ಅಂಧ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. ರಾಜ್ಯ ಸರ್ಕಾರವು 2014ರಲ್ಲಿ ಜಾರಿಗೊಳಿಸಿರುವ ಯೋಜನೆಯಡಿ ಅರ್ಹ ಅಂಧ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಮಾತನಾಡುವ ಲ್ಯಾಪ್‌ಟಾಪ್‌ಗಳನ್ನು ವಿತರಿಸುವಂತೆ ಮನವಿ ಮಾಡಲಾಗಿದೆ.
ವಕೀಲ ಉಮಾಪತಿ ಎಸ್ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಆದೇಶ ಹೊರಡಿಸಿತು. 2014ರಲ್ಲಿ ರಾಜ್ಯ ಸರ್ಕಾರವು ಅಂಧ ವಿದ್ಯಾರ್ಥಿಗಳಿಗೆ ಮಾತನಾಡುವ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ವಿತರಿಸುವುದಕ್ಕೆ ಒಪ್ಪಿಗೆ ನೀಡಿತ್ತು. ಈ ಯೋಜನೆ ಜಾರಿಗಾಗಿ 2014ರಿಂದಲೂ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ವಿನ್ಯಾಸಕಾರ ಅನ್ವಯ್ ನಾಯಕ್ ಹಾಗೂ ಅವರ ತಾಯಿ ಕುಮುದಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಅವರನ್ನು ಹೆಚ್ಚಿನ ತನಿಖೆಗಾಗಿ 14 ದಿನಗಳು ವಶಕ್ಕೆ ನೀಡುವಂತೆ ರಾಯಗಡ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
2018ರಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಅರ್ನಾಬ್, ಫಿರೋಜ್ ಶೇಖ್ ಮತ್ತು ನಿತೇಶ ಶಾರ್ದಾ ಅವರು ಆರೋಪಿಗಳಾಗಿದ್ದಾರೆ. ಅನ್ವಯ್ ತಮ್ಮ ಆತ್ಮಹತ್ಯೆಗೂ ಮುನ್ನ ಬರೆದ ಪತ್ರದಲ್ಲಿ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿಯ ಮಾತೃಸಂಸ್ಥೆಯಾದ ಎಆರ್‌ಜಿ ಔಟ್‌ಲಯರ್ ಬಾಕಿ ಹಣ ಪಾವತಿಸಿಲ್ಲ ಎಂದು ಪ್ರಸ್ತಾಪಿಸಿದ್ದಾರೆ ಎಂಬ ಪ್ರಾಥಮಿಕ ವಿಚಾರದ ಆಧಾರದಲ್ಲಿ ಅರ್ನಾಬ್ ಅವರನ್ನು ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಗೋಸ್ವಾಮಿ ಅವರನ್ನು ಪೊಲೀಸ್ ವಶಕ್ಕೆ ನೀಡದಿದ್ದರೆ ಅವರು ಸಾಕ್ಷ್ಯ ನಾಶದ ಜೊತೆಗೆ ತನಿಖೆಯಲ್ಲಿ ಮೂಗು ತೂರಿಸುವ ಸಾಧ್ಯತೆ ಇದೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.
ಯೆಸ್ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಜಾಮೀನು ನಿರಾಕರಿಸಿದೆ.
ನ್ಯಾಯಮೂರ್ತಿ ಎಸ್ ವಿ ಕೊತ್ವಾಲ್ ನೇತೃತ್ವದ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ. ಮೂರು ದಿನಗಳ ಕಾಲ ವಿಸ್ತೃತವಾಗಿ ನಾಲ್ಕು ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ಪೀಠವು ಅಕ್ಟೋಬರ್ 23ರಂದು ತೀರ್ಪು ಕಾಯ್ದಿರಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವಾಗ ಕೇಂದ್ರೀಯ ತನಿಖಾ ದಳವು (ಸಿಬಿಐ) ಕ್ರಿಮಿನಲ್ ಅಪರಾಧ ಸಂಹಿತೆ (ಸಿಆರ್‌ಪಿಸಿ) ಕಾರ್ಯವಿಧಾನದ ಅವಶ್ಯಕತೆಗಳನ್ನು ಪೂರೈಸಿಲ್ಲ ಎಂದು ವಾಧ್ವಾನ್ ಸಹೋದರರು ಡಿಫಾಲ್ಟ್ ಜಾಮೀನಿಗೆ ಮನವಿ ಸಲ್ಲಿಸಿದ್ದರು.
ವೈವಾಹಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರ ಪಾವತಿ ಮತ್ತು ನಿರ್ವಹಣೆ ವೆಚ್ಚ ನಿರ್ಧರಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ಮಾರ್ಗಸೂಚಿ ಜಾರಿಗೊಳಿಸಿದೆ. ನ್ಯಾಯಮೂರ್ತಿಗಳಾದ ಇಂದೂ ಮಲ್ಹೋತ್ರಾ ಮತ್ತು ಆರ್ ಸುಭಾಷ್ ರೆಡ್ಡಿ ನೇತೃತ್ವದ ಪೀಠವು ದೇಶಾದ್ಯಂತ ಇರುವ ಕೌಟುಂಬಿಕ, ಜಿಲ್ಲಾ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗೂ ನಿರ್ದೇಶನ ಹೊರಡಿಸಿದೆ.
ಇದರಿಂದ ನ್ಯಾಯಾಲಯಗಳ ನಡುವಿನ ವ್ಯಾಪ್ತಿಯ ಸಂಘರ್ಷ, ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ನ್ಯಾಯಾಲಯಗಳು ವಿಭಿನ್ನ ಪ್ರಕ್ರಿಯೆಯಲ್ಲಿ ಸಂಘರ್ಷಾತ್ಮಕ ಆದೇಶ ಹೊರಡಿಸುವುದನ್ನು ತಪ್ಪಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ. ಮಹಾರಾಷ್ಟ್ರದ ವೈವಾಹಿಕ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು, ಸಿಆರ್‌ಪಿಸಿ ಸೆಕ್ಷನ್ 125ರ ಅಡಿ ಪತ್ನಿ ಹಾಗೂ ಪುತ್ರನ ಖರ್ಚು-ವೆಚ್ಚದ ನಿರ್ವಹಣೆ ಪ್ರಶ್ನೆ ಮುನ್ನೆಲೆಗೆ ಬಂದಿತ್ತು.
ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯ ಸೆಕ್ಷನ್ 36ಕ್ಕೆ ಬದಲಾವಣೆ ತರಲಾಗಿರುವ ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಸುಗ್ರೀವಾಜ್ಞೆ 2020ಕ್ಕೆ ರಾಷ್ಟ್ರಪತಿ ಬುಧವಾರ ಅಂಕಿತ ಹಾಕಿದ್ದಾರೆ. ಸೆಕ್ಷನ್ 36 ಮಧ್ಯಸ್ಥಿಕೆ ವಿಚಾರಗಳಿಗೆ ಸಂಬಂಧಿಸಿದ್ದಾಗಿದೆ.
ಸಂಧಾನ ವಿಚಾರಗಳು ಮೇಲ್ನೋಟಕ್ಕೆ ವಂಚನೆ ಅಥವಾ ಭ್ರಷ್ಟಾಚಾರದ ಸುಳಿವಿದ್ದರೆ ಅಂತಹ ಸಂಧಾನ ವಿಚಾರಗಳಿಗೆ ಬೇಷರತ್ ತಡೆಯಾಜ್ಞೆ ನೀಡುವ ಮೂಲಕ ಸಂಧಾನ ಕಾಯಿದೆಯ ಸೆಕ್ಷನ್ 34ರ ಅನ್ವಯ ಪ್ರಕರಣದ ವಿಲೇವಾರಿಯನ್ನು ಬಾಕಿ ಉಳಿಸಲು ಸುಗ್ರೀವಾಜ್ಞೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.