ಕೋವಿಡ್ ಮೂರನೇ ಅಲೆ ತಳ್ಳಿಹಾಕಲಾಗದು: ಕಾಳಿ ಪೂಜೆಗೆ ನಿರ್ಬಂಧ ವಿಧಿಸಿದ ಕಲ್ಕತ್ತಾ ಹೈಕೋರ್ಟ್

ಛತ್ ಪೂಜೆಗೆ ಸಂಬಂಧಿಸಿದಂತೆ ನವೆಂಬರ್ 8, 2021 ರಂದು ಮತ್ತೆ ಪ್ರತ್ಯೇಕ ನಿರ್ದೇಶನ ನೀಡುವುದಾಗಿ ನ್ಯಾಯಾಲಯ ತಿಳಿಸಿತು.
Calcutta High Court
Calcutta High Court
Published on

ಕೋವಿಡ್‌ ಮೂರನೇ ಅಲೆ ಸಾಧ್ಯತೆ ಗಮನದಲ್ಲಿಟ್ಟುಕೊಂಡು ಮುಂಬರುವ ಕಾಳಿ ಪೂಜೆ, ಜಗಧಾತ್ರಿ ಪೂಜೆ ಮತ್ತು ಕಾರ್ತಿಕ ಪೂಜೆ ಹಬ್ಬಗಳ ಆಚರಣೆಗೆ ಕಲ್ಕತ್ತಾ ಹೈಕೋರ್ಟ್ ಬುಧವಾರ ಹಲವಾರು ನಿರ್ಬಂಧಗಳನ್ನು ಹೊರಡಿಸಿದೆ [ಅಜಯ್ ಕುಮಾರ್ ಡೇ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

“ರಾಜ್ಯದಲ್ಲಿ ಕೋವಿಡ್‌ ದರ ಶೇ 5ರ ಒಳಗೆ ಇರುವುದರಿಂದ ವಿಪತ್ತು ನಿರ್ವಹಣಾ ಕಾಯಿದೆ ಮತ್ತಿತರ ಸಂಬಂಧಿತ ಕಾಯಿದೆಗಳ ಅಡಿ ರಾಜ್ಯ ಮತ್ತು ಕೇಂದ್ರ ವಿಧಿಸಿರುವ ನಿರ್ಬಂಧಗಳು ಅನ್ವಯಿಸದು ಎಂಬ ಅಂಶದ ಬಗ್ಗೆ ನ್ಯಾಯಾಲಯ ಎಚ್ಚರಿಕೆಯಿಂದಿದೆ. ಸಾಂಕ್ರಾಮಿಕ ಮತ್ತು ಮೂರನೇ ಅಲೆಯ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಮತ್ತು ಭೀತಿ ದೊಡ್ಡದಿದೆ” ಎಂದು ನ್ಯಾಯಮೂರ್ತಿಗಳಾದ ರಾಜಶೇಖರ್ ಮಂಥಾ ಮತ್ತು ಕೆಸಂಗ್ ದೋಮಾ ಭುಟಿಯಾ ಅವರ ವಿಭಾಗೀಯ ಪೀಠ ತಿಳಿಸಿತು.

Also Read
ಪಟಾಕಿ ನಿಷೇಧ: ಪಟಾಕಿ ವ್ಯಾಪಾರಿಗಳ ಪರವಾನಗಿ ರದ್ದತಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್ ನಿರಾಕರಣೆ

ಹಬ್ಬಗಳ ಆಚರಣೆಗೆ ಕೆಲ ನಿರ್ಬಂಧಗಳನ್ನು ವಿಧಿಸುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅಕ್ಟೋಬರ್ 7, 2021 ಮತ್ತು ನವೆಂಬರ್ 5, 2020 ರಂದು ಹೊರಡಿಸಿದ್ದ ಮಾರ್ಗಸೂಚಿಯನ್ನು ಜಾರಿಗೊಳಿಸುವಂತೆ ಅರ್ಜಿದಾರರು ಕೋರಿದ್ದರು.

ಎರಡು ಆದೇಶಗಳಲ್ಲಿ ಹೊರಡಿಸಲಾದ ನಿರ್ದೇಶನಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಅಡ್ವೊಕೇಟ್ ಜನರಲ್ ಎಸ್‌ ಎನ್ ಮುಖರ್ಜಿ ಹೇಳಿದರು. ಇತ್ತ ವಕೀಲರ ವಾದದಲ್ಲಿ ಹುರುಳಿದೆ ಎಂದ ನ್ಯಾಯಾಲಯ ದೀರ್ಘಾವಧಿಯ ಲಾಕ್‌ಡೌನ್‌ ಪರಿಣಾಮವಾಗಿ ಅದರ ವಿರುದ್ಧ ಜನ ಸೇಡು ತೀರಿಸಿಕೊಳ್ಳುವಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂಬುದಾಗಿ ಅಭಿಪ್ರಾಯಪಟ್ಟಿತು. ಮುಂಜಾಗರೂಕತಾ ಕ್ರಮಗಳು ಅಗತ್ಯ ಎನ್ನುವುದಕ್ಕೆ ಒತ್ತು ನೀಡಿತು.

ನ್ಯಾಯಾಲಯ ತನ್ನ ಹಿಂದಿನ ಆದೇಶಗಳಲ್ಲಿದ್ದ ನಿರ್ಬಂಧಗಳನ್ನು ಮಾರ್ಪಡಿಸಿ ಹಬ್ಬಗಳ ಆಚರಣೆಗೆ ಸಂಬಂಧಿಸಿದಂತೆ ವಿವಿಧ ನಿರ್ದೇಶನಗಳನ್ನು ನೀಡಿತು. ಛತ್‌ ಪೂಜೆಗೆ ಸಂಬಂಧಿಸಿದಂತೆ ನವೆಂಬರ್ 8, 2021 ರಂದು ಮತ್ತೆ ಪ್ರತ್ಯೇಕ ನಿರ್ದೇಶನ ನೀಡುವುದಾಗಿ ನ್ಯಾಯಾಲಯ ತಿಳಿಸಿತು.

Kannada Bar & Bench
kannada.barandbench.com