ಮಾನಹಾನಿ ಕೃತ್ಯವನ್ನು ನಿರಪರಾಧೀಕರಣಗೊಳಿಸಲು ಇದು ಸಕಾಲ: ಸುಪ್ರೀಂ ಕೋರ್ಟ್‌

ದೆಹಲಿಯ ವಿಚಾರಣಾ ನ್ಯಾಯಾಲಯ ತನಗೆ ಜಾರಿ ಮಾಡಿದ್ದ ಸಮನ್ಸ್ ಪ್ರಶ್ನಿಸಿ ದಿ ವೈರ್ ಅರ್ಜಿ ಸಲ್ಲಿಸಿತ್ತು.
Supreme Court, The wire
Supreme Court, The wire
Published on

ಮಾನಹಾನಿ ಕೃತ್ಯಗಳನ್ನು ನಿರಪರಾಧೀಕರಣಗೊಳಿಸಲು ಇದು ಸಕಾಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕರಾದ ಅಮಿತಾ ಸಿಂಗ್ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ತನಗೆ ನೀಡಲಾದ ಸಮನ್ಸ್ ಪ್ರಶ್ನಿಸಿ ಆನ್‌ಲೈನ್ ಸುದ್ದಿ ಜಾಲತಾಣ ದ ವೈರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ ಎಂ ಸುಂದರೇಶ್ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

'ದ ವೈರ್' ನಡೆಸುತ್ತಿರುವ ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಅಮಿತಾ ಅವರಿಗೆ ನೋಟಿಸ್ ಜಾರಿ ಮಾಡಿದೆ.

"ಇದನ್ನು ನಿರಪರಾಧೀಕರಣಗೊಳಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ..." ಎಂದು ನ್ಯಾಯಮೂರ್ತಿ ಸುಂದರೇಶ್ ತಿಳಿಸಿದರು.

ಸುದ್ದಿತಾಣದ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ನ್ಯಾಯಾಲಯದ ಅಭಿಪ್ರಾಯಕ್ಕೆ ತಲೆದೂಗಿದರು.

ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 356, ಮಾನಹಾನಿ‌‌ ಮಾಡುವುದನ್ನು ಅಪರಾಧೀಕರಿಸುತ್ತದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499ಕ್ಕೆ ಬದಲಾಗಿ ಇದನ್ನು ಜಾರಿಗೆ ತರಲಾಗಿದೆ.

ಮಾನಹಾನಿ ಮಾಡುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಕೆಲವೇ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಹೆಚ್ಚಿನ ನ್ಯಾಯಾಲಯಗಳು ಮಾನಹಾನಿಗೆ ಸಂಬಂಧಿಸಿದಂತೆ ಸಿವಿಲ್ ಪರಿಹಾರವನ್ನಷ್ಟೇ ಒದಗಿಸಿವೆ.

ಸುಬ್ರಮಣಿಯನ್ ಸ್ವಾಮಿ, ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿವಿಧ ರಾಜಕಾರಣಿಗಳು ಐಪಿಸಿಯ ಸೆಕ್ಷನ್ 499ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದರು. ಆದರೆ ಸುಪ್ರೀಂ ಕೋರ್ಟ್ 2016ರಲ್ಲಿ ಅದರ ಸಿಂಧುತ್ವ ಎತ್ತಿಹಿಡಿದಿತ್ತು.

ಪ್ರಸ್ತುತ ಮಾನನಷ್ಟ ಪ್ರಕರಣ ದ ವೈರ್‌ನ ಸುದ್ದಿ ವರದಿಗೆ ಸಂಬಂಧಿಸಿದ್ದಾಗಿದೆ. ವರದಿಯಲ್ಲಿ ಪ್ರೊಫೆಸರ್ ಅಮಿತಾ ಸಿಂಗ್ ಜೆಎನ್‌ಯು ಶಿಕ್ಷಕರ ಗುಂಪೊಂದರೊಂದಿಗೆ ಶಾಮೀಲಾಗಿ, ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯವನ್ನು "ಸಂಘಟಿತ ಲೈಂಗಿಕ ಜಾಲದ ಕರಾಳತಾಣ" ಎಂದು ದೂರಿದ್ದ 200 ಪುಟಗಳ ಹೊತ್ತಿಗೆಯನ್ನು ಸಂಕಲಿಸಿದ್ದರು ಎಂದು ಹೇಳಲಾಗಿತ್ತು.

ಈ ಹಿನ್ನೆಲೆಯಲ್ಲಿ ದ ವೈರ್ ವಿರುದ್ಧ ಅಮಿತಾ ಅವರು ದೂರು ದಾಖಲಿಸಿದ್ದರು. 2017ರಲ್ಲಿ ವಿಚಾರಣಾ ನ್ಯಾಯಾಲಯ ಸಮನ್ಸ್ ಹೊರಡಿಸಿತ್ತು.

2019ರಲ್ಲಿ ಸುಪ್ರೀಂ ಕೋರ್ಟ್ ಅದನ್ನು ರದ್ದು ಮಾಡಿ ಮತ್ತೆ ಪ್ರಕರಣದ ವಿಚಾರಣೆ ನಡೆಸುವಂತೆ ನಿರ್ದೇಶಿಸಿತ್ತು.

ಜನವರಿ 2025ರಲ್ಲಿ ವಿಚಾರಣಾ ನ್ಯಾಯಾಲಯ ಮತ್ತೆ ಸಮನ್ಸ್ ನೀಡಿತ್ತು. ಬಳಿಕ ಮೇ 2025ರಲ್ಲಿ ದೆಹಲಿ ಹೈಕೋರ್ಟ್ ಸಮನ್ಸ್‌ ಎತ್ತಿಹಿಡಿದಿತ್ತು.

ಈ ಆದೇಶವನ್ನು ದ ವೈರ್ ಸುಪ್ರೀಂ ಕೋರ್ಟ್‌ನಲ್ಲಿ ಪುನಃ ಪ್ರಶ್ನಿಸಿತ್ತು.

ಇಂದು ವಿಚಾರಣೆಯ ಆರಂಭದಲ್ಲೇ ಪ್ರಕರಣ ಇಷ್ಟು ಕಾಲ ಬಾಕಿ ಉಳಿದಿರುವುದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

“ಇನ್ನೂ ಎಷ್ಟು ಕಾಲ ಈ ಪ್ರಕರಣ ಎಳೆದಾಡುತ್ತೀರಿ?” ಎಂದು ಅದು ಪ್ರಶ್ನಿಸಿತು.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಅವರಿಗೆ ಸಂಬಂಧಿಸಿದ ಇಂಥದ್ದೇ ಪ್ರಕರಣವೊಂದು‌ ಬಾಕಿ‌ ಇದೆ ಎಂದರು.

ನಂತರ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಿತು.

Kannada Bar & Bench
kannada.barandbench.com