ಅಶ್ಲೀಲ ಪೋಸ್ಟ್ ಲೈಕ್ ಮಾಡುವುದು ಅಪರಾಧವಲ್ಲ ಆದರೆ ಶೇರ್ ಅಥವಾ ರೀಟ್ವೀಟ್ ಮಾಡುವುದು ಅಪರಾಧ: ಅಲಾಹಾಬಾದ್ ಹೈಕೋರ್ಟ್

ಅಶ್ಲೀಲ ಪೋಸ್ಟ್ ಲೈಕ್ ಮಾಡುವುದು ಅಪರಾಧವಲ್ಲ ಆದರೆ ಶೇರ್ ಅಥವಾ ರೀಟ್ವೀಟ್ ಮಾಡುವುದು ಅಪರಾಧ: ಅಲಾಹಾಬಾದ್ ಹೈಕೋರ್ಟ್

ಅಂತಹ ಪೋಸ್ಟ್ ಹಂಚಿಕೊಳ್ಳುವುದು ಅಥವಾ ಮರುಟ್ವೀಟ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67ರ ಅಡಿಯಲ್ಲಿ ʼಪ್ರಸರಣʼಕ್ಕೆ ಸಮನಾಗಿದ್ದು ದಂಡನಾರ್ಹವಾಗಿರುತ್ತದೆ ಎಂದಿದೆ ನ್ಯಾಯಾಲಯ.

ಫೇಸ್‌ಬುಕ್ ಅಥವಾ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಅಶ್ಲೀಲ ಪೋಸ್ಟ್‌ಗಳನ್ನು ಲೈಕ್‌ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67ರ ಅಡಿ ಅಪರಾಧವಾಗುವುದಿಲ್ಲ ಎಂದು  ಅಲಾಹಾಬಾದ್‌ ಹೈಕೋರ್ಟ್‌  ಈಚೆಗೆ ಹೇಳಿದೆ [ಮೊಹಮ್ಮದ್ ಇಮ್ರಾನ್ ಕಾಜಿ ವಿರುದ್ಧ ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಪೋಸ್ಟ್  ಹಂಚಿಕೊಳ್ಳುವುದು ಅಥವಾ ಮರುಟ್ವೀಟ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ರ ಅಡಿಯಲ್ಲಿ ʼಪ್ರಸರಣ'ಕ್ಕೆ ಸಮನಾಗಿದ್ದು ದಂಡನಾರ್ಹವಾಗಿರುತ್ತದೆ ಎಂದು ಅದು ತೀರ್ಪು ನೀಡಿದೆ.  

ಕೇವಲ ಆಕ್ಷೇಪಾರ್ಹ ಪೋಸ್ಟ್ ಅನ್ನು ʼಲೈಕ್‌ʼ ಮಾಡುವುದು (ಇಷ್ಟಪಡುವುದು) ಅಂತಹ ವಸ್ತುವಿಷಯವನ್ನು ಪ್ರಕಟಿಟಿಸುವುದಕ್ಕೆ ಅಥವಾ "ಪ್ರಸರಣ" ಮಾಡುವುದಕ್ಕೆ ಸಮನಾಗುವುದಿಲ್ಲ ಎಂದು ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಸ್ಪಷ್ಟಪಡಿಸಿದ್ದಾರೆ.

“ಒಂದು ಪೋಸ್ಟ್ ಅಥವಾ ಸಂದೇಶವನ್ನು ಪೋಸ್ಟ್ ಮಾಡಿದಾಗ ಅದನ್ನು ಪ್ರಕಟಿಸಲಾಗಿದೆ ಎಂದು ಹೇಳಬಹುದು ಮತ್ತು ಅದನ್ನು ಹಂಚಿಕೊಂಡಾಗ ಅಥವಾ ಮರುಟ್ವೀಟ್ ಮಾಡಿದಾಗ ಅದು ರವಾನೆಯಾಗುತ್ತದೆ  ಎಂದು ಹೇಳಬಹುದು ... ಪೋಸ್ಟ್ ಅನ್ನು ಇಷ್ಟಪಡುವುದು ಎಂಬುದು ಪೋಸ್ಟ್ ಪ್ರಕಟಿಸುವುದಕ್ಕೆ ಅಥವಾ ರವಾನಿಸುವುದಕ್ಕೆ ಸಮನಾಗಿರುವುದಿಲ್ಲ, ಆದ್ದರಿಂದ , ಕೇವಲ ಪೋಸ್ಟ್ ಲೈಕ್ ಮಾಡುವುದು ಐಟಿ ಕಾಯಿದೆಯ ಸೆಕ್ಷನ್ 67ರ ವ್ಯಾಪ್ತಿಗೆ ಬರುವುದಿಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

Also Read
ಐ ಟಿ ನಿಯಮಾವಳಿಗೆ ತಿದ್ದುಪಡಿ: ಹೇಗಿರಲಿದೆ ದೂರು ಮೇಲ್ಮನವಿ ಸಮಿತಿಯ ಸ್ವರೂಪ?

ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ  ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಈ ಪೋಸ್ಟ್‌ಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ ಸುಮಾರು 600-700 ಜನರು ನೆರೆಯಲು ಕಾರಣವಾಗಿವೆ ಎಂದು ಪೊಲೀಸರು ಆರೋಪಿಸಿದ್ದರು. ಆರೋಪಿ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಅವರು ಅಪರಾಧ ಎಸಗಿದ್ದಾರೆಂದು ಸೂಚಿಸುವ ಯಾವುದೇ ಸಾಕ್ಷ್ಯ ಅವರ ವಿರುದ್ಧ ಇಲ್ಲ ಎಂದರು. ಆದರೆ ಪೋಸ್ಟನ್ನು ಅರ್ಜಿದಾರರು ಲೈಕ್‌ ಮಾಡಿದ್ದಾರೆ ಎಂದು ತನಿಖಾಧಿಕಾರಿ ತಿಳಿಸಿದ್ದರು.  

ಪ್ರಕರಣದಲ್ಲಿ ಐಟಿ ಕಾಯಿದೆಯ ಸೆಕ್ಷನ್ 67 ಅನ್ವಯವಾಗುವುದರಿಂದ, ನಿಬಂಧನೆ ಪರಿಶೀಲಿಸಿದ ನ್ಯಾಯಾಲಯವು ಯಾವುದೇ ವ್ಯಕ್ತಿಗಳನ್ನು ಅನೈತಿಕತೆಗೆ ದೂಡುವ ಮತ್ತು ಭ್ರಷ್ಟಗೊಳಿಸುವಂತಹ ಓದಬಹುದಾದ, ನೋಡಬಹುದಾದ ಅಥವಾ ಕೇಳಬಹುದಾದ ಸಂದೇಶಗಳನ್ನು ಪ್ರಕಟಿಸುವುದು ಅಥವಾ ವಿತರಿಸುವುದು ಅಥವಾ ಅಂತಹದ್ದನ್ನು ಪ್ರಕಟಿಸಲು, ಪ್ರಸರಣ ಮಾಡಲು ಕಾರಣರಾದಾಗ ಮಾತ್ರ ಈ ನಿಬಂಧನೆ ಅನ್ವಯಿಸುತ್ತದೆ ಎಂಬ ತೀರ್ಮಾನಕ್ಕೆ ಬಂದಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ಅದು ರದ್ದುಗೊಳಿಸಿತು. 

Related Stories

No stories found.
Kannada Bar & Bench
kannada.barandbench.com