₹2 ಲಕ್ಷಕ್ಕಿಂತ ಹೆಚ್ಚಿನ ನಗದು ಪಾವತಿ ಪ್ರಕರಣಗಳ ಬಗ್ಗೆ ನ್ಯಾಯಾಲಯಗಳು ಐಟಿ ಅಧಿಕಾರಿಗಳಿಗೆ ತಿಳಿಸಬೇಕು: ಸುಪ್ರೀಂ

ಆಸ್ತಿ ನೋಂದಣಿ ದಾಖಲೆಯಲ್ಲಿ ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಪಾವತಿ ತೋರಿಸಿದರೆ, ಸಂಬಂಧಪಟ್ಟ ಸಬ್-ರಿಜಿಸ್ಟ್ರಾರ್‌ಗಳು ಅದರ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಕೂಡ ನ್ಯಾಯಾಲಯ ನಿರ್ದೇಶಿಸಿದೆ.
Supreme Court
Supreme Court
Published on

₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಪಾವತಿ ಒಳಗೊಂಡಿರುವ ಮೊಕದ್ದಮೆಗಳಲ್ಲಿ, ಸಂಬಂಧಪಟ್ಟ ನ್ಯಾಯಾಲಯ ಸ್ಥಳೀಯ ಆದಾಯ ತೆರಿಗೆ ಇಲಾಖೆಗೆ ವಹಿವಾಟನ್ನು ಪರಿಶೀಲಿಸಲು ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶಿಸಿದೆ [ ದಿ ಕರೆಸ್ಪಾಂಡೆನ್ಸ್ ಆರ್‌ಬಿಎಎನ್‌ಎಂಎಸ್‌ ಎಜುಕೇಶನಲ್ ಮತ್ತು ಬಿ ಗುಣಶೇಖರ್ ಇನ್ನಿತರರ ನಡುವಣ ಪ್ರಕರಣ].

₹2 ಲಕ್ಷಕ್ಕಿಂತ ಹೆಚ್ಚಿನ ವಹಿವಾಟುಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಕಪ್ಪು ಹಣವನ್ನು ನಿಗ್ರಹಿಸಲು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269ST ಜಾರಿಗೆ ತರಲಾಗಿದ್ದು ಅದನ್ನು ಉಲ್ಲಂಘಿಸಿದರೆ ದಂಡ ವಿಧಿಸಲು ಅವಕಾಶವಿದೆ.

Also Read
ಮಾರುತಿ ಸುಜುಕಿ ವಿರುದ್ಧದ ಆದಾಯ ತೆರಿಗೆ ನಿರ್ಧರಣಾ ನೋಟಿಸ್ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಆಸ್ತಿ ನೋಂದಣಿ ದಾಖಲೆಯಲ್ಲಿ ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಪಾವತಿ ತೋರಿಸಿದರೆ, ಸಂಬಂಧಪಟ್ಟ ಸಬ್-ರಿಜಿಸ್ಟ್ರಾರ್‌ಗಳು ಅದರ ಬಗ್ಗೆ ಆದಾಯ ತೆರಿಗೆ ಪ್ರಾಧಿಕಾರಕ್ಕೆ ತಿಳಿಸಬೇಕು ಎಂದು ಕೂಡ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ನಿರ್ದೇಶಿಸಿತು.

ಒಂದು ವೇಳೆ ಆದಾಯ ತೆರಿಗೆ ಪ್ರಾಧಿಕಾರವು ಯಾವುದೇ ಮೂಲದ ಮೂಲಕ ಅಥವಾ ವಿಚಾರಣೆಯ ಸಮಯದಲ್ಲಿ ಆಸ್ತಿ ವ್ಯವಹಾರದಲ್ಲಿ ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದನ್ನು ಪಾವತಿಸಲಾಗಿದೆ ಎಂದು ಕಂಡುಕೊಂಡರೆ ಮತ್ತು ನೋಂದಣಿ ಅಧಿಕಾರಿ ಅದನ್ನು ವರದಿ ಮಾಡದಿದ್ದರೆ ಪ್ರಕರಣವನ್ನು ಸಂಬಂಧಿತ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ವರದಿ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.

1873ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾದ ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿರುವ ಆರ್‌ಬಿಎಎನ್ಎಂಎಸ್ ಶಿಕ್ಷಣ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಇದು ಶೈಕ್ಷಣಿಕ ಮತ್ತು ಕ್ರೀಡಾ ಯೋಜನೆಗಳ ಮೂಲಕ ಅಂಚಿನಲ್ಲಿರುವ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದೆ. 1905ರಲ್ಲಿ ಟ್ರಸ್ಟ್‌ಗೆ ಜಮೀನಿನ ಗುತ್ತಿಗೆ ಹಕ್ಕುಗಳನ್ನು ನೀಡಲಾಯಿತು, ಇದನ್ನು ಔಪಚಾರಿಕವಾಗಿ 1929ರಲ್ಲಿ ತಿಳಿಸಲಾಯಿತು. ಅಂದಿನಿಂದ, ಸಂಸ್ಥೆಯು ನಿರಂತರ, ವಿವಾದರಹಿತ ಸ್ವಾಧೀನದಲ್ಲಿದ್ದು ಸಾರ್ವಜನಿಕ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಭೂಮಿಯನ್ನು ಬಳಸುತ್ತಿತ್ತು.

2018 ರಲ್ಲಿ ಪ್ರತಿವಾದಿಗಳು ಆಸ್ತಿಯಲ್ಲಿ ಮೂರನೇಯವರ ಹಿತಾಸಕ್ತಿ ತಡೆಯಲು ಶಾಶ್ವತ ತಡೆಯಾಜ್ಞೆ ಕೋರಿ ಸಿವಿಲ್ ಮೊಕದ್ದಮೆ ಹೂಡಿದಾಗ ಕಾನೂನು ವ್ಯಾಜ್ಯ ಉದ್ಭವಿಸಿತು.  ಏಪ್ರಿಲ್ 10, 2018 ರಂದು ಅವರು (ಪ್ರತಿವಾದಿಗಳು) ಮತ್ತು ರಮೇಶ್ ಎಸ್ ರೆಡ್ಡಿ ಅವರು ಮಹೇಶ್ವರಿ ರಂಗನಾಥನ್ ಮತ್ತು ಇತರರೊಂದಿಗೆ ₹ 9 ಕೋಟಿಗೆ ಮಾರಾಟ ಮಾಡುವ ಒಪ್ಪಂದವನ್ನು ಆಧರಿಸಿ ಅರ್ಜಿ ಸಲ್ಲಿಸಲಾಗಿತ್ತು. ₹ 75 ಲಕ್ಷಗಳನ್ನು ನಗದು ರೂಪದಲ್ಲಿ ಪಾವತಿಸಲಾಗಿದ್ದರೂ ಒಪ್ಪಂದವು 1929ರಿಂದ ಕಾನೂನುಬದ್ಧ ಸ್ವಾಧೀನವನ್ನು ಹೊಂದಿದ್ದ ಆರ್‌ಬಿಎಎನ್ಎಂಎಸ್ ನೊಂದಿಗೆ ಇರಲಿಲ್ಲ ಎಂದು ವಾದಿಸಲಾಗಿತ್ತು. 

ಇದಕ್ಕೆ ಪ್ರತಿಕ್ರಿಯೆಯಾಗಿ, ಆರ್‌ಬಿಎಎನ್ಎಂಎಸ್, ಸಿಪಿಸಿ ಆದೇಶ VII ನಿಯಮ 11(a) ಮತ್ತು (d) ಅಡಿಯಲ್ಲಿ ಅರ್ಜಿಯನ್ನು ತಿರಸ್ಕರಿಸುವಂತೆ ಕೋರಿತು. ಪ್ರತಿವಾದಿಗಳು ಆಸ್ತಿಯ ಮೇಲೆ ಯಾವುದೇ ಕಾನೂನುಬದ್ಧ ಹಕ್ಕು ಅಥವಾ ಒಡೆತನ ಹೊಂದಿಲ್ಲ. ಜೊತೆಗೆ 1882 ರ ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 54ರ ಅಡಿಯಲ್ಲಿ ಸ್ಥಿರ ಆಸ್ತಿಯಲ್ಲಿ ಮಾರಾಟ ಮಾಡುವ ಒಪ್ಪಂದವು ಜಾರಿಗೊಳಿಸಬಹುದಾದ ಹಿತಾಸಕ್ತಿಯನ್ನು ಸೃಷ್ಟಿಸುವುದಿಲ್ಲ ಎಂದು ವಾದಿಸಿತು.

ವಿಚಾರಣಾ ನ್ಯಾಯಾಲಯ ಅರ್ಜಿಯನ್ನು ಜೂನ್ 2020 ರಲ್ಲಿ ತಿರಸ್ಕರಿಸಿತು. ಪರಿಣಾಮ ಆರ್‌ಬಿಎಎನ್ಎಂಎಸ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು, ಅರ್ಜಿಯನ್ನು ಭಾಗಶಃ ಅಂಗೀಕರಿಸಿದ ಅದು ಮನವಿಯನ್ನು ಮರುಪರಿಶೀಲಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು. ಬಳಿಕ ವಿಚಾರಣಾ ನ್ಯಾಯಾಲಯ ಮತ್ತೆ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮೇಲ್ಮನವಿದಾರರು ಎರಡನೇ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದರು ಅದನ್ನು ಹೈಕೋರ್ಟ್‌ ಜೂನ್ 2022ರಲ್ಲಿ ವಜಾಗೊಳಿಸಿತು. ಹೀಗಾಗಿ ಆರ್‌ಬಿಎಎನ್‌ಎಂಎಸ್‌ ಸುಪ್ರೀಂ ಕೋರ್ಟ್‌ ಕದ ತಟ್ಟಿತು.

ಪ್ರತಿವಾದಿಗಳು ಮೇಲ್ಮನವಿದಾರರೊಂದಿಗೆ ಗೌಪ್ಯತೆಯ ಕೊರತೆಯನ್ನು ಹೊಂದಿದ್ದಾರೆ, ಆಸ್ತಿಯ ಮೇಲೆ ಯಾವುದೇ ಹಕ್ಕು ಅಥವಾ ಕಾನೂನುಬದ್ಧ ಹಕ್ಕನ್ನು ಹೊಂದಿಲ್ಲ ಮತ್ತು ಮೂರನೇ ವ್ಯಕ್ತಿಗಳು ಕಾರ್ಯಗತಗೊಳಿಸಿದ ಮಾರಾಟ ಒಪ್ಪಂದದ ಆಧಾರದ ಮೇಲೆ ಮೊಕದ್ದಮೆಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್ ಮೇಲ್ಮನವಿ ಪುರಸ್ಕರಿಸಿ ಆದೇಶ VII ನಿಯಮ 11(ಎ) ಮತ್ತು ಸಿಪಿಸಿ (ಡಿ) ಅಡಿ ದೂರು ತಿರಸ್ಕರಿಸಿತು.

Also Read
ಸುಪ್ರೀಂ ಹಾಗೂ ಹೈಕೋರ್ಟ್‌ಗಳ ಹಾಲಿ ನ್ಯಾಯಮೂರ್ತಿಗಳ ಪೈಕಿ ಆಸ್ತಿ ವಿವರ ಘೋಷಿಸಿದವರ ಪ್ರಮಾಣ ಕೇವಲ 12%

ಇಂತಹ ಊಹಾತ್ಮಕ ಮತ್ತು ಆಧಾರರಹಿತ ಮೊಕದ್ದಮೆಗಳಿಗೆ ಅವಕಾಶ ನೀಡುವುದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಮತ್ತು ದತ್ತಿ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಆದ್ದರಿಂದ, ಭವಿಷ್ಯದಲ್ಲಿ ಕಾನೂನು ಪ್ರಕ್ರಿಯೆಯ ದುರುಪಯೋಗ ಮಾಡಿಕೊಳ್ಳದಂತೆ ಪ್ರತಿವಾದಿಗಳಿಗೆ ಎಚ್ಚರಿಕೆ ನೀಡಿ ಮೊಕದ್ದಮೆಯನ್ನು ವಜಾಗೊಳಿಸಿತು.

₹75 ಲಕ್ಷ ನಗದು ಪಾವತಿ ಗಂಭೀರ ಕಾನೂನು ಮತ್ತು ಆರ್ಥಿಕ ಕಳವಳಗಳನ್ನು ಹುಟ್ಟುಹಾಕಿದೆ, ಇದರಲ್ಲಿ ಆದಾಯ ತೆರಿಗೆ ಕಾಯಿದೆ ಉಲ್ಲಂಘನೆಯ ಸಾಧ್ಯತೆಯೂ ಸೇರಿದೆ ಎಂದ ಅದು ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ಪಾವತಿಯ ಮೊಕದ್ದಮೆಗಳನ್ನು ಹೂಡಿದಾಗ ಆದಾಯ ತೆರಿಗೆ ಅಧಿಕಾರಿಗಳಿಗೆ ತಿಳಿಸಲು ಸಿವಿಲ್ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
The_Correspondence_RBANMS_Educational_Institution_VERSUS_B__Gunashekar___Another
Preview
Kannada Bar & Bench
kannada.barandbench.com