
ವಕೀಲರು ತಮ್ಮ ಪ್ರಕರಣಗಳನ್ನು ಮುಂದೂಡುವಂತೆ ಕೋರುವ ಯೋಜಿತವಲ್ಲದ ವಿಧಾನದ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಹತಾಶೆ ವ್ಯಕ್ತಪಡಿಸಿದೆ.
ವಕೀಲರೊಬ್ಬರು ತಾವು ಹಾಜರಾಗುತ್ತಿರುವ ಪ್ರಕರಣವನ್ನು ಮುಂದೂಡುವಂತೆ ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ರಜಾಕಾಲೀನ ಪೀಠಕ್ಕೆ ಮನವಿ ಮಾಡಿದರು.
ಆಗ ನ್ಯಾಯನೂರ್ತಿಗಳು “ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳನ್ನು ಪಟ್ಟಿ ಮಾಡಲು ಸಮಯ ಹಾಗೂ ಹಣ ಎರಡೂ ಬೇಕಾಗುತ್ತದೆ. ಅದನ್ನು ಲಘುವಾಗಿ ಪರಿಗಣಿಸಬಾರದು” ಎಂದು ಒತ್ತಿ ಹೇಳಿದರು. ಅಲ್ಲದೆ ರಜೆಕಾಲದಲ್ಲಿ ಪಟ್ಟಿಯಾಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಕ್ಷಕಾರರು ಕೇವಲ ಮುಂದೂಡಿಕೆ ಬಯಸುತ್ತಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
"ಸುಪ್ರೀಂಕೋರ್ಟ್‌ನಲ್ಲಿ ಪಟ್ಟಿ ಮಾಡುವ ಪ್ರತಿಯೊಂದು ಪ್ರಕರಣಕ್ಕೂ ಸಮಯ ಮತ್ತು ಹಣದ ಅಗತ್ಯವಿರುತ್ತದೆ. ನೀವು ಪ್ರಕರಣಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ನೀವೆಲ್ಲರೂ ಪ್ರಸ್ತಾಪಿಸಿದ ಪ್ರಕರಣಗಳು ರಜೆ ಕಾಲದಲ್ಲಿ ಪಟ್ಟಿಯಾಗಿದ್ದು ಈಗ ನೀವು ಮುಂದೂಡುವಂತೆ ಕೋರುತ್ತಿದ್ದೀರಿ” ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದರು.
ಬಳಿಕ ಪ್ರಕರಣವನ್ನು ಮುಂದೂಡಲು ನಿರಾಕರಿಸಿದ ಅವರು ಪ್ರಕರಣದ ದಾಖಲೆಗಳನ್ನು ಓದಿ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ವಕೀಲರಿಗೆ ತಾಕೀತು ಮಾಡಿದರು.