ಮದುವೆ ಬಯಸದೆ ಸಹ ಜೀವನ ಆಯ್ಕೆ ಮಾಡಿಕೊಂಡು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಿಂದ ಪರಿಹಾರ ದೊರೆಯದೆ ಇದ್ದ ಜೋಡಿಯೊಂದಕ್ಕೆ ಸುಪ್ರೀಂಕೋರ್ಟ್ ಅಭಯ ನೀಡಿದೆ. ಇದು ಜೀವನ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದು ಜೋಡಿ ಎದುರಿಸುತ್ತಿರುವ ಬೆದರಿಕೆಗಳನ್ನು ಗಮನಿಸಿ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ನವೀನ್ ಸಿನ್ಹಾ ಮತ್ತು ನ್ಯಾಯಮೂರ್ತಿ ಅಜಯ್ ರಾಸ್ತೋಗಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಲಿವ್ ಇನ್ (ಸಹ ಜೀವನ) ಸಂಬಂಧ ಸಾಮಾಜಿಕವಾಗಿ ಮತ್ತು ನೈತಿಕವಾಗಿ ಒಪ್ಪುವಂಥದ್ದಲ್ಲ ಎಂದು ಈಚೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ಎಚ್ ಎಸ್ ಮದನ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ಬಳಿಕ ವಿಸ್ತೃತ ಪೀಠಕ್ಕೆ ಕೂಡ ಪ್ರಕರಣ ವರ್ಗವಾಗಿತ್ತು. ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ “ಇದು ಜೀವನ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರವಾದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ" ಎಂದು ಹೇಳಿದ್ದು ಅರ್ಜಿದಾರರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸೂಚಿಸಿತು.
ವ್ಯಕ್ತಿಯೊಬ್ಬನೊಂದಿಗೆ ನವ ವಿವಾಹಿತೆ ಇದ್ದ ಖಾಸಗಿ ಕ್ಷಣಗಳ ವೀಡಿಯೊವನ್ನು ಸಮುದಾಯ ಸದಸ್ಯರಿಗೆ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ತ್ರಿಪುರ ಹೈಕೋರ್ಟ್ ಮಹಿಳಾ ಅಧಿಕಾರಿಗಳೇ ಇರುವ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿದೆ. ಘಟನೆಯಿಂದ ಅವಮಾನಿತಳಾಗಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ತನಿಖೆ ಪ್ರಗತಿಯ ಹಂತದಲ್ಲಿದ್ದಾಗ ಆಕೆಯ ಗಂಡ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ.
ಪತ್ರಿಕಾ ವರದಿ ಆಧರಿಸಿ ನ್ಯಾಯಾಲಯ ಮೇ ಆರರಂದು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ವೀಡಿಯೊ ಪ್ರದರ್ಶಿಸಿದ್ದು ಪೈಶಾಚಿಕ ಕೃತ್ಯ, ಮಾನವ ಹಕ್ಕುಗಳ ಉಲ್ಲಂಘನೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು. ಗಂಡನ ಸಾವನ್ನು ಅಸಹಜ ಪ್ರಕರಣ ಎಂದು ದಾಖಲಿಸಿಕೊಳ್ಳಲಾಗಿದ್ದು ಆ ಘಟನೆಯ ಕುರಿತೂ ತನಿಖೆ ನಡೆಸಬೇಕೆಂದು ಎಸ್‌ಐಟಿಗೆ ನ್ಯಾಯಾಲಯ ಸೂಚಿಸಿದೆ. ಜೂನ್ 25ಕ್ಕೆ ಪ್ರಕರಣ ಮುಂದೂಡಲಾಗಿದೆ.
ಭಾರತದ ಸ್ಪೇನ್ ರಾಯಭಾರ ಕಚೇರಿ ವಿರುದ್ಧ ದಾವೆ ಹೂಡಲು ಫ್ರೆಂಚ್ ಕಟ್ಟಡ ವಿನ್ಯಾಸ ಕಂಪೆನಿಯಾದ ಅಲ್ಟ್ರಾ ಕಾನ್ಫಿಡೆನ್ಷಿಯಲ್ ಡಿಸೈನ್ ಪ್ರೈವೇಟ್ ಲಿಮಿಟೆಡ್‌ಗೆ ಕೇಂದ್ರ ವಿದೇಶಾಂಗ ಸಚಿವಾಲಯ ಜೂನ್ 4ರಂದು ಅನುಮತಿ ನೀಡಿದೆ. ಸಿಪಿಸಿ ಸೆಕ್ಷನ್ 86 ರ ಅಡಿಯಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಿಯರೆ ಅರ್ನಾಡ್ ಕ್ಯಾಸಿನ್ ಅವರಿಗೆ ಅನುಮತಿ ನೀಡಲಾಗಿದೆ. ಸಿಪಿಸಿ ಪ್ರಕಾರ ಬೇರೆ ದೇಶಗಳು ಆಡಳಿತಗಾರರು ಹಾಗೂ ದೂತವಾಸ ಅಥವಾ ರಾಯಭಾರಿಗಳ ವಿರುದ್ಧ ಮೊಕದ್ದಮೆ ಹೂಡುವ ಮುನ್ನ ಕೇಂದ್ರ ಸರ್ಕಾರ ಒಪ್ಪಿಗೆ ಪಡೆಯುವುದು ಕಡ್ಡಾಯ.
2018 ರಲ್ಲಿ ಸ್ಪೇನ್ ರಾಯಭಾರ ಕಚೇರಿ ತನ್ನ ಕಟ್ಟಡದ ಕೆಲಭಾಗಗಳ ನವೀಕರಣ ಮತ್ತು ಕೆಲ ಹೊಸ ನಿರ್ಮಾಣ ಕಾರ್ಯಗಳಿಗಾಗಿ ಕಂಪೆನಿಗೆ ಜವಾಬ್ದಾರಿ ವಹಿಸಿತ್ತು. ಆದರೆ ಕಂಪೆನಿಗೆ ವಿನ್ಯಾಸ ಶುಲ್ಕ ರೂ. 7,08,000 ಪಾವತಿಸಿರಲಿಲ್ಲ. ಈ ಕುರಿತು ರಾಯಭಾರಿ ಕಚೇರಿಗೆ ಕಂಪೆನಿ ಪತ್ರ ಬರೆದಿದ್ದರೂ ಉತ್ತರ ದೊರೆತಿರಲಿಲ್ಲ. ಈಗ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಕಂಪೆನಿ ದಾವೆ ಹೂಡಬಹುದಾಗಿದೆ. ವಕೀಲ ಸಿದ್ಧಾರ್ಥ್ ಬಾತ್ರಾ ಕಂಪೆನಿ ಪರವಾಗಿ ವಾದ ಮಂಡಿಸಲಿದ್ದಾರೆ.