

ಭಾರತದ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಎಂಬುದು ಪ್ರಭುತ್ವದ ಉಡುಗೊರೆಯಲ್ಲ ಬದಲಿಗೆ, ಅದು ಪ್ರಭುತ್ವ ನಿರ್ವಹಿಸಬೇಕಾದ ಮೊದಲ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದ್ದು ಅಪರಾಧಿಕ ಪ್ರಕ್ರಿಯೆ ಎದುರಿಸುತ್ತಿರುವ ವ್ಯಕ್ತಿಗೂ ಪಾಸ್‌ಪೋರ್ಟ್ ಪಡೆಯುವ ಹಕ್ಕು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ (ಮಹೇಶ್ ಕುಮಾರ್ ಅಗರವಾಲ್ ಮತ್ರು. ಭಾರತ ಒಕ್ಕೂಟ ನಡುವಣ ಪ್ರಕರಣ).
ಕಲ್ಲಿದ್ದಲು ನಿಕ್ಷೇಪ ಪ್ರಕರಣದಲ್ಲಿ ದೋಷಿಯಾಗಿರುವ ಹಾಗೂ ಇನ್ನೊಂದು ಕಲ್ಲಿದ್ದಲು ಗಣಿಗಾರಿಕೆ ಸಂಬಂಧಿತ ಪ್ರಕರಣದಲ್ಲಿ ಅಕ್ರಮ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪಾಸ್‌ಪೋರ್ಟ್ ನವೀಕರಣ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಎ ಜಿ ಮಸೀಹ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
“ನಮ್ಮ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಎಂಬುದು ಪ್ರಭುತ್ವದ ದಾನವಲ್ಲ; ಅದು ಅದರ ಮೊದಲ ಕರ್ತವ್ಯ. ನಾಗರಿಕನಿಗೆ ಸಂಚರಿಸುವ, ಪ್ರಯಾಣ ಮಾಡುವ, ಜೀವನೋಪಾಯ ಮತ್ತು ಅವಕಾಶಗಳನ್ನು ಅನ್ವೇಷಿಸುವ ಸ್ವಾತಂತ್ರ್ಯ ಸಂವಿಧಾನದ 21ನೇ ವಿಧಿಯಡಿಯಲ್ಲಿ ಖಚಿತಪಡಿಸಲಾದ ಮೂಲಭೂತ ಹಕ್ಕಿನ ಅವಿಭಾಜ್ಯ ಅಂಗವಾಗಿದೆ. ನ್ಯಾಯ, ಭದ್ರತೆ ಅಥವಾ ಸಾರ್ವಜನಿಕ ಶಾಂತಿಯ ಹಿತಾಸಕ್ತಿಗಾಗಿ ಕಾನೂನಿನ ಪ್ರಕಾರ ಪ್ರಭುತ್ವ ಆ ಸ್ವಾತಂತ್ರ್ಯವನ್ನು ನಿಯಂತ್ರಿಸಬಹುದಾದರೂ, ಅಂಥ ನಿರ್ಬಂಧಗಳು ಅಗತ್ಯವಿರುವ ಮಟ್ಟಕ್ಕೆ ಮಾತ್ರ ಸೀಮಿತವಾಗಿರಬೇಕು, ಉದ್ದೇಶಕ್ಕೆ ಅನುಗುಣವಾಗಿರಬೇಕು ಮತ್ತು ಕಾನೂನಿನಲ್ಲಿ ಸ್ಪಷ್ಟವಾದ ಆಧಾರ ಹೊಂದಿರಬೇಕು” ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಿಕ ಪ್ರಕ್ರಿಯೆಗಳ ಸುರಕ್ಷತಾ ಕ್ರಮಗಳೇ ಕಠಿಣ ತೊಡಕುಗಳಾಗಿ ಪರಿಣಮಿಸಿದಾಗ ಪ್ರಭುತ್ವದ ಅಧಿಕಾರ ಮತ್ತು ವ್ಯಕ್ತಿಯ ಘನತೆಯ ನಡುವಿನ ಸಮತೋಲನಕ್ಕೆ ಭಂಗ ಬರುತ್ತದೆ ಇಂತಹ ಪರಿಸ್ಥಿತಿಗಳು ಸಂವಿಧಾನದ ಭರವಸೆಯನ್ನೇ ಅಪಾಯಕ್ಕೆ ದೂಡುತ್ತವೆ ಎಂದು ಕೂಡ ನ್ಯಾಯಾಲಯ ಹೇಳಿದೆ.
ಪಾಸ್‌ಪೋರ್ಟ್ ಕಾಯಿದೆಯ ಸೆಕ್ಷನ್ 6(2)(ಎಫ್) ಅಪರಾಧ ಪ್ರಕರಣ ಎದುರಿಸುತ್ತಿರುವವರಿಗೆ ಪಾಸ್‌ಪೋರ್ಟ್ ನೀಡುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸುವುದಿಲ್ಲ. ಸಂಬಂಧಿತ ನ್ಯಾಯಾಲಯ ಪರಿಶೀಲನೆ ನಡೆಸಿ ಅನುಮತಿ ನೀಡಿದಲ್ಲಿ, ಪಾಸ್‌ಪೋರ್ಟ್ ನೀಡಬಹುದು.
ಪಾಸ್‌ಪೋರ್ಟ್ ಹೊಂದಿರುವುದೇ ವಿದೇಶಕ್ಕೆ ಹೋಗುವ ಹಕ್ಕು ಎಂದಲ್ಲ; ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವ ಅಥವಾ ನಿರಾಕರಿಸುವ ಅಧಿಕಾರ ಕ್ರಿಮಿನಲ್ ಕೋರ್ಟ್‌ಗೇ ಸೇರಿದೆ ಎಂದು ಪೀಠ ತಿಳಿಸಿದೆ.
ಪಾಸ್‌ಪೋರ್ಟ್ ಪ್ರಾಧಿಕಾರ ಭವಿಷ್ಯದ ಪ್ರಯಾಣಗಳ ಬಗ್ಗೆ ಊಹಾಪೋಹದ ಆಧಾರದಲ್ಲಿ ಪಾಸ್‌ಪೋರ್ಟ್ ನಿರಾಕರಿಸುವಂತಿಲ್ಲ ಎಂದೂ ಹೇಳಿದೆ.
ಅಂತಿಮವಾಗಿ, ಸುಪ್ರೀಂ ಕೋರ್ಟ್ ಮಹೇಶ್ ಕುಮಾರ್ ಅಗರ್ವಾಲ್ ಅವರಿಗೆ 10 ವರ್ಷಗಳ ಅವಧಿಗೆ ಪಾಸ್‌ಪೋರ್ಟ್ ಮರುಜಾರಿ ಮಾಡಲು ಆದೇಶಿಸಿತು. ಆದರೆ ಅವರು ವಿದೇಶಕ್ಕೆ ಹೋಗುವ ಮುನ್ನ ಸಂಬಂಧಿತ ನ್ಯಾಯಾಲಯದ ಅನುಮತಿ ಪಡೆಯಬೇಕು ಹಾಗೂ ವಿಧಿಸಲಾದ ಎಲ್ಲ ಷರತ್ತುಗಳನ್ನು ಪಾಲಿಸಬೇಕು ಎಂದು ಸ್ಪಷ್ಟಪಡಿಸಿತು.
ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಗೋಪಾಲ್ ಸುಬ್ರಮಣಿಯಂ,ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಹಾಜರಿದ್ದರು.