ಭಾರತೀಯ ಸ್ಟೇಟ್ ಬ್ಯಾಂಕ್ (ವಿಜಯ್ ಮಲ್ಯ v. ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಇತರರು) ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ವಿವಾದಿತ ಉದ್ಯಮಿ ವಿಜಯ್ ಮಲ್ಯ ವಿರುದ್ಧ ದಾಖಲಿಸಿದ್ದ ಬ್ಯಾಂಕ್ ಸಾಲದ ಸುಸ್ತಿ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪು ಮರುಪರಿಶೀಲನೆ ಕೋರಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅಶೋಕ್ ಭೂಷಣ್ ನೇತೃತ್ವದ ವಿಭಾಗೀಯ ಪೀಠವು ಆಗಸ್ಟ್ 27ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ತೊರೆದ ಉದ್ಯಮಿ ವಿಜಯ್ ಮಲ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಮುಖ ಹೇಳಿಕೆಯ ದಾಖಲೆಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಹಿಂದೆ ಪ್ರಕರಣವನ್ನು ಮುಂದೂಡಲಾಗಿತ್ತು. ಸದ್ಯ ನಿಷ್ಕ್ರಿಯವಾಗಿರುವ ಕಿಂಗ್ ಫಿಶರ್ ಏರ್ ಲೈನ್ಸ್ ಒಳಗೊಂಡ 9,000 ಕೋಟಿ ರೂಪಾಯಿ ಬ್ಯಾಂಕ್ ಸಾಲ ಸುಸ್ತಿ ಪ್ರಕರಣದಲ್ಲಿ ಮಲ್ಯ ಆರೋಪಿಯಾಗಿದ್ದಾರೆ. ಈ ಸಂಬಂಧ ಬ್ಯಾಂಕ್‌ಗಳ ಒಕ್ಕೂಟವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ.
ಬ್ಯಾಂಕ್ ಸಾಲ ಸುಸ್ತಿ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟಿದ್ದ ಮಲ್ಯರನ್ನು ಜುಲೈ 10ರಂದು ಖುದ್ದು ಹಾಜರಿರುವಂತೆ 2017ರ ಮೇ 9ರ ಆದೇಶದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಆ ಬಳಿಕ ಮಲ್ಯ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ "ಗಂಭೀರ ಉಲ್ಲಂಘನೆ" ಮಾಡಿದ್ದ ವಿಜಯ್ ಮಲ್ಯ ಸತ್ಯವನ್ನು ಬಚ್ಚಿಟ್ಟು, ನಿಯಮಗಳನ್ನು ಉಲ್ಲಂಘಿಸಿ ಪುತ್ರ ಸಿದ್ಧಾರ್ಥ್ ಮಲ್ಯ ಮತ್ತು ಪುತ್ರಿಯರಾದ ಲಿಯನ್ನಾ ಮತ್ತು ತಾನ್ಯಾ ಮಲ್ಯರಿಗೆ ಹಣ ವರ್ಗಾಯಿಸಿದ್ದಾರೆ ಎಂದು ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಬ್ಯಾಂಕ್‌ಗಳು ಆರೋಪಿಸಿದ್ದವು.
ಮಲ್ಯ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಮೂರು ವರ್ಷವಾದರೂ ಯಾಕೆ ವಿಚಾರಣೆಗೆ ಪ್ರಸ್ತುತಪಡಿಸಿಲ್ಲ ಎಂದು ಜೂನ್ 19ರಂದು ರಿಜಿಸ್ಟ್ರಿಯನ್ನು ನ್ಯಾಯಾಲಯ ಪ್ರಶ್ನಿಸಿತ್ತು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳ ಬಗ್ಗೆಯೂ ಮಾಹಿತಿ ನೀಡುವಂತೆ ನ್ಯಾಯಾಲಯವು ರಿಜಿಸ್ಟ್ರಿಗೆ ಸೂಚಿಸಿತ್ತು.