ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರದ ನೂತನ ಕಾನೂನು ಸಚಿವ ಕಿರಣ್ ರಿಜಿಜು ಅವರು ಜುಲೈ 15, 2021ರಂತೆ ದೇಶದ ಹೈಕೋರ್ಟ್‌ಗಳಲ್ಲಿ 453 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದಾರೆ. ಮುಂದುವರೆದು, ಅಲಾಹಾಬಾದ್, ಕಲ್ಕತ್ತಾ, ಚತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಇಲ್ಲ ಎಂದು ತಿಳಿಸಿದ್ದಾರೆ. ಪ್ರಸ್ತುತ ಇಲ್ಲಿ ಹಂಗಾಮಿ ನ್ಯಾಯಮೂರ್ತಿಗಳು ಸೇವೆ ಸಲ್ಲಿಸುತ್ತಿದ್ದಾರೆ.
ನ್ಯಾಯಮೂರ್ತಿಗಳ ಖಾಲಿ ಇರುವ ಹುದ್ದೆಗಳನ್ನು ತುಂಬುವುದು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಸಹಭಾಗಿತ್ವದ ಪ್ರಕ್ರಿಯೆಯಾಗಿದೆ. ಇದು ಕೇಂದ್ರ ಹಾಗೂ ರಾಜ್ಯಗಳಲ್ಲಿನ ವಿವಿಧ ಸಾಂವಿಧಾನಿಕ ಸಂಸ್ಥೆಗಳ ನಡುವಿನ ಸಮಾಲೋಚನೆ ಮತ್ತು ಸಮ್ಮತಿಗೆ ಒಳಪಟ್ಟಿರುತ್ತದೆ. ಹಾಗಾಗಿ, ನ್ಯಾಯಮೂರ್ತಿಗಳ ಹುದ್ದೆಗಳನ್ನು ತುಂಬಲು ನಿರ್ದಿಷ್ಟ ಕಾಲಮಿತಿಯನ್ನು ಗೊತ್ತುಪಡಿಸಲಾಗದು ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಪ್ರಕರಣದ ವಿಚಾರಣೆಯೊಂದನ್ನು ಒಂದು ಪೀಠದಿಂದ ಮತ್ತೊಂದು ಪೀಠಕ್ಕೆ ಮರುನಿಯೋಜನೆ ಮಾಡಿರುವ ಕಲ್ಕತ್ತಾ ಹೈಕೋರ್ಟ್ ಹಂಗಾಮಿ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ವಿವಾದಾಸ್ಪದ ನಡೆಗೆ ಕಲ್ಕತ್ತಾ ಹೈಕೋರ್ಟ್ ವಕೀಲರ ಒಕ್ಕೂಟವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಈ ನಿರ್ಧಾರವನ್ನು ಹಿಂಪಡೆಯದೆ ಹೋದಲ್ಲಿ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ದೂರ ಉಳಿಯುವುದಾಗಿಯೂ ಪತ್ರಮುಖೇನ ತಿಳಿಸಲಾಗಿದೆ. "ಒಂದೊಮ್ಮೆ ಆಡಳಿತಾತ್ಮಕ ನಿರ್ಧಾರವನ್ನು ಹಿಂಪಡೆಯದೆ ಹೋದಲ್ಲಿ ಘನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಿಕ ವಿಚಾರಣಾ ಪ್ರಕ್ರಿಯೆಗಳಿಂದ ನಮಗೆ ದೂರ ಉಳಿಯದೆ ಅನ್ಯ ಮಾರ್ಗವಿಲ್ಲ," ಎಂದು ಪತ್ರದಲ್ಲಿ ಹೇಳಲಾಗಿದೆ.
ಇತ್ತೀಚೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಬಿಂದಾಲ್ ಅವರು ನ್ಯಾ. ಸಬ್ಯಸಾಚಿ ಭಟ್ಟಾಚಾರ್ಯ ಅವರ ಏಕಸದಸ್ಯ ಪೀಠದ ಮುಂದೆ ಇದ್ದ ಪ್ರಕರಣವೊಂದನ್ನು ಅವರಿಂದ ಸರಿಸಿ ವಿಭಾಗೀಯ ಪೀಠಕ್ಕೆ ಮರುನಿಯೋಜನೆ ಮಾಡಿದ್ದರು. ಈ ವಿಚಾರವಾಗಿ ನ್ಯಾ. ಭಟ್ಟಾಚಾರ್ಯ ತಮ್ಮ ತೀವ್ರ ಅಸಮಾಧಾನವನ್ನು ಆದೇಶದಲ್ಲಿ ಕಾಣಿಸಿದ್ದರು. ಮುಖ್ಯ ನ್ಯಾಯಮೂರ್ತಿ ಮಾಸ್ಟರ್ ಆಫ್ ರೋಸ್ಟರ್ ಆಗಿದ್ದರೂ “ನಾನು ಪರಿವೀಕ್ಷಿಸುವ ಎಲ್ಲದಕ್ಕೂ” ಅವರು ಮಾಸ್ಟರ್ ಅಲ್ಲ. ತಮಗೆ ದೊರೆತಿರುವ ಅಧಿಕಾರವನ್ನು ಅವರು ಮನಸೋಇಚ್ಛೆ ಬಳಸಲಾಗದು ಎಂದು ತಮ್ಮ ಆದೇಶದಲ್ಲಿ ದಾಖಲಿಸಿದ್ದರು.