ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಹೊಸದಾಗಿ ಮಾಪ್-ಅಪ್ ಸುತ್ತು ನಡೆಸುವ ಸಂಬಂಧ ರಾಜ್ಯ ಸರ್ಕಾರ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್ ಕಳೆದ ವಾರ ಹಸಿರು ನಿಶಾನೆ ತೋರಿದೆ.
ನ್ಯಾಯಮೂರ್ತಿಗಳಾದ ಅರುಣ್ ಕುಮಾರ್ ಮತ್ತು ಪ್ರದೀಪ್ ಸಿಂಗ್ ಯೆರೂರ್ ನೇತೃತ್ವದ ವಿಭಾಗೀಯ ಪೀಠದ ಆದೇಶ ಇಂತಿದೆ:
ಮಧ್ಯಂತರ ವ್ಯವಸ್ಥೆ ಜಾರಿಗೆ ಅನುಮತಿ ನೀಡಿರುವ ನ್ಯಾಯಪೀಠವು ಹೀಗೆ ವಿವರಿಸಿದೆ:
“ಈ ರಿಟ್ ಅರ್ಜಿಗಳು ಇತ್ಯರ್ಥವಾಗುವವರೆಗೆ ಪ್ರತಿವಾದಿ ಸಂಸ್ಥೆಗಳು ನೀಡಿರುವ ಪ್ರವೇಶ ಕಾರ್ಡ್/ಪತ್ರಗಳು ಅದನ್ನು ಪಡೆದಿರುವ ವಿದ್ಯಾರ್ಥಿಗಳಿಗೆ, ತಮಗೆ ದಾಖಲಾತಿ ಅನುಮೋದನೆ ದೊರೆತಿರುವ ಸಂಬಂಧಪಟ್ಟ ಕಾಲೇಜುಗಳಿಗೆ ದಾಖಲಾಗಲು ಯಾವುದೇ ರೀತಿಯ ಅಧಿಕಾರವನ್ನು ನೀಡುವುದಿಲ್ಲ”.
ಸದಸ್ಯ ಕಾಲೇಜುಗಳ ಅರ್ಜಿದಾರರು-ಫೌಂಡೇಷನ್, ಮೇಲ್ಕಾಣಿಸಿದ ಸೂಚನೆಯಂತೆ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿರುವ ಕಾಲೇಜುಗಳು ನ್ಯಾಯಾಲಯವು ಹೊರಡಿಸುವ ಆದೇಶಕ್ಕೆ ಬದ್ಧವಾಗಿರುತ್ತವೆ ಮತ್ತು ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಸಂಬಂಧಿತ ಕಾಲೇಜುಗಳು ರಿಟ್ ಅರ್ಜಿಯ ಆದೇಶಕ್ಕೆ ಒಳಪಟ್ಟಿರುತ್ತವೆ,” ಎಂದು ಪೀಠವು ವಿವರಿಸಿದೆ.
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ಸಂಬಂಧ ಹೊಸದಾಗಿ ಕೌನ್ಸಿಲಿಂಗ್ ಗೆ ಅಭ್ಯರ್ಥಿಗಳ ನೋಂದಣಿ ನಡೆಸಲು ಅನುವು ಮಾಡಿ ಆಗಸ್ಟ್ 15ರಂದು ಆದೇಶ ಹೊರಡಿಸಿದ್ದ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳ ಆದೇಶ ಪ್ರಶ್ನಿಸಿ ಕರ್ನಾಟಕ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಪೀಠ ಮೇಲಿನ ಆದೇಶ ಹೊರಡಿಸಿದೆ.