ಮರಣಶೈಯ್ಯೆಯಲ್ಲಿರುವ ಅಜ್ಜನ ಆರೈಕೆಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ 15 ದಿನಗಳ ತುರ್ತು ಪೆರೋಲ್‌

ಜೀವಾವಧಿ ಶಿಕ್ಷೆಗೊಳಗಾಗಿ ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ಎನ್ ಡಿ ನವೀನ್ ಅಲಿಯಾಸ್ ಸಬ್ಸಿಡಿ ನವೀನ್‌ಗೆ ತುರ್ತು ಪೆರೋಲ್‌ ಮಂಜೂರು ಮಾಡಿರುವ ಹೈಕೋರ್ಟ್‌.
Parole
Parole
Published on

ಮರಣಶೈಯ್ಯೆಯಲ್ಲಿರುವ 97 ವರ್ಷದ ತಾತನನ್ನು ಕಂಡು ಕೊನೆಘಳಿಗೆಯಲ್ಲಿ ಆತನ ಬಳಿ ಇದ್ದು ಆರೈಕೆ ಮಾಡಲು ಜೀವಾವಧಿ ಶಿಕ್ಷೆಗೆ ಒಳಗಾಗಿ ಸದ್ಯ ಜೈಲಿನಲ್ಲಿರುವ ಮೊಮ್ಮಗನಿಗೆ ಮಾನವೀಯತೆಯ ಆಧಾರದಲ್ಲಿ ಕರ್ನಾಟಕ ಹೈಕೋರ್ಟ್ ಮಂಗಳವಾರ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿದೆ.

ತನ್ನ ತಂದೆ ಮರಣಶೈಯ್ಯೆಯಲ್ಲಿದ್ದು ಆತನನ್ನು ಕಾಣಲು ಮೊಮ್ಮಗನಿಗೆ ಪೆರೋಲ್ ಮಂಜೂರು ಮಾಡಬೇಕು ಎಂದು ಜೀವಾವಧಿ ಶಿಕ್ಷೆಗೊಳಗಾಗಿ ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ಎನ್ ಡಿ ನವೀನ್ ಅಲಿಯಾಸ್ ಸಬ್ಸಿಡಿ ನವೀನ್ ತಂದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ನುಗ್ಗೇಹಳ್ಳಿ ಗ್ರಾಮದ ಎನ್ ಎನ್ ದೇವರಾಜು ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೊಲೆ ಪ್ರಕರಣದಲ್ಲಿ ನವೀನ್‌ಗೆ 2024ರ ಡಿಸೆಂಬರ್‌ 18ರಂದು ಜೀವಾವಧಿ ಶಿಕ್ಷೆಯಾಗಿದೆ. ಅದಕ್ಕೂ ಮೊದಲು 2022ರ ಅಕ್ಟೋಬರ್‌ 2ರಿಂದ ಆತ ಜೈಲಿನಲ್ಲಿದ್ದಾನೆ. ಈಗ ಆತನ 97 ವರ್ಷದ ತಾತ ಮರಣಶೈಯ್ಯೆಯಲ್ಲಿದ್ದು, ತಾತನನ್ನು ಕಾಣಲು ಪೆರೋಲ್ ಮಂಜೂರು ಮಾಡಬೇಕು ಎಂದು ಕೋರಿದರು.

ಇದಕ್ಕೆ ಸರ್ಕಾರದ ಪರ ವಕೀಲರು ಈ ಹಿಂದೆ ಅಪರಾಧಿಗೆ ಮೂರು ಬಾರಿ ಪೆರೋಲ್ ಮಂಜೂರು ಮಾಡಲಾಗಿದೆ. ಆ ಎಲ್ಲಾ ಸಂದರ್ಭದಲ್ಲಿ ಆತ ಯಾವುದೇ ಪೆರೋಲ್ ನಿಯಮಗಳು ಅಥವಾ ಷರತ್ತುಗಳ ಉಲ್ಲಂಘನೆ ಮಾಡಿಲ್ಲ. ಪೆರೋಲ್ ಅವಧಿ ಮುಗಿದ ತಕ್ಷಣ ಆತ ಜೈಲಿಗೆ ಶರಣಾಗಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನು ಪರಿಗಣಿಸಿದ ಪೀಠವು ಅಪರಾಧಿ ನವೀನ್‌ಗೆ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿ ಆದೇಶಿಸಿತು. ಅಲ್ಲದೇ ವಾರದಲ್ಲಿ ಒಂದು ಅಪರಾಧಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಹಾಜರಿ ಹಾಕಬೇಕು. ಪೆರೋಲ್ ಅವಧಿಯಲ್ಲಿ ಪುನಾ ಯಾವುದೇ ಅಪರಾಧಿಕ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿದೆ.

Kannada Bar & Bench
kannada.barandbench.com