ಸಾಲ ಮರುಪಾವತಿ ಅವಧಿ ವಿಸ್ತರಣೆ ವಿಚಾರಣೆ; ಬಡ್ಡಿ ಮನ್ನಾಕ್ಕೆ ಕಪಿಲ್ ಸಿಬಲ್ ಮನವಿ

ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಬಡ್ಡಿ ವಿಚಾರದ ಕುರಿತು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಬುಧವಾರ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ನಡೆಸಿತು. ಈ ವೇಳೆ ಹಿರಿಯ ವಕೀಲರು ಮಂಡಿಸಿದ ವಾದಗಳ ಸಾರಸಂಗ್ರಹ ಇಲ್ಲಿದೆ.
ಸಾಲ ಮರುಪಾವತಿ ಅವಧಿ ವಿಸ್ತರಣೆ ವಿಚಾರಣೆ; ಬಡ್ಡಿ ಮನ್ನಾಕ್ಕೆ ಕಪಿಲ್ ಸಿಬಲ್ ಮನವಿ
Published on

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜಾರಿಗೊಳಿಸಿರುವ ಸಾಲ ಮರುಪಾವತಿ ಅವಧಿ ವಿಸ್ತರಣೆಯಲ್ಲಿ (ಮೊರೆಟೋರಿಯಂ) ಅವಧಿ ಸಾಲದ ಮೇಲೆ ಬಡ್ಡಿ ವಿಧಿಸುವ ನಿರ್ಧಾರವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ನಡೆಸಿತು.

ನ್ಯಾ.ಅಶೋಕ್‌ ಭೂಷಣ್‌ ನೇತೃತ್ವದ ನ್ಯಾಯಮೂರ್ತಿಗಳಾದ ಸುಭಾಷ್‌ ರೆಡ್ಡಿ ಹಾಗೂ ಎಂ ಆರ್ ಶಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ವಾದ ಮಂಡನೆ ನಡೆಯಿತು ವಿಚಾರಣೆ ವೇಳೆ ವಿವಿಧ ವಲಯಗಳನ್ನು ಪ್ರತಿನಿಧಿಸಿದ ಹಿರಿಯ ವಕೀಲರು ಮಂಡಿಸಿದ ಪ್ರಮುಖ ವಾದಗಳ ಸಾರ ಸಂಗ್ರಹ ಇಲ್ಲಿದೆ:

  • ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಷಾ ನೇತೃತ್ವದ ಪೀಠ ಬುಧವಾರ ಅರ್ಜಿ ವಿಚಾರಣೆ ನಡೆಸಿತು.

  • ಸಾಲ ಮರುಪಾವತಿ ಅವಧಿ ವಿಸ್ತರಣೆ ಮತ್ತು ಬಡ್ಡಿಯ ಕುರಿತ ವಿಚಾರವಾಗಿ ಆಗಸ್ಟ್‌ ಆರನೇ ತಾರೀಖಿನ ಆರ್‌ ಬಿಐ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿರುವುದನ್ನು ಹಿನ್ನೆಲೆಯಲ್ಲಿರಿಸಿಕೊಂಡು ವಾದ ಮಂಡನೆಗಳು ನಡೆದವು.

  • "ನಮಗೆ ಸಹಾಯ ಮಾಡುವ ಉದ್ದೇಶದಿಂದ ಯೋಜನೆಯೊಂದನ್ನು ರೂಪಿಸಿದರು ಆದರೆ ಚಕ್ರಬಡ್ಡಿಯನ್ನು ವಿಧಿಸುತ್ತಿರುವುದರಿಂದ ಅದು ನಮಗೆ ದುಪ್ಪಟ್ಟು ಕಷ್ಟವನ್ನುಂಟು ಮಾಡಿದೆ," ಎಂದು ಅರ್ಜಿದಾರರ ಪರ ಹಿರಿಯ ವಕೀಲ ರಾಜೀವ್ ದತ್ತಾ ಪೀಠಕ್ಕೆ ತಿಳಿಸಿದರು.

  • ಬಡ್ಡಿಯ ಮೇಲೆ ಬಡ್ಡಿ ಹಾಕುವ ಮೂಲಕ ಬ್ಯಾಂಕ್ ಗಳು ಇದನ್ನು ಸುಸ್ತಿ ಎನ್ನುವ ರೀತಿಯಲ್ಲಿ ಪರಿಗಣಿಸುತ್ತಿವೆ. ಇದು ನಮ್ಮ ದೃಷ್ಟಿಯಲ್ಲಿ ಸುಸ್ತಿಯಲ್ಲ. ಜನರಿಗೆ ಅನುಕೂಲ ಮಾಡಿಕೊಡುವ ಬದಲು ಬ್ಯಾಂಕ್ ಗಳು ಇದನ್ನು ತಮ್ಮ ಬೆಳವಣಿಗೆಗೆ ಬಳಸಿಕೊಳ್ಳುತ್ತಿವೆ. ಎಲ್ಲಾ ಕ್ಷೇತ್ರಗಳು ಪಾತಾಳಕ್ಕೆ ಕುಸಿದಿವೆ. ಆದರೆ, ಆರ್ ಬಿಐ ಮಾತ್ರ ಲಾಭ ಮಾಡಿಕೊಳ್ಳಬೇಕಿದೆ! ಎಂದು ದತ್ತಾ ವಾದ ಮಂಡಿಸಿದರು.

  • ಕ್ರಿಡೆಯ್‌ ಪರ ವಾದ ಮಂಡಿಸಿದ ವಕೀಲ ಅರ್ಯಮಾ ಸುಂದರಂ. ಬಡ್ಡಿಯ ವಿಚಾರದಲ್ಲಿ ಬ್ಯಾಂಕುಗಳು ನಿರ್ಧರಿಸುವಂತೆ ಆರ್‌ಬಿಐ ಬ್ಯಾಂಕುಗಳಿಗೆ ತಿಳಿಸಿದೆ. ಈ ಸಂಬಂಧ ಆರ್‌ಬಿಐ ಬಳಿ ನಿರ್ದೇಶನ ಕೈಗೊಳ್ಳುವ ಅಧಿಕಾರವಿದೆ, ಅದರೆ ಅದು ಬ್ಯಾಂಕುಗಳಿಗೆ ಈ ವಿಷಯದಲ್ಲಿ ಸ್ವಾತಂತ್ರ್ಯವನ್ನು ನೀಡಿದೆ.

  • ಸಾಲಗಾರರು ಪಡೆದಿರುವ ಹಣದ ಮೇಲಿನ ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದು ಸರಿಯಲ್ಲ. ಇದರಿಂದ ವಸೂಲಾಗದ ಸಾಲದ ಮೊತ್ತ (ಎನ್ ಪಿಎ) ಹೆಚ್ಚಾಗಬಹುದು ಎಂದು ಪೀಠಕ್ಕೆ ತಿಳಿಸಿದ ಹಿರಿಯ ವಕೀಲ ಆರ್ಯಂ ಸುಂದರಂ.

  • ಆಗಸ್ಟ್‌ 6ರ ಸುತ್ತೋಲೆಯಲ್ಲಿ ಎಲ್ಲ ನಿರ್ಧಾರವನ್ನೂ ಬ್ಯಾಂಕುಗಳಿಗೇ ಬಿಡಲಾಗಿದೆ. ಬಡ್ಡಿಯನ್ನು ಮನ್ನಾ ಮಾಡಲಾಗದು ಆದರೆ ಠೇವಣಿದಾರರಿಗೆ ಬಡ್ಡಿ ನೀಡುವಷ್ಟನ್ನು ಮಾತ್ರವೇ ವಿಧಿಸಬಹುದು ಎಂದು ವಾದಿಸಿದ ಸುಂದರಂ.

  • ಆರ್‌ಬಿಐ ನಿಯಂತ್ರಕ ಸಂಸ್ಥೆಯಾಗಿರುವುದರಿಂದ ನಿಯಂತ್ರಣ ಹೇರುವ ಶಕ್ತಿ ಆರ್ ಬಿ ಐ ಗೆ ಇದೆ. ಬಡ್ಡಿಯನ್ನು ಅವಧಿ ಸಾಲವನ್ನಾಗಿ ಪರಿವರ್ತಿಸಬಹುದು ಎಂದು ಅವರು ವಾದ ಮಂಡಿಸಿದರು.

  • ಕ್ರೆಡಾಯ್‌ ಮಹಾರಾಷ್ಟ್ರದ ಪರವಾಗಿ ವಾದ ಮಂಡಿಸಿದ ಕೆ ವಿ ವಿಶ್ವನಾಥ್‌, ಕೋವಿಡ್ ‌ಅನ್ನು ಕೇಂದ್ರ ಸರ್ಕಾರ ದೈವಕೃತ ಎಂದು ಕರೆದಿದೆ. ಇಂತಹ ವಿಪರೀತ ಪರಿಸ್ಥಿತಿಯಲ್ಲಿ ಅವರಿಗೆ (ಬ್ಯಾಂಕುಗಳಿಗೆ) ಘನ ನ್ಯಾಯಾಲಯವು ಲಾಭವನ್ನು ಕೈಬಿಡುವಂತೆ ಹೇಳಬೇಕು. ಬೇರಾವುದೇ ಸಂದರ್ಭದಲ್ಲಿಯಾಗಿದ್ದರೆ ನಾವು ಈ ವಾದವನ್ನು ಮಂಡಿಸುತ್ತಿರಲಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು.

  • ತಮ್ಮ ವಾದ ಮಂಡನೆಗೆ ಪೂರಕವಾಗಿ ವಿಪತ್ತು ನಿರ್ವಹಣಾ ಕಾಯಿದೆಯ 13ನೇ ಪರಿಚ್ಛೇದವನ್ನು ವಿಶ್ವನಾಥ್ ಉದ್ಧರಿಸಿದರು‌. ಕಾಯಿದೆ ಅಡಿ ವಿಕೋಪ ಪರಿಸ್ಥಿತಿಯಲ್ಲಿ ಸಾಲ ಮನ್ನಾ ಅಥವಾ ಮರು ಸಾಲ ನೀಡಿಕೆಯ ಬಗ್ಗೆ ತಿಳಿಸಿರುವುದನ್ನು ವಾದದಲ್ಲಿ ಉಲ್ಲೇಖಿಸಿದರು.

  • ವಿಪತ್ತು ನಿರ್ವಹಣಾ ಕಾಯಿದೆಯಡಿ ಇರುವ ಶಾಸನಾತ್ಮಕ ಅಧಿಕಾರವನ್ನು ಬಳಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ವಿಶ್ವನಾಥ್‌ ಕೋರಿದರು. ಅರ್‌ ಬಿ ಐ ನ ಮಾರ್ಚ್‌ ಸುತ್ತೋಲೆಯನ್ನು ಉಲ್ಲೇಖಿಸಿ, ಮೊರೆಟೊರಿಯಂ ಅವಧಿಯ ಸಂದರ್ಭದಿಂದ ಇಲ್ಲಿಯವರೆಗೆ ಸಾಲಗಾರರ ಮೇಲಿನ ಒತ್ತಡವನ್ನು ಕಡಿಮೆಗೊಳಿಸುವ ಉದ್ದೇಶ ಸಫಲವಾಗಿಲ್ಲ ಎಂದು ಪೀಠಕ್ಕೆ ವಿವರಿಸಿದರು.

  • ಶಾಪಿಂಗ್‌ ಕೇಂದ್ರಗಳ ಒಕ್ಕೂಟದ ಪರವಾಗಿ ಹಿರಿಯ ವಕೀಲ ರಂಜಿತ್‌ ಕುಮಾರ್ ವಾದ ಮಂಡಿದರು. ದೇಶ ಎದುರಿಸುತ್ತಿರುವ ಗಂಭೀರ ಆರ್ಥಿಕ ಕುಸಿತದ ಬಗ್ಗೆ ಪ್ರಸ್ತಾಪಿಸಿದ ಅವರು ಆರ್‌ ಬಿ ಐ ಗವರ್ನರ್‌ ಈ ಸಂಬಂಧ ನೀಡಿರುವ ಹೇಳಿಕೆಗಳ ಉಲ್ಲೇಖಿಸಿದರು.

  • ಆಗಸ್ಟ್‌ 31ಕ್ಕೆ ಮೊರೆಟೊರಿಯಂ ಅವಧಿ ಮುಕ್ತಾಯವಾಗಿದೆ. ಇದರ ಲಾಭವನ್ನು ಪಡೆದಿದ್ದ ಎಲ್ಲ ಬ್ಯಾಂಕ್‌ ಖಾತೆಗಳನ್ನು ಎನ್ ಪಿ ಎ (ಅನುತ್ಪಾದಕ ಸ್ವತ್ತು) ಎಂದು ಘೋಷಿತವಾಗಿವೆ. ಕಂಪ್ಯೂಟರ್‌ ನಿರ್ವಹಣಾ ವ್ಯವಸ್ಥೆಯಾಗಿರುವುದರಿಂದ ಇಂತಹ ಅಕೌಂಟ್ ಗಳು ತಂತಾನೇ ಎನ್‌ ಪಿ ಎ ಎಂದು ಪರಿಗಣಿತವಾಗುತ್ತವೆ ಎಂದು ಪೀಠಕ್ಕೆ ರಂಜಿತ್ ಕುಮಾರ್ ವಿವರಿಸಿದರು.

  • ಫಾರ್ಮಾ, ಐಟಿ ಹಾಗೂ ಎಫ್‌ ಎಂ ಸಿ ಜಿ ವಲಯಗಳ ಹೋಲಿಕೆಯಲ್ಲಿ ಶಾಪಿಂಗ್‌ ಕೇಂದ್ರಗಳು, ಮಾಲ್‌ ಗಳು, ಲಾಕ್‌ ಡೌನ್‌ ಸಂದರ್ಭದಲ್ಲಿ ಸಂಕಷ್ಟವನ್ನು ಅನುಭವಿಸಿವೆ. ಹಾಗಾಗಿ ವಲಯವಾರು ಪರಿಹಾರವನ್ನು ಘೋಷಿಸುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.

  • ಹಿರಿಯ ವಕೀಲ ಕಪಿಲ್ ಸಿಬಲ್‌ ವಾದ ಮಂಡನೆ ಮಾಡಿ, ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕು. ತಜ್ಞರ ಸಮಿತಿಯು ಕ್ಷೇತ್ರಾವಾರು ಯೋಜನೆಯನ್ನು ನ್ಯಾಯಪೀಠದ ಮುಂದಿರಿಸಬೇಕು. ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದು ಇರಲಿ, ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.

  • ಬ್ಯಾಂಕ್ ಗಳು ನಿರ್ದಿಷ್ಟ ಅವಧಿಯ ವರೆಗೆ ಬಡ್ಡಿಯ ಮೇಲೆ ವಿನಾಯಿತಿ ನೀಡಬಹುದು ಎಂದ ಹಿರಿಯ ವಕೀಲ ವಿನಾಯಕ್ ಭಂಡಾರಿ. ದೋಣಿ ಮುಳುಗುತ್ತಿರುವಾಗ ಯಾರನ್ನು ರಕ್ಷಿಸಬೇಕು ಎಂಬುದರ ಬಗ್ಗೆ ಪರಿಶೀಲಿಸುವುದು ಸೂಕ್ತವಲ್ಲ ಎಂದು ಅವರು ಪೀಠದ ಗಮನಸೆಳೆದರು.

  • ಜವಳಿ ಕಾರ್ಖಾನೆ ಒಕ್ಕೂಟ ಪ್ರತಿನಿಧಿಸುತ್ತಿರುವ ವಕೀಲ ಆಶಿಷ್ ವಿರ್ಮಾನಿ ಅವರಿಂದ ಆಗಸ್ಟ್‌ 31ರ ವರೆಗೆ ಯಥಾಸ್ಥಿತಿ ಕಾಪಾಡುವಂತೆ ಮನವಿ ಮಾಡಿದರು.

  • ವಿಚಾರಣೆ ಗುರುವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ.

Also Read
ಸಾಲ ಮರುಪಾವತಿ ಮುಂದೂಡಿಕೆಯನ್ನು 2 ವರ್ಷದವರೆಗೆ ವಿಸ್ತರಿಸಲು ಸಾಧ್ಯ ಎಂದು ಸುಪ್ರೀಂಕೋರ್ಟ್‌ ಗೆ ತಿಳಿಸಿದ ಕೇಂದ್ರ
Kannada Bar & Bench
kannada.barandbench.com