ದೆಹಲಿಯ ಲೆ. ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

ಅಕ್ರಮವಾಗಿ ಮರ ಕಡಿದಿದ್ದಕ್ಕಾಗಿ ಡಿಡಿಎ ಉಪಾಧ್ಯಕ್ಷ ಸುಭಾಶಿಶ್ ಪಾಂಡಾ ವಿರುದ್ಧ ನ್ಯಾಯಾಲಯ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಆ ಬಳಿಕ ಲೆ. ಗವರ್ನರ್ ಮರ ಕಡಿಯಲು ಅನಮತಿಸಿದ್ದರು ಎನ್ನಲಾಗಿದೆ.
Delhi LG Vinai Kumar Saxena, Supreme Court
Delhi LG Vinai Kumar Saxena, Supreme Courtx.com
Published on

ಸುಪ್ರೀಂ ಕೋರ್ಟ್‌ ಆದೇಶ  ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ಅಧ್ಯಕ್ಷರೂ ಆಗಿರುವ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಅವರು ತಮ್ಮ ವಿವೇಚನೆ ಬಳಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಕಿಡಿಕಾರಿದೆ [ಬಿಂದು ಕಪೂರಿಯಾ ಮತ್ತು ಸುಭಾಶಿಷ್ ಪಾಂಡಾ ನಡುವಣ ಪ್ರಕರಣ].

ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಮರಗಳನ್ನು ಕಡಿಯಲು ಲೆ. ಗವರ್ನರ್‌ ಅನುಮತಿಸಿದ್ದಕ್ಕೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್  ಅವರಿದ್ದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ ತಮ್ಮ ಪಾತ್ರ ಮುಚ್ಚಿಡಲು ಲೆ. ಗವರ್ನರ್‌ ಯತ್ನಿಸಿದ್ದನ್ನು ಖಂಡಿಸಿತು. ಮರ ಕಡಿಯಲು ತಾನು ನಿರ್ದೇಶನ ನೀಡಿದ್ದಾಗಿ ವಿಚಾರಣೆಯ ಮೊದಲ ದಿನವೇ ಲೆ. ಗವರ್ನರ್‌ ತಿಳಿಸಬೇಕಿತ್ತು ಎಂದು ಅದು ಹೇಳಿತು.

Also Read
ಮರಗಳ ಮಾರಣಹೋಮ: ದೆಹಲಿ ಲೆ. ಗವರ್ನರ್‌ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

“ಮೊದಲ ದಿನವೇ ಲೆ. ಗವರ್ನರ್‌ ನಿರ್ದೇಶನ ನೀಡಿದ್ದಾರೆ ಎಂಬುದನ್ನು ನಮಗೆ ತಿಳಿಸಬೇಕಿತ್ತು. ಮೂರು ದಿನ ಇದನ್ನು ಮುಚ್ಚಿಡಲಾಯಿತು. ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾದಾಗಲೇ ಲೆ. ಗವರ್ನರ್‌ ಪ್ರಕರಣದಲ್ಲಿ ಭಾಗಿಯಾಗಿರುವುದು ನಮಗೆ ಅರ್ಥವಾಯಿತು. ತುಂಬಾ ಸ್ಪಷ್ಟವಾಗಿದೆ. ಡಿಡಿಎ ಲೆ. ಗವರ್ನರ್‌ ಅವರ ಅನುಮತಿ ಕೇಳಿರುವುದನ್ನು ಅಫಿಡವಿಟ್‌ ಹೇಳುತ್ತದೆ. ಲೆ. ಗವರ್ನರ್‌ ತಮ್ಮ ವಿವೇಚನೆಯನ್ನು ಸ್ವಲ್ಪವೂ ಬಳಸಿಲ್ಲ. ದೆಹಲಿ ಸರ್ಕಾರಕ್ಕೆ ವೃಕ್ಷ ಅಧಿಕಾರಿಯ ಅಧಿಕಾರ ಇದೆ ಎಂದು ಅವರು ಭಾವಿಸಿದರು” ಎಂಬುದಾಗಿ ನ್ಯಾ. ಓಕಾ ತಿಳಿಸಿದರು.

ಲೆ. ಗವರ್ನರ್‌ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ.

ನ್ಯಾ. ಎ ಎಸ್‌ ಓಕಾ

ಅಲ್ಲದೆ ಲೆ. ಗವರ್ನರ್‌ ಸಕ್ಸೇನಾ ಅವರು ತಮ್ಮನ್ನು ತಾವೇ ನ್ಯಾಯಾಲಯ ಎಂದು ಭಾವಿಸಿದಂತಿದೆ ಎಂದು ನ್ಯಾಯಾಲಯ ಕಿಡಿಕಾರಿತು. ಲೆ. ಗವರ್ನರ್‌ ಸೇರಿದಂತೆ ಎಲ್ಲರೂ ಪ್ರಕರಣದಲ್ಲಿ ತಪ್ಪು ಮಾಡಿದ್ದು ನ್ಯಾಯಾಲಯಕ್ಕೆ ಸ್ಪಷ್ಟೀಕರಣ ನೀಡುವ ಬದಲು ಕೃತ್ಯವನ್ನು ಮುಚ್ಚಿಡಲು ಮುಂದಾಗಿದ್ದಾರೆ ಎಂದಿತು.

"ಲೆ. ಗವರ್ನರ್‌ಗೆ ತನ್ನ ಪಾತ್ರ ಏನು ಎಂದು ತಿಳಿದಿದೆ, ದೆಹಲಿ ಸರ್ಕಾರ ಮತ್ತು ಡಿಡಿಎಗೂ ಅದು ತಿಳಿದಿದೆ. ಮೊದಲ ದಿನದಿಂದಲೂ ಈ ವಿಚಾರದಲ್ಲಿ ಮುಚ್ಚುಮರೆ ಮಾಡುವ ಅಗತ್ಯವಿರಲಿಲ್ಲ. ಅಂದೇ ಇದನ್ನು ಹೇಳಬೇಕಿತ್ತು” ಎಂದು ನ್ಯಾಯಾಲಯ ತಿಳಿಸಿತು.

ಈ ಬೆಳವಣಿಗೆಗಳು ವಿಷಾದಕರ ಎಂದ ನ್ಯಾಯಾಲಯ ಲೆ. ಗವರ್ನರ್‌ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದ ಅವರ ಪರ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿತು.

ಇದೇ ವೇಳೆ ಮರ ಕಡಿಯಲು ಅನುಮತಿಸಲಾಗದು ಎಂದು ಲೆ. ಗವರ್ನರ್‌ಗೆ ತಿಳಿಸಲಾಗಿತ್ತೇ ಎಂಬ ಬಗ್ಗೆ ಸರ್ಕಾರಿ ಅಧಿಕಾರಿಗಳು ಮತ್ತು ಡಿಡಿಎ ಅಧಿಕಾರಿಗಳು ತನಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಅಲ್ಲದೆ ಲೆ. ಗವರ್ನರ್‌ ಅಣತಿಯಂತೆ ಮರ ಕಡಿಯಲು ನಿರ್ಧರಿಸಲಾಗಿತ್ತೇ ಅಥವಾ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲಾಗಿತ್ತೆ ಎಂಬುದನ್ನು ವಿವರಿಸುವಂತೆಯೂ ಡಿಡಿಎಗೆ ಅದು ನಿರ್ದೇಶಿಸಿದೆ.

Also Read
ಮಾನನಷ್ಟ ಮೊಕದ್ದಮೆ: ದೆಹಲಿ ಲೆ. ಗವರ್ನರ್‌ ಹೂಡಿದ್ದ ಪ್ರಕರಣದಲ್ಲಿ ಹೋರಾಟಗಾರ್ತಿ ಮೇಧಾ ಪಾಟ್ಕರ್ ದೋಷಿ ಎಂದ ನ್ಯಾಯಾಲಯ

ಯಾರ ಸೂಚನೆಯ ಮೇರೆಗೆ ಅವರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿಸುವಂತೆ ಮರ ಕಡಿದಿದ್ದ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ವಿವರಿಸಬೇಕು ಎಂದು ಕೂಡ ಪೀಠ ತಾಕೀತು ಮಾಡಿದೆ.

ಕಳೆದ ವಿಚಾರಣೆ ವೇಳೆಯೂ ಸುಪ್ರೀಂ ಕೋರ್ಟ್‌ ಗವರ್ನರ್‌ ವಿರುದ್ಧ ಟೀಕೆಯ ಮಳೆ ಸುರಿಸಿತ್ತು. "ಇದೇನು? ಇದೆಂತಹ ಲಜ್ಜೆಗೆಟ್ಟ ಕೃತ್ಯ. ದಾಖಲೆಯಲ್ಲಿ ಸಲ್ಲಿಸಲಾದ ಎರಡು ವಿವರಗಳು ಲೆ. ಗವರ್ನರ್‌ ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ" ಎಂದು ಕಿಡಿಕಾರಿತ್ತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್‌ನಲ್ಲಿ ನಡೆಯಲಿದೆ.

Kannada Bar & Bench
kannada.barandbench.com