ಸಾಲ ಮರುಪಾವತಿ ಮುಂದೂಡಿಕೆಯನ್ನು 2 ವರ್ಷದವರೆಗೆ ವಿಸ್ತರಿಸಲು ಸಾಧ್ಯ ಎಂದು ಸುಪ್ರೀಂಕೋರ್ಟ್‌ ಗೆ ತಿಳಿಸಿದ ಕೇಂದ್ರ

ಕೇಂದ್ರ ಸರ್ಕಾರ, ಆರ್‌ಬಿಐ ಮತ್ತು ಬ್ಯಾಂಕುಗಳ ಒಕ್ಕೂಟವು ಶೀಘ್ರವೇ ಒಗ್ಗೂಡಿ ಸಾಲ ಮರುಪಾವತಿ ಮುಂದೂಡಿಕೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಪರಿಹಾರವೊಂದನ್ನು ರೂಪಿಸಲಿವೆ ಎಂದು ನ್ಯಾಯಲಯಕ್ಕೆ ತಿಳಿಸಿದ ಸಾಲಿಸಿಟರ್‌ ಜನರಲ್‌.
ಸಾಲ ಮರುಪಾವತಿ ಮುಂದೂಡಿಕೆಯನ್ನು 2 ವರ್ಷದವರೆಗೆ ವಿಸ್ತರಿಸಲು ಸಾಧ್ಯ ಎಂದು ಸುಪ್ರೀಂಕೋರ್ಟ್‌ ಗೆ ತಿಳಿಸಿದ ಕೇಂದ್ರ
RBI

ಸಾಲ ಮರುಪಾವತಿ ಮುಂದೂಡಿಕೆ ಅವಧಿಯನ್ನು (ಮೊರೆಟೊರಿಯಂ) ಎರಡು ವರ್ಷಗಳವರೆಗೆ ವಿಸ್ತರಿಸಲು ಸಾಧ್ಯ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

ಮೊರೊಟೊರಿಯಂ ಅವಧಿಯಲ್ಲಿ ಕಂತಿನ ಬಡ್ಡಿಯ ಮೇಲೆ ಮರು ಬಡ್ಡಿ ವಿಧಿಸುವುದು ಸೇರಿದಂತೆ, ಮೊರೆಟೊರಿಯಂ ಅವಧಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ವೇಳೆ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಈ ವಿಷಯವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಆರ್‌ ಸುಭಾಷ್‌ ರೆಡ್ಡಿ ಮತ್ತು ಎಂ ಆರ್‌ ಷಾ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ.

ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದ ಅರ್ಜಿದಾರರೊಬ್ಬರು ಆಗಸ್ಟ್‌ 31ರ ನಂತರವೂ ಮೊರೆಟೊರಿಯಂ ವಿಸ್ತರಿಸಲು ಕೋರಿ ತಮ್ಮ ವಾದವನ್ನು ಅಲಿಸುವಂತೆ ಮನವಿ ಮಾಡಿದ್ದರು. ಈ ಸಂಬಂಧ ಸಾಲಿಸಿಟರ್‌ ಜನರಲ್‌ ಮೆಹ್ತಾ ಅವರು ಕೇಂದ್ರ ಸರ್ಕಾರದ ಪರವಾಗಿ ಪೀಠಕ್ಕೆ ಹೇಳಿಕೆಯನ್ನು ಸಲ್ಲಿಸಿದರು.

ಮೊರೆಟೊರಿಯಂ ಅವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲು ಸಾಧ್ಯವಿದೆ. ಆದರೆ, ಈ ಸಂಬಂಧ ಈವರೆಗೆ ಅಧಿಕೃತ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದರು. ಇದೇ ವಿಚಾರವಾಗಿ ಕೇಂದ್ರವು ಅಫಿಡವಿಟ್‌ ಸಲ್ಲಿಸಿರುವುದಾಗಿ ಅವರು ಹೇಳಿದರು. ಆದರೆ, ಅಫಿಡವಿಟ್‌ ನ್ಯಾಯಾಲಯಕ್ಕೆ ತಲುಪದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಯಿತು.

ಈ ವೇಳೆ, ನ್ಯಾ. ಅಶೋಕ್‌ ಭೂಷಣ್‌ ಅವರು, “ಮೆಹ್ತಾ ಅವರೇ, ಈ ಪೀಠದ ವಿಚಾರಣೆಯು ನಾಳೆ ನಿಗದಿಯಾಗಿರಲಿಲ್ಲ. ಆದರೆ, ಪ್ರಕರಣವನ್ನು ಆಲಿಸುವ ಸಲುವಾಗಿಯೇ ನಾವು ನಾಳೆ ವಿಚಾರಣೆಗೆ ಕೂರಲಿದ್ದೇವೆ,” ಎಂದರು.

ಮೊರೆಟೊರಿಯಂ ಸಂಬಂಧದ ವಿವಿಧ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಸಮಯಾವಕಾಶ ನೀಡಬೇಕು ಎಂದು ಮೆಹ್ತಾ ಈ ವೇಳೆ ಪೀಠವನ್ನು ಕೋರಿದರು. “ಆರ್‌ಬಿಐ, ಬ್ಯಾಂಕುಗಳ ಒಕ್ಕೂಟ ಮತ್ತು ಕೇಂದ್ರವು ಒಗ್ಗೂಡಿ ಆಲೋಚಿಸಲು ದಯವಿಟ್ಟು ಅವಕಾಶ ಕೊಡಿ,” ಎಂದು ಕೇಳಿದರು.

ಈ ವೇಳೆ ಮತ್ತೆ ಹಿಂದಿನ ಬಾರಿಯಂತೆ ಚಾಟಿ ಬೀಸಿದ ಪೀಠವು, “ಪ್ರಕರಣದ ಮೊದಲನೆಯ ದಿನದಿಂದಲೂ ನಾವು ನಿಮಗೆ ನಿಶ್ಚಿತ ವಿಧಾನವೊಂದನ್ನು ರೂಪಿಸಿ ತರಲು ಹೇಳುತ್ತಿದ್ದೇವೆ,” ಎಂದು ಅಸಮಾಧಾನ ಸೂಚಿಸಿತು.

Also Read
ಸಾಲ ಮರುಪಾವತಿ ಮುಂದೂಡಿಕೆ ವಿಚಾರಣೆ: “ಆರ್‌ಬಿಐನ ಹಿಂದೆ ಅವಿತುಕೊಂಡ” ಕೇಂದ್ರದ ಕಿವಿ ಹಿಂಡಿದ ಸುಪ್ರೀಂ ಕೋರ್ಟ್‌

ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, ಈ ಸಂಬಂಧದ “ಚರ್ಚೆಗಳು ಒಂದು ಹಂತಕ್ಕೆ ಬಂದಿವೆ,” ಎಂದರು.

ಮುಂದುವರೆದು, “ಇದು ಅನೇಕ ವಿಷಯಗಳನ್ನು ಒಳಗೊಂಡಿದೆ, ಅರ್ಥಿಕತೆಯೂ ಕೂಡ ಒತ್ತಡದಲ್ಲಿದೆ (ಈ ವೇಳೆ ನಿನ್ನೆಯ ಜಿಡಿಪಿ ಅಂಕಿಸಂಖ್ಯೆಯಗಳನ್ನು ವಿವರಿಸಿದರು), ಇದೆಲ್ಲವೂ ವಿಸ್ತೃತವಾದ ಚರ್ಚೆಯನ್ನು ಬೇಡುತ್ತದೆ… ನಾವು ಸಮಸ್ಯೆಗಳನ್ನು ಪರಿಹರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಕೆಲವೊದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ, ಆಗಸ್ಟ್‌ 6ರ ನಿರ್ಧಾರಗಳನ್ನು ಸಹ ಅಫಿಡವಿಟ್‌ನಲ್ಲಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಬುಧವಾರ ನಡೆಸಲಿದೆ.

No stories found.
Kannada Bar & Bench
kannada.barandbench.com