ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 27-10-2020

>>ಚುನಾವಣಾ ಬಾಂಡ್ ಪ್ರಕರಣ >>ಕಂಗನಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ >>ತೇಜಪಾಲ್‌ ವಿಚಾರಣಾ ಗಡುವು ವಿಸ್ತರಣೆ >> ವೊಡಾಫೋನ್‌ ತೆರಿಗೆ ಪ್ರಕರಣ >>ವಕೀಲರ ಪ್ರಾಕ್ಟೀಸ್‌ ಹಕ್ಕಿನ ಪ್ರಕರಣ >> ಸಿಎ ಪರೀಕ್ಷೆ ನ. 2ಕ್ಕೆ ವಿಚಾರಣೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 27-10-2020

ಚುನಾವಣಾ ಬಾಂಡ್‌ಗಳು: ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ತುರ್ತು ವಿಚಾರಣೆಗೆ ಅರ್ಜಿ ಸಲ್ಲಿಕೆ

ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಬಾಕಿ ಇರುವ ಸವಾಲಿನ ತುರ್ತು ವಿಚಾರಣೆ ಕೋರಿ ಸುಪ್ರೀಂಕೋರ್ಟ್‌ಗೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಸಂಸ್ಥೆ, ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರ ಮೂಲಕ ಅರ್ಜಿ ಸಲ್ಲಿಸಿದೆ.

Electoral Bonds
Electoral Bonds

ʼರಾಜಕೀಯ ಪಕ್ಷಗಳ ಅಕ್ರಮ ಹಾಗೂ ವಿದೇಶಿ ಧನಸಹಾಯದಿಂದಾಗಿ ಭ್ರಷಾಚಾರದ ಜೊತೆಗೆ ಪ್ರಜಾಪ್ರಭುತ್ವದ ಅಧಃಪತನ ಉಂಟಾಗುತ್ತಿದ್ದು ರಾಜಕೀಯ ಪಕ್ಷಗಳ ಹೊಣೆಗಾರಿಕೆಯಲ್ಲಿ ಪಾರದರ್ಶಕತೆಯ ಕೊರತೆ ಕಾಣುತ್ತಿದೆʼ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ಈ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕಿದ್ದು ಕೊನೆಯ ವಿಚಾರಣೆ ಸುಮಾರು ಒಂಬತ್ತು ತಿಂಗಳ ಹಿಂದೆ ನಡೆದಿತ್ತು ಎಂದು ತಿಳಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಚುನಾವಣಾ ಬಾಂಡ್‌ ಮಾರಾಟಕ್ಕೆ ಅವಕಾಶ ನೀಡಿಲ್ಲ ಬದಲಿಗೆ ಬಿಹಾರ ಚುನಾವಣೆ ಸನಿಹ ಇರುವಾಗ ಅವುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ವಿವರಿಸಲಾಗಿದೆ.

ನಟಿ ಕಂಗನಾ ವಿರುದ್ಧ ನ್ಯಾಯಾಂಗ ನಿಂದನೆ: ಅಡ್ವೊಕೇಟ್‌ ಜನರಲ್‌ ಅನುಮತಿ ಕೋರಿದ ಮುಂಬೈ ವಕೀಲ

ನ್ಯಾಯಾಂಗವನ್ನು ʼಪಪ್ಪು ಸೇನಾʼ ಎಂದು ಕರೆದಿರುವ ನಟಿ ಕಂಗನಾ ರನೌತ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ನೀಡುವಂತೆ ಕೋರಿ ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರಿಗೆ ಮುಂಬೈ ಮೂಲದ ವಕೀಲ ಅಲಿ ಕಾಶಿಫ್‌ ಖಾನ್‌ ದೇಶಮುಖ್‌ ಪತ್ರ ಬರೆದಿದ್ದಾರೆ.

Kangana Ranaut, AG Ashutosh Kumbhakoni
Kangana Ranaut, AG Ashutosh Kumbhakoni

ತಮ್ಮ ಟ್ವಿಟರ್‌ ಹ್ಯಾಂಡಲ್‌ ಮೂಲಕ ನವರಾತ್ರಿ ಸಂದರ್ಭದ ಮಾಹಿತಿ ಹಂಚಿಕೊಂಡಿದ್ದ ಕಂಗನಾ, ʼ…ನನ್ನ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ. ಮಹಾರಾಷ್ಟ್ರದ ಪಪ್ಪುಸೇನಾ ನನ್ನ ಬೆನ್ನುಬಿಡುತ್ತಿಲ್ಲ…ʼ ಎಂದು ಹೇಳಿದ್ದರು. ಸರ್ಕಾರ, ಸರ್ಕಾರಿ ಸಂಸ್ಥೆಗಳು ಮತ್ತು ನ್ಯಾಯಾಂಗದ ವಿರುದ್ಧ ಕಂಗನಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಧರ್ಮಗಳ ನಡುವೆ ದ್ವೇಷ ಬಿತ್ತುವಂತಹ ದುರುದ್ದೇಶಪೂರ್ವಕ ಮಾತುಗಳನ್ನು ಅವರು ಆಡುತ್ತಿದ್ದಾರೆ ಎಂದು ದೇಶಮುಖ್‌ ಪತ್ರದಲ್ಲಿ ತಿಳಿಸಿದ್ದಾರೆ.

ತರುಣ್‌ ತೇಜ್‌ಪಾಲ್‌ ವಿಚಾರಣೆ:‌ 2021ರ ಮಾರ್ಚ್‌ವರೆಗೆ ಗಡುವು ವಿಸ್ತರಿಸಿದ ಸುಪ್ರೀಂಕೋರ್ಟ್

ಪತ್ರಕರ್ತ ತರುಣ್ ತೇಜ್‌ಪಾಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಯ ಗಡುವನ್ನು 2021ರ ಮಾರ್ಚ್‌ 31ರವರೆಗೆ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಹಿಂದೆ ಪ್ರಸಕ್ತ ವರ್ಷದ ಡಿ. 31ಕ್ಕೆ ಗಡುವು ವಿಧಿಸಲಾಗಿತ್ತು.

Tarun Tejpal, Supreme Court
Tarun Tejpal, Supreme Court

ವಿಚಾರಣೆ ಪೂರ್ಣಗೊಳಿಸಲು ಒಂದು ವರ್ಷದ ವಿಸ್ತರಣೆ ಕೋರಿ ಗೋವಾ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಗಡುವಿನ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸಿದೆ. ತೇಜ್‌ಪಾಲ್‌ ಪರ ವಕೀಲರಾದ ಕಪಿಲ್‌ ಸಿಬಲ್‌ ಅವರ ಬಲವಾದ ಆಕ್ಷೇಪಣೆಯ ಹೊರತಾಗಿಯೂ ಈ ಆದೇಶ ಜಾರಿ ಮಾಡಲಾಗಿದೆ.

ವೊಡಾಫೋನ್‌ ತೆರಿಗೆ ಪ್ರಕರಣದಲ್ಲಿ ಪಿಸಿಎ ತೀರ್ಪನ್ನು ಪ್ರಶ್ನಿಸುವಂತೆ ಕೇಂದ್ರ ಸರ್ಕಾರಕ್ಕೆ ಸಾಲಿಸಿಟರ್‌ ಜನರಲ್ ಸಲಹೆ ‌

ವೊಡಾಫೋನ್ ತೆರಿಗೆ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯ (ಪಿಸಿಎ) ವೊಡಾಫೋನ್‌ ಪರವಾಗಿ ನೀಡಿದ್ದ ತೀರ್ಪನ್ನು ಪ್ರಶ್ನಿಸುವಂತೆ ಕೇಂದ್ರ ಸರ್ಕಾರಕ್ಕೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅಭಿಪ್ರಾಯ ಸಲ್ಲಿಸಿದ್ದಾರೆ.

Solicitor General of India, Tushar Mehta
Solicitor General of India, Tushar Mehta

ಸಾರ್ವಭೌಮ ರಾಷ್ಟ್ರವೊಂದರ ಸಂಸತ್ತಿನಿಂದ ಅಂಗೀಕಾರವಾದ ಶಾಸನವನ್ನು ಪ್ರಶ್ನಿಸಿರುವ ಮುಕ್ತ ನ್ಯಾಯಮಂಡಳಿಯ ತೀರ್ಪು ಕಾರ್ಯಗತಗೊಳಿಸಲಾಗದಂತೆ ಇದ್ದು ಇದೇ ಸ್ವತಃ ಪ್ರಶ್ನಿಸಬೇಕಾದ ಸಂಗತಿಯಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ದೇಶದ ಹಿತಾಸಕ್ತಿ ರಕ್ಷಿಸಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಆರಂಭಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ತೀರ್ಪನ್ನು ಪ್ರಶ್ನಿಸಲು ದೆಹಲಿ ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ ಮೊರೆ ಹೋಗುವ ಬದಲು ಸಿಂಗಪುರ್‌ನಲ್ಲಿರುವ ನ್ಯಾಯಾಂಗ ವೇದಿಕೆಯನ್ನು ಸಂಪರ್ಕಿಸುವಂತೆ ಅವರು ಮಾರ್ಗದರ್ಶನ ಮಾಡಿದ್ದಾರೆ. ವೋಡಾಫೋನ್‌ ನ ಮಧ್ಯಸ್ಥಿಕೆ ವಿಚಾರಣಾ ವ್ಯಾಪ್ತಿಯು ಸಿಂಗಪೂರ್‌ ಗೆ ಒಳಪಟ್ಟಿದೆ.

ಚಾರ್ಟರ್ಡ್‌ ಅಕೌಂಟೆಂಟ್‌ ಪರೀಕ್ಷೆ: ನ.2ರಂದು ಅರ್ಜಿ ವಿಚಾರಣೆ

ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ವತಿಯಿಂದ ಈ ವರ್ಷ ನಡೆಯಲಿರುವ ಚಾರ್ಟರ್ಡ್‌ ಅಕೌಂಟ್‌ ಪರೀಕ್ಷೆಗಳಿಗೆ ಪ್ರಮಾಣಿತ ಕಾರ್ಯಾಚರಣಾ ಪ್ರಕ್ರಿಯೆಯನ್ನು (ಎಸ್ಒಪಿ) ಅಳವಡಿಸಿಕೊಳ್ಳಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ.2ರಂದು ನಡೆಸುವುದಾಗಿ ಸುಪ್ರೀಂಕೋರ್ಟ್‌ ಮಂಗಳವಾರ ತಿಳಿಸಿದೆ.

CA exams 2020
CA exams 2020

ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹೊರಡಿಸಲಾದ ಆರೋಗ್ಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರೀಕ್ಷೆ ನಡೆಸಲು ಐಸಿಎಐ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಈ ಸಾಲಿನ ಸಿಎ ಪರೀಕ್ಷೆಗಳು ನವೆಂಬರ್ 21 ರಿಂದ ಪ್ರಾರಂಭವಾಗಲಿದೆ.

ನೋಂದಣಿ ಬಳಿಕವೂ ವಕೀಲರ ಪ್ರಾಕ್ಟೀಸ್‌ ಹಕ್ಕು ಬಿಸಿಐ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಎಂದ ಮಧ್ಯಪ್ರದೇಶ ಹೈಕೋರ್ಟ್‌

ನೋಂದಣಿ ಬಳಿಕವೂ ವಕೀಲರ ಪ್ರಾಕ್ಟೀಸ್‌ ಹಕ್ಕು ಭಾರತೀಯ ವಕೀಲರ ಮಂಡಳಿಯ (ಬಿಸಿಐ) ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಪುನರುಚ್ಚರಿಸಿದೆ. ನಿಯಮಗಳನ್ನು ರೂಪಿಸುವ ಅಧಿಕಾರ 1961ರ ನ್ಯಾಯವಾದಿಗಳ ಕಾಯಿದೆಯ ಸೆಕ್ಷನ್‌ 49ರಂತೆ ಭಾರತೀಯ ವಕೀಲ ಮಂಡಳಿಗೆ ಇದೆ ಎಂದು ಅದು ಸ್ಪಷ್ಟಪಡಿಸಿ ಅರ್ಜಿದಾರರಾದ ಚಂಚಲ್‌ ತಿವಾರಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

Lawyers
Lawyers

ಜಬಲ್‌ಪುರ ಮತ್ತು ಭೋಪಾಲ್ ಪರೀಕ್ಷಾ ಕೇಂದ್ರಗಳಲ್ಲಿ 2019ರ ಎಐಬಿಇ ಫಲಿತಾಂಶವನ್ನು ಬಿಸಿಐ ಘೋಷಿಸದೇ ಇದ್ದುದನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ನಿಯಮದ ಸಿಂಧುತ್ವವನ್ನು ಪ್ರಶ್ನಿಸಿದ್ದ ಅವರು ನೋಂದಣಿಯಾದ ವಕೀಲರನ್ನು ಪ್ರಾಕ್ಟೀಸ್‌ನಿಂದ ವಂಚಿತರನ್ನಾಗಿ ಮಾಡುವುದು ಬಿಸಿಐನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ವಾದಿಸಿದ್ದರು.

Related Stories

No stories found.