ವಕೀಲರಿಗೆ ವಹಿಸಿದ ಬಳಿಕ ದಾವೆದಾರ ಪ್ರಕರಣದ ಸ್ಥಿತಿಗತಿ ಅರಿಯುವ ಹೊಣೆಯಿಂದ ವಿಮುಖನಾಗುವಂತಿಲ್ಲ: ದೆಹಲಿ ಹೈಕೋರ್ಟ್

ವಕೀಲರದ್ದು ಮಾತ್ರವಲ್ಲದೆ ತಮ್ಮ ಪ್ರಕರಣಗಳನ್ನು ಶ್ರದ್ಧೆಯಿಂದ ಮುಂದುವರಿಸುವ ಕರ್ತವ್ಯ ಮೊಕದ್ದಮೆ ಹೂಡುವವರದ್ದೂ ಆಗಿದೆ ಎಂದ ಪೀಠ.
Lawyers
Lawyers
Published on

ಕಾನೂನು ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರುವ ಮೊಕದ್ದಮೆದಾರರು ಪ್ರಕರಣ ವಿಳಂಬವಾಗಿದೆ ಎಂದು ವಕೀಲರನ್ನು ದೂಷಿಸುವುದಕ್ಕೆ ದೆಹಲಿ ಹೈಕೋರ್ಟ್‌ ಅಸಮ್ಮತಿ ಸೂಚಿಸಿದೆ [ರಾಹುಲ್ ಮಾವಾಯಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ವಕೀಲರದ್ದು ಮಾತ್ರವಲ್ಲದೆ ತಮ್ಮ ಪ್ರಕರಣಗಳನ್ನು ಶ್ರದ್ಧೆಯಿಂದ ಮುಂದುವರಿಸುವ ಕರ್ತವ್ಯ ಮೊಕದ್ದಮೆ ಹೂಡುವವರದ್ದೂ ಆಗಿದೆ ಎಂದು ನ್ಯಾಯಮೂರ್ತಿಗಳಾದ ಸಿ ಹರಿ ಶಂಕರ್ ಮತ್ತು ಅನೂಪ್ ಕುಮಾರ್ ಮೆಂಡಿರಟ್ಟ ಅವರಿದ್ದ ಪೀಠ ತಿಳಿಸಿದೆ.

Also Read
ದಾವೆದಾರರು ಜಾಗರೂಕರಾಗಿರಬೇಕು, ಪ್ರಕರಣ ವಿಳಂಬಕ್ಕೆ ವಕೀಲರನ್ನು ದೂಷಿಸುವಂತಿಲ್ಲ: ಸುಪ್ರೀಂ ಕೋರ್ಟ್

“ನ್ಯಾಯಾಲಯಗಳನ್ನು ಸಂಪರ್ಕಿಸುವಲ್ಲಿನ ನಿರ್ಲಕ್ಷ್ಯ ಹಾಗೂ ವಕೀಲರ ಹೆಗಲಿಗೆ ಹೊಣೆ ಹೊರಿಸುವ ಅಭ್ಯಾಸವನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ. ಅಂತಹ ಸಂದರ್ಭಗಳಲ್ಲಿ ವಕೀಲರ ಪರಿಷತ್ತಿಗೆ ದೂರು ನೀಡಿ ವಿಳಂಬ ವಿವರಿಸಲು ಯತ್ನಿಸುವುದು ಸುಲಭದ ಮಾರ್ಗವಾಗಿದೆ. ವಕೀಲರಿಗೆ ಪ್ರಕರಣ ವಹಿಸಿದ ಬಳಿಕ ದಾವೆದಾರ ಪ್ರಕರಣದ ಸ್ಥಿತಿಗತಿ ಅರಿಯುವ ತನ್ನೆಲ್ಲಾ ಹೊಣೆಯಿಂದ ವಿಮುಖನಾಗುವಂತಿಲ್ಲ” ಎಂದು ನ್ಯಾಯಾಲಯ ಬುದ್ಧಿವಾದ ಹೇಳಿದೆ.

ಪ್ರಕರಣ ಮುಂದುವರೆಸಲು ತಮ್ಮ ವಕೀಲರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಅರ್ಜಿದಾರರ ವಾದ ಒಪ್ಪದ ನ್ಯಾಯಾಲಯ ಆರು ವರ್ಷಗಳ ವಿಳಂಬದ ಬಳಿಕ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿತು.

"ಪ್ರಕರಣದಲ್ಲಿ ವಾದ ಮಂಡಿಸುತ್ತಿರುವ ಅಥವಾ ಅದನ್ನು ವಹಿಸಿಕೊಂಡಿರುವ ವಕೀಲರು ವಿಳಂಬ, ನಿರ್ಲಕ್ಷ್ಯ ಅಥವಾ ನಿರಾಸಕ್ತಿ ಹೊಂದಿದ್ದಾರೆ ಎಂಬ ಆಧಾರದ ಮೇಲಷ್ಟೇ ನ್ಯಾಯಾಲಯದ ಕದತಟ್ಟಿ ಅತಿಯಾದ ವಿಳಂಬ ವಿವರಿಸಲು ಯತ್ನಿಸುವ ಅನಾರೋಗ್ಯಕರ ಅಭ್ಯಾಸವನ್ನು ತಿರಸ್ಕರಿಸುತ್ತೇವೆ" ಎಂದು ಅದು ಹೇಳಿದೆ.

ದಾವೆದಾರನೊಬ್ಬ ಪ್ರಕರಣವನ್ನು ವಕೀಲನಿಗೆ ಒಪ್ಪಿಸಿದ ಬಳಿಕ ಅದರ ಬಗ್ಗೆ ಗಮನ ಹರಿಸುವ ತನ್ನೆಲ್ಲಾ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ.

ದೆಹಲಿ ಹೈಕೋರ್ಟ್‌

ಸರ್ಕಾರಿ ಹುದ್ದೆಗೆ ಸೇರಲು ದಾವೆದಾರನಿಗೆ ಇರುವ ಅರ್ಹತೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು 2016ರಲ್ಲಿ ಸಲ್ಲಿಸಲಾಗಿದ್ದ ಮನವಿಯನ್ನು 2018ರಲ್ಲಿ ನ್ಯಾಯಮಂಡಳಿ ವಜಾಗೊಳಿಸಿತ್ತು. ನಂತರ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಲು ದೆಹಲಿ ವಕೀಲರ ಬಳಿಗೆ ತೆರಳಿದ್ದರು.

ತಾನು ವಕೀಲರೊಂದಿಗೆ ದೂರವಾಣಿಯಲ್ಲಿ ಹಲವು ಬಾರಿ ಸಂವಾದ ನಡೆಸಿದ್ದೆ. ಪ್ರಕರಣದ ಪ್ರಗತಿ ಕುರಿತಂತೆ ವಕೀಲರು ತಪ್ಪು ಮಾಹಿತಿ ನೀಡಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ತಮಗೆ ಖುದ್ದು ಹಾಜರಾತಿ ಸಾಧ್ಯವಾಗಿರಲಿಲ್ಲ ಎಂದು ದಾವೆದಾರ ತಿಳಿಸಿದ್ದರು.

ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿಲ್ಲ ಎಂಬುದು ಕಳೆದ ಆಗಸ್ಟ್‌ನಲ್ಲಷ್ಟೇ ತನಗೆ ತಿಳಿದು ಬಂದಿದ್ದು, ನಂತರ ವಕೀಲರ ವಿರುದ್ಧ ಜಿಲ್ಲಾ ವಕೀಲರ ಸಂಘಕ್ಕೆ ದೂರು ನೀಡಿದ್ದೆ. ಈ ಕಾರಣಕ್ಕೆ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲು ವಿಳಂಬವಾಗಿರುವುದರಿಂದ ತಮ್ಮನ್ನು ಮನ್ನಿಸಬೇಕು ಎಂದು ಕೋರಿದ್ದರು.

Kannada Bar & Bench
kannada.barandbench.com