ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು (ಬೆಳೆ ವಿಮಾ ಯೋಜನೆ) ತಲುಪಿಸುವಲ್ಲಿ ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ಎಸ್ ಮಗದುಮ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ʼಸಂಪೂರ್ಣ ಅಸೂಕ್ಷ್ಮತೆʼಯಿಂದ ವರ್ತಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ರಾಜ್ಯದ ಶಹಾಪುರ ತಾಲೂಕಿನಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಬೆಳೆ ವಿಮಾ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರೈತರ ಕುಟುಂಬಗಳಿಂದ ಯಾವುದೇ ದೂರು ಬಂದಿಲ್ಲ ಎಂದು ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಿತ್ತು. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿಯೇ ಹತ್ತು ರೈತರು ಅಹವಾಲು ಸಲ್ಲಿಸಿದ್ದಾರೆ ಎಂದು ನ್ಯಾಯಾಲಯ ಸರ್ಕಾರಕ್ಕೆ ನೆನಪಿಸಿತು. ಯಾವುದೇ ದೂರು ಬಂದಿಲ್ಲ ಎಂಬ ಸರ್ಕಾರದ ಹೇಳಿಕೆ ಸಂಪೂರ್ಣ ತಪ್ಪು ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಈ ನಿಟ್ಟಿನಲ್ಲಿ, ಬೆಳೆ ವಿಮಾ ಯೋಜನೆಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಒಂದು ವಾರದ ಅವಧಿಯಲ್ಲಿ ಸಂಬಂಧಪಟ್ಟ ಸಮಿತಿಗಳಿಗೆ ಸಲ್ಲಿಸುವಂತೆ ಪೀಠ ಸೂಚಿಸಿದೆ. ಇದೇ ವೇಳೆ ರೈತರ ವಿಮಾ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದರೂ ಯೋಜನೆಯ ಫಲ ದೊರೆಯದ 189 ರೈತರ ಸಮಸ್ಯೆಯನ್ನು ಕೂಡ ನ್ಯಾಯಾಲಯ ಪರಿಶೀಲಿಸಿತು. ಬ್ಯಾಂಕ್ ಖಾತೆಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕೆ ಅರ್ಹ ರೈತರಿಗೆ ರಾಜ್ಯ ಹಣ ಬಿಡುಗಡೆ ಮಾಡಿಲ್ಲ ಎಂಬುದು ಇದೇ ವೇಳೆ ಪೀಠದ ಗಮನಕ್ಕೆ ಬಂದಿತು. ಪ್ರಕರಣವನ್ನು ಫೆ 12ಕ್ಕೆ ಮುಂದೂಡಲಾಗಿದೆ.
ನ್ಯಾಯಾಲಯದ ಕಲಾಪವನ್ನು ನೇರ ಪ್ರಸಾರ (ಲೈವ್‌ಸ್ಟ್ರೀಮ್) ಮಾಡುವಂತೆ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ಕಾನೂನು ವಿದ್ಯಾರ್ಥಿ ದಿಲೀಪ್ ಕುಮಾರ್ ಸಲ್ಲಿಸಿರುವ ಮನವಿಯಲ್ಲಿ ನ್ಯಾಯಾಲಯ ಕಲಾಪದ ನೇರ ಪ್ರಸಾರವು ಮಾಹಿತಿ ಅರಸುವ, ಸ್ವೀಕರಿಸುವ ಹಕ್ಕಿನ ಭಾಗವಾಗಿದೆ. ಸಂವಿಧಾನದ 19(1)(ಎ) ವಿಧಿಯಡಿ ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ.
ನ್ಯಾಯಾಲಯ ಕಲಾಪದ ನೇರ ಪ್ರಸಾರ ಮಾಡುವುದರಿಂದ ನ್ಯಾಯದಾನಕ್ಕೆ ಪ್ರವೇಶಿಕೆ ಹೆಚ್ಚಾಗಲಿದೆ. ಇದು ಸಾರ್ವಜನಿಕ ವಲಯದಲ್ಲಿ ಕಾನೂನು ವ್ಯವಸ್ಥೆಯ ಮೇಲೆ ತಿಳಿವಳಿಕೆ ಮೂಡಿಸುತ್ತದೆ. ನ್ಯಾಯಾಲಯ ಕಲಾಪವನ್ನು ನೇರ ಪ್ರಸಾರ ಮಾಡುವುದರಿಂದ ಮುಕ್ತ ನ್ಯಾಯಾಲಯದ ಪರಿಕಲ್ಪನೆ ಸಕಾರ ಸಾಧ್ಯವಾಗಲಿದೆ.
ವಾಟ್ಸ್‌ಆಪ್ ಸುಧಾರಿತ ಖಾಸಗಿ ನೀತಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ವಾಟ್ಸ್‌ಅಪ್ ನೀತಿಯು ಖಾಸಗಿ ಹಕ್ಕನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ ಎಂದು ವಕೀಲ ಚೈತನ್ಯ ರೊಹಿಲ್ಲಾ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.
ಯಾವುದೇ “ಸರ್ಕಾರದ ಮೇಲ್ವಿಚಾರಣೆ” ಇಲ್ಲದೆ, ಹೊಸ ನೀತಿಯು “ವ್ಯಕ್ತಿಯ ಆನ್‌ಲೈನ್ ಚಟುವಟಿಕೆಯಲ್ಲಿ ಸಂಪೂರ್ಣ ಪ್ರೊಫೈಲ್ ಅನ್ನು ನೀಡುತ್ತದೆ” ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಸುಧಾರಿತ ಗೌಪ್ಯತೆ ನೀತಿಯು ಬಳಕೆದಾರರು ತಮ್ಮ ದತ್ತಾಂಶವನ್ನು ಫೇಸ್‌ಬುಕ್ ಒಡೆತನದ ಇತರೆ ಅಪ್ಲಿಕೇಶನ್‌ಗಳು ಮತ್ತು ತೃತೀಯ ಅಪ್ಲಿಕೇಶನ್‌ಗಳೊಂದಿಗೆ ಹಂಚಿಕೊಳ್ಳದಿರುವ "ಆಯ್ಕೆಯನ್ನುಕಸಿದುಕೊಳ್ಳುತ್ತದೆ" ಎಂಬುದು ಅರ್ಜಿದಾರರ ಕಳವಳವಾಗಿದೆ. ದತ್ತಾಂಶವನ್ನು ಎಷ್ಟರಮಟ್ಟಿಗೆ ಹಂಚಿಕೊಳ್ಳಲಾಗುವುದು ಮತ್ತು ಬಳಕೆದಾರರ ಸೂಕ್ಷ್ಮ ದತ್ತಾಂಶದೊಂದಿಗೆ ಏನು ಮಾಡಲಾಗುವುದು ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ವಿವರಿಸಲಾಗಿದೆ.