ಪತ್ನಿಯ ಲಿಂಕ್ಡ್‌ಇನ್ ಪ್ರೊಫೈಲ್ ಆದಾಯಕ್ಕೆ ಸಾಕ್ಷ್ಯವಲ್ಲ, ಜೀವನಾಂಶ ನಿರಾಕರಿಸಲು ಅದು ಆಧಾರವಲ್ಲ: ಬೆಂಗಳೂರು ನ್ಯಾಯಾಲಯ

ಶೈಕ್ಷಣಿಕ ಅರ್ಹತೆ ಅಥವಾ ಉದ್ಯೋಗ ಪಡೆಯುವ ಸಾಮರ್ಥ್ಯದ ಆಧಾರದ ಮೇಲೆ ಜೀವನಾಂಶ ನಿರಾಕರಿಸಲಾಗದು; ಪತ್ನಿಗೆ ಪ್ರತಿ ತಿಂಗಳು ₹20,000 ಪಾವತಿಸುವಂತೆ ಪತಿಗೆ ಆದೇಶಿಸಿದ ನ್ಯಾಯಾಲಯ.
Bengaluru city civil court, Linked in, Facebook
Bengaluru city civil court, Linked in, Facebook
Published on: 

ಮಹಿಳೆಯ ಲಿಂಕ್ಡಿನ್, ಫೇಸ್‌ಬುಕ್‌ ಪ್ರೊಫೈಲ್‌ಗಳು ಅಥವಾ ಫೋಟೊಗಳನ್ನು ಮಾತ್ರ ಆಧರಿಸಿ ಆಕೆ ಸ್ವಂತ ಜೀವನ ನಿರ್ವಹಣೆ ಹಾಗೂ ಮಗುವಿನ ಪೋಷಣೆಗೆ ಸಾಕಷ್ಟು ಆದಾಯ ಹೊಂದಿದ್ದಾಳೆ ಎಂದು ನಿರ್ಧರಿಸಲಾಗದು. ಉದ್ಯೋಗ ಮಾಡುವ ಸಾಮರ್ಥ್ಯ ಅಥವಾ ಶೈಕ್ಷಣಿಕ ಅರ್ಹತೆಯೂ ಮಹಿಳೆಗೆ ಜೀವನಾಂಶ ನಿರಾಕರಿಸಲು ಆಧಾರವಾಗುವುದಿಲ್ಲ ಎಂದು ಬೆಂಗಳೂರಿನ ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೆಂಡತಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಆಕೆಗೆ ಆರ್ಥಿಕ ನೆರವಿನ ಅಗತ್ಯವಿಲ್ಲ ಎಂಬ ಪತಿಯ ವಾದವನ್ನು ತಿರಸ್ಕರಿಸಿದ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಮೋಹನ್ ಪ್ರಭು ಅವರು, ಪತ್ನಿಗೆ ಮಾಸಿಕ ₹20,000 ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿದ್ದಾರೆ.

ವಿಚಾರಣೆ ವೇಳೆ ಪತಿಯ ಪರ ವಕೀಲರು ಪತ್ನಿ ಉದ್ಯೋಗದಲ್ಲಿದ್ದಾರೆ ಎಂದು ವಾದಿಸಲು ಆಕೆಯ ಕೆಲವು ಫೋಟೋಗಳು, ಲಿಂಕ್ಡಿನ್‌ ಪ್ರೊಫೈಲ್ ಮತ್ತು ಫೇಸ್‌ಬುಕ್‌ ಪ್ರೊಫೈಲ್ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಕುರಿತು ನ್ಯಾಯಾಲಯ, “ವಿಚಾರಣೆ ವೇಳೆ ಪ್ರತಿವಾದಿಯ ಪರ ವಕೀಲರು ಕೆಲವು ಫೋಟೋಗಳು, ಲಿಂಕ್ಡಿನ್ ಪ್ರೊಫೈಲ್ ಮತ್ತು ಫೇಸ್‌ಬುಕ್‌ ಪ್ರೊಫೈಲ್ ಫೋಟೋಗಳನ್ನು ಸಲ್ಲಿಸಿ, ಅರ್ಜಿದಾರ ಮಹಿಳೆ ಉದ್ಯೋಗದಲ್ಲಿದ್ದಾರೆ ಎಂದು ವಾದಿಸಿದ್ದಾರೆ” ಎಂದು ದಾಖಲಿಸಿದೆ.

ಆದರೆ, ಪತ್ನಿ ನಿಜವಾಗಿ ಎಷ್ಟು ಆದಾಯ ಗಳಿಸುತ್ತಿದ್ದಾರೆ ಎಂಬುದನ್ನು ಪತಿ ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

“ವಾದ ಮಂಡಿಸುವ ಸಂದರ್ಭದಲ್ಲಿ ಪ್ರತಿವಾದಿಯ ಪರ ವಕೀಲರು ಸಲ್ಲಿಸಿದ ದಾಖಲೆಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗದು ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸರಿಯಾಗಿಯೇ ಅಭಿಪ್ರಾಯಪಟ್ಟಿದೆ” ಎಂದು ನ್ಯಾಯಾಲಯ ತಿಳಿಸಿದೆ.

ಮಹಿಳೆ ಯಾವುದಾದರೂ ಉದ್ಯೋಗಕ್ಕೆ ಸೇರಿದ್ದಾರೆ ಎಂದು ಊಹಿಸಿದರೂ, ಅದರಿಂದ ಆಕೆ ತನ್ನನ್ನು ಹಾಗೂ ಮಗುವನ್ನು ಪೋಷಿಸಲು ಸಾಕಷ್ಟು ಆದಾಯ ಹೊಂದಿದ್ದಾರೆ ಎಂದು ನಿರ್ಧರಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಅರ್ಜಿದಾರ ಮಹಿಳೆ ಯಾವುದಾದರೂ ಉದ್ಯೋಗಕ್ಕೆ ಸೇರಿದ್ದಾರೆ ಎಂದು ಊಹಿಸಿದರೂ, ತನ್ನನ್ನು ಹಾಗೂ ಮಗುವನ್ನು ನಿರ್ವಹಿಸಲು ಸಾಕಷ್ಟು ಆದಾಯ ಹೊಂದಿದ್ದಾರೆ ಎಂದು ಹೇಳಲಾಗದು” ಎಂದು ನ್ಯಾಯಾಲಯ ಹೇಳಿದೆ.

2014ರಲ್ಲಿ ಬೆಂಗಳೂರಿನಲ್ಲಿ ವಿವಾಹವಾಗಿದ್ದ ದಂಪತಿ ಬಳಿಕ ಅಮೆರಿಕಕ್ಕೆ ತೆರಳಿದ್ದರು. ಪತಿ ಅಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಗಂಡು ಮಗುವಿದ್ದು, ನಂತರ ಇಬ್ಬರ ನಡುವಿನ ಸಂಬಂಧ ಹದಗೆಟ್ಟಿತ್ತು.

2017ರ ನವೆಂಬರ್‌ನಲ್ಲಿ ಮಹಿಳೆ ಮಗುವಿನೊಂದಿಗೆ ಭಾರತಕ್ಕೆ ಮರಳಿದ್ದು, ತನ್ನ ಪೋಷಕರೊಂದಿಗೆ ವಾಸಿಸಲು ಆರಂಭಿಸಿದ್ದರು.

ಬಳಿಕ ಪತಿಯಿಂದ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಕಿರುಕುಳ ಅನುಭವಿಸಿದ್ದಾಗಿ ಆರೋಪಿಸಿ, ಮಹಿಳೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯಿದೆ, 2005ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದರು.

2025ರ ಏಪ್ರಿಲ್‌ನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಗುವಿನ ನಿರ್ವಹಣೆಗಾಗಿ ತಿಂಗಳಿಗೆ ₹15,000, ಶೈಕ್ಷಣಿಕ ವೆಚ್ಚಕ್ಕಾಗಿ ವಾರ್ಷಿಕ ₹1.6 ಲಕ್ಷ ಹಾಗೂ ಮಹಿಳೆಗೆ ₹8 ಲಕ್ಷ ಪರಿಹಾರ ನೀಡುವಂತೆ ಪತಿಗೆ ಆದೇಶಿಸಿತ್ತು.

ಆದರೆ, ಮಹಿಳೆಯ ಶೈಕ್ಷಣಿಕ ಅರ್ಹತೆ ಮತ್ತು ಉದ್ಯೋಗ ಪಡೆಯುವ ಸಾಮರ್ಥ್ಯವನ್ನು ಪರಿಗಣಿಸಿ, ಆಕೆಗೆ ಪ್ರತ್ಯೇಕ ಜೀವನಾಂಶ ನೀಡಲು ನಿರಾಕರಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ದಂಪತಿ ಇಬ್ಬರೂ ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ವಿಚಾರಣೆ ವೇಳೆ, ಕೌಟುಂಬಿಕ ಹಿಂಸೆಯ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಮಹಿಳೆ ನಿರುದ್ಯೋಗಿಯಾಗಿದ್ದರು ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ.

ಪತಿಯ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳಲ್ಲಿಯೂ ಪತ್ನಿ ಉದ್ಯೋಗದಲ್ಲಿದ್ದಾರೆ, ಆದಾಯ ಗಳಿಸುತ್ತಿದ್ದಾರೆ ಅಥವಾ ಆದಾಯ ತರುವಂತಹ ಆಸ್ತಿಗಳನ್ನು ಹೊಂದಿದ್ದಾರೆ ಎಂಬ ಉಲ್ಲೇಖ ಇರಲಿಲ್ಲ. ಮಹಿಳೆಯ ಶೈಕ್ಷಣಿಕ ಅರ್ಹತೆ ಅಥವಾ ಉದ್ಯೋಗ ಪಡೆಯುವ ಸಾಮರ್ಥ್ಯವನ್ನು ಮಾತ್ರ ಆಧರಿಸಿ ಜೀವನಾಂಶ ನಿರಾಕರಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಅಪ್ರಾಪ್ತ ಮಗುವಿನ ಪಾಲನೆ ಮಾಡುತ್ತಿರುವ ತಾಯಿಯ ಜವಾಬ್ದಾರಿಗಳನ್ನೂ ನ್ಯಾಯಾಲಯ ಪರಿಗಣಿಸಿದೆ.

“ಮಗುವಿನ ಪಾಲನೆ ಹೊಂದಿರುವ ತಾಯಿ, ಮಗುವಿನ ಬೆಳವಣಿಗೆಗಾಗಿ ಹಣ ಖರ್ಚು ಮಾಡುವುದಷ್ಟೇ ಅಲ್ಲದೆ, ಅದನ್ನು ಬೆಳೆಸಲು ಗಣನೀಯ ಸಮಯ ಮತ್ತು ಶ್ರಮವನ್ನೂ ವ್ಯಯಿಸುತ್ತಾರೆ. ಅದನ್ನು ಹಣದ ರೂಪದಲ್ಲಿ ಲೆಕ್ಕ ಹಾಕಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಹಿಳೆಯ ಶೈಕ್ಷಣಿಕ ಅರ್ಹತೆ ಅಥವಾ ಉದ್ಯೋಗ ಪಡೆಯುವ ಸಾಧ್ಯತೆ ಮಾತ್ರ ಜೀವನಾಂಶ ನಿರಾಕರಿಸಲು ಸರಿಯಾದ ಕಾರಣವಾಗುವುದಿಲ್ಲ ಎಂದು ಪುನರುಚ್ಚರಿಸಿದ ನ್ಯಾಯಾಲಯ, ಜೀವನಾಂಶ ನಿರ್ಧರಿಸುವಾಗ ಇಬ್ಬರ ನೈಜ ಆರ್ಥಿಕ ಪರಿಸ್ಥಿತಿ, ಆದಾಯ ಗಳಿಸುವ ಸಾಮರ್ಥ್ಯ ಹಾಗೂ ಅಪ್ರಾಪ್ತ ಮಗುವಿನ ಪಾಲನೆಯ ಜವಾಬ್ದಾರಿಗಳನ್ನು ಪರಿಗಣಿಸಬೇಕು ಎಂದು ತಿಳಿಸಿದೆ.

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯಿದೆ, 2005ರ ಅಡಿಯಲ್ಲಿ ಆರ್ಥಿಕ ಕಿರುಕುಳವನ್ನೂ ಕೌಟುಂಬಿಕ ಹಿಂಸೆಯ ಒಂದು ರೂಪವಾಗಿ ಗುರುತಿಸಲಾಗಿದೆ. ಆರ್ಥಿಕ ನಿರ್ಲಕ್ಷ್ಯಕ್ಕೂ ಈ ಕಾಯ್ದೆಯಡಿ ಪರಿಹಾರ ಪಡೆಯಲು ಅವಕಾಶವಿದೆ ಎಂದು ನ್ಯಾಯಾಲಯ ಗಮನಿಸಿದೆ.

ಅಂತಿಮವಾಗಿ ಮಹಿಳೆಯ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಪತ್ನಿಗೆ ಮಾಸಿಕ ₹20,000 ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿದೆ.