್ವಾಜ್ ಅವರಿಗೆ ಅಪರಿಷ್ಕೃತ ಸಾಕ್ಷಿಗಳ ಹೇಳಿಕೆಯನ್ನು ಪೂರೈಸುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಮುಂಬೈನಲ್ಲಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ನಿರ್ದೇಶಿಸಿದೆ.
ಸಾಕ್ಷಿಗಳ ಗುರುತು ಮತ್ತು ವಿಳಾಸಗಳನ್ನು ಮಾತ್ರವೇ ಮರೆಮಾಚಿ (ರೆಡಾಕ್ಟ್) ಉಳಿದಂತೆ ಅವರ ಹೇಳಿಕೆಗಳನ್ನು ಪರಿಷ್ಕರಣೆಗೆ ಒಳಪಡಿಸದೆ, ಸಂಕ್ಷಿಪ್ತಗೊಳಿಸದೇ ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಸಾಕ್ಷಿಗಳ ಪೂರ್ಣ ಹೇಳಿಕೆಗಳನ್ನು ನೀಡುವಂತೆ ಕೋರಿ ಸುಧಾ ಭಾರದ್ವಾಜ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಹಿಂದೆ ಪೂರೈಸಲಾದ ಸಾಕ್ಷಿಗಳ ಹೇಳಿಕೆಯನ್ನು ಪರಿಷ್ಕರಣೆಗೆ ಒಳಪಡಿಸಿದ್ದರಿಂದ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಲಾಗುತ್ತಿರಲಿಲ್ಲ ಎಂದು ಭಾರದ್ವಾಜ್ ತಕರಾರು ಎತ್ತಿದ್ದಾರೆ. ಪರಿಷ್ಕರಣೆಗೆ ಒಳಪಡಿಸಿದ ಹೇಳಿಕೆ ಪೂರೈಸುವ ಮೂಲಕ ಸಾಂವಿಧಾನಿಕವಾಗಿ ತನಗೆ ದೊರೆತಿರುವ ಮುಕ್ತ ವಿಚಾರಣೆ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ವಕೀಲರಾದ ರಾಗಿಣಿ ಅಹುಜಾ ಮತ್ತು ಚಾಂದಿನಿ ಚಾವ್ಲಾ ಅವರು ಅಹವಾಲು ಸಲ್ಲಿಸಿದ್ದರು.
ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ನಡೆಸುವ ಪ್ರಕ್ರಿಯೆ ಆರಂಭವಾಗಿರುವುದು ಅತ್ಯುತ್ತಮ ಬೆಳವಣಿಗೆ ಎಂದಿರುವ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಗೌತಮ್ ಪಟೇಲ್ ಅವರು ಕೋವಿಡ್ ನಂತರ ನ್ಯಾಯಮೂರ್ತಿಗಳು ಬಯಸಿದರೆ ವರ್ಚುವಲ್ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದ್ದಾರೆ.
ಕ್ಷಿಪ್ರ ನ್ಯಾಯದಾನದ ಒಕ್ಕೂಟ, ಆಡಳಿತಕ್ಕಾಗಿ ಸಾರ್ವಜನಿಕ ಕಳಕಳಿಯ ಟ್ರಸ್ಟ್ (ಪಿಸಿಜಿಟಿ) ಮತ್ತು ಕ್ಷಿಪ್ರ ನ್ಯಾಯದಾನಕ್ಕೆ ಆಗ್ರಹಿಸುವ ಸಮಾಜಗಳ ರಾಷ್ಟ್ರೀಯ ಒಕ್ಕೂಟ ಜಂಟಿಯಾಗಿ ಆಯೋಜಿಸಿದ್ದ “ವರ್ಚುವಲ್ ನ್ಯಾಯಾಲಯಗಳ ದೃಷ್ಟಿಕೋನ” ಎಂಬ ವೆಬಿನಾರ್‌ನಲ್ಲಿ ನ್ಯಾ. ಪಟೇಲ್ ಮಾತನಾಡಿದರು. ವರ್ಚುವಲ್ ನ್ಯಾಯಾಲಯಗಳು ಭೌತಿಕ ನ್ಯಾಯಾಲಯಗಳಿಗೆ ಪರ್ಯಾಯವಲ್ಲ ಎಂದು ಸ್ಪಷ್ಟಪಡಿಸಿರುವ ಅವರು ನ್ಯಾಯಮೂರ್ತಿಗಳಿಗೆ ಅದು ಆಯ್ಕೆಯಾಗಿ ಉಳಿಯಬೇಕು ಎಂದಿದ್ದಾರೆ.