ನ್ಯಾಯಾಧೀಶರ ಬದುಕು ಒಂದು ರೀತಿ ಅರಣ್ಯದಲ್ಲಿರುವ ವಿರಕ್ತನಂತೆ: ನಿರ್ಗಮಿತ ಸಿಜೆ ದಿನೇಶ್‌ ಕುಮಾರ್‌ ಅಭಿಮತ

“ಜನರಿಗೆ ಅರ್ಥವಾಗುವ ಸರಳ ಮತ್ತು ಓದುವ ಭಾಷೆಯಲ್ಲಿ ತೀರ್ಪು ಬರೆಯುವುದರಲ್ಲಿ ನನಗೆ ನಂಬಿಕೆ ಇದೆ. ಭಾರತದ ಸುಪ್ರೀಂ ಕೋರ್ಟ್‌ನ ಲಾಂಛನದಲ್ಲಿನ 'ಯತೋ ಧರ್ಮಸ್ತತೋ ಜಯಃ' ಸಂದೇಶ ಪಾಲಿಸಿದ್ದೇನೆ” ಎಂದು ಹೇಳಿದರು.
Karnataka HC and Chief Justice P S Dinesh Kumar
Karnataka HC and Chief Justice P S Dinesh Kumar
Published on

“ನ್ಯಾಯಾಧೀಶರ ಬದುಕು ಒಂದು ರೀತಿಯಲ್ಲಿ ಅರಣ್ಯದಲ್ಲಿರುವ ವಿರಕ್ತನಂತೆ” ಎಂದು ಕರ್ನಾಟಕ ಹೈಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ಹೇಳಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ವತಿಯಿಂದ ಹೈಕೋರ್ಟ್‌ನ ಕೋರ್ಟ್‌ ಹಾಲ್‌ 1ರಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ನಾಳೆ ನ್ಯಾ. ದಿನೇಶ್‌ ಕುಮಾರ್‌ ಅವರು ಸೇವಾ ನಿವೃತ್ತಿ ಹೊಂದಲಿದ್ದಾರೆ.

“ನ್ಯಾಯಾಂಗ ಮೂಲಸೌಕರ್ಯ ಮತ್ತು ರಾಜ್ಯದಾದ್ಯಂತ ವ್ಯವಸ್ಥಿತವಾಗಿ ಇ-ಕೋರ್ಟ್‌ ಪ್ರಾಜೆಕ್ಟ್‌ ಜಾರಿ ಮಾಡಲು ಎಲ್ಲರ ಜೊತೆಗೂಡಿ ಶ್ರಮಿಸಿದ್ದೇನೆ. ತಂತ್ರಜ್ಞಾನಕ್ಕೆ ತೆರೆದುಕೊಂಡಿರುವುದರಿಂದ ನ್ಯಾಯದಾನ ವ್ಯವಸ್ಥೆಯು ಕ್ರಿಯಾತ್ಮಕವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಹಲವಾರು ನವೀನ ಸಕಾರಾತ್ಮಕ ಕ್ರಮಗಳಿಂದ ಸಮಯ ಉಳಿತಾಯವಾಗಿದ್ದು, ದಾವೆದಾರರಿಗೆ ನ್ಯಾಯದಾನ ಸಾಧ್ಯವಾಗಿದೆ” ಎಂದರು.

“ಜನರಿಗೆ ಅರ್ಥವಾಗುವ ಸರಳ ಮತ್ತು ಓದುವ ಭಾಷೆಯಲ್ಲಿ ತೀರ್ಪು ಬರೆಯುವುದರಲ್ಲಿ ನನಗೆ ನಂಬಿಕೆ ಇದೆ. ಭಾರತದ ಸುಪ್ರೀಂ ಕೋರ್ಟ್‌ನ ಲಾಂಛನದಲ್ಲಿನ 'ಯತೋ ಧರ್ಮಸ್ತತೋ ಜಯಃ' ಸಂದೇಶ ಪಾಲಿಸಿದ್ದೇನೆ” ಎಂದು ಹೇಳಿದರು.

ವೃತ್ತಿ ಜೀವನದಲ್ಲಿ ಮಾರ್ಗದರ್ಶನ ಮಾಡಿದ ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್‌ ವೆಂಕಟಾಚಲಯ್ಯ, ದಿವಂಗತ ಭಾರತದ ಸಾಲಿಸಿಟರ್‌ ಜನರಲ್‌ ಆಗಿದ್ದ ಸೋಲಿ ಸೊರಾಬ್ಜಿ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಸೇರಿದಂತೆ ಹಲವು ಕಾನೂನು ಪಂಡಿತರನ್ನು ನ್ಯಾ. ದಿನೇಶ್‌ ಕುಮಾರ್‌ ಅವರು ಸ್ಮರಿಸಿದರು.

Also Read
ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಪಿ ಎಸ್‌ ದಿನೇಶ್‌ ಕುಮಾರ್‌ ಅವರಿಂದ ಪ್ರಮಾಣ ವಚನ ಸ್ವೀಕಾರ

2015 ಜನವರಿ 2ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಸಿಜೆ ದಿನೇಶ್‌ ಕುಮಾರ್‌ ಅವರು 2016ರ ಡಿಸೆಂಬರ್‌ 30ರಂದು ಕಾಯಂಗೊಂಡಿದ್ದರು. ಕೇವಲ 24 ದಿನಗಳ ಅವಧಿಗೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರುವ ದಿನೇಶ್‌ ಕುಮಾರ್‌ ಅವರಿಗೆ ಕಡಿಮೆ ಅವಧಿಯ ಸಿಜೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಇರಲಿದ್ದು, ನ್ಯಾ. ಎಸ್‌ ಎ ಹಕೀಮ್‌ ಅವರಿಗೆ ಮೊದಲ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ನ್ಯಾ. ಸೋಮನಾಥ್‌ ಅಯ್ಯರ್‌ ಅವರ ಹೆಸರಿದೆ. ನ್ಯಾ. ಹಕೀಂ ಅವರು 6 ದಿನಗಳ ಕಾಲ ಮತ್ತು ನ್ಯಾ. ಅಯ್ಯರ್‌ ಅವರು 36 ದಿನಗಳ ಕಾಲ ಕರ್ನಾಟಕ ಹೈಕೋರ್ಟ್‌ನ ಸಿಜೆಗಳಾಗಿದ್ದರು. 

ಕರ್ನಾಟಕ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಎನ್‌ ವಿ ಅಂಜಾರಿಯಾ ಅವರನ್ನು ನೇಮಕ ಮಾಡಲಾಗಿದೆ. ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ಅವರು ಇನ್ನಷ್ಟೇ ಅಧಿಕಾರ ಸ್ವೀಕರಿಸಬೇಕಿದೆ.

Kannada Bar & Bench
kannada.barandbench.com