ಲಿವ್-ಇನ್ ಸಂಬಂಧ ಕಾಲಾಯಾಪನೆಗಾಗಿ; ಅಂತಹ ಸಂಬಂಧಗಳಲ್ಲಿ ಸ್ಥಿರತೆ, ಪ್ರಾಮಾಣಿಕತೆಯ ಕೊರತೆ ಇದೆ: ಅಲಾಹಾಬಾದ್ ಹೈಕೋರ್ಟ್

ಆ ರೀತಿಯ ಸಂಬಂಧಗಳು ತಾತ್ಕಾಲಿಕ ಮತ್ತು ದುರ್ಬಲವಾಗಿರುತ್ತವೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಅಂತರ್ ಧರ್ಮೀಯ ಸಹಜೀವನ ಜೋಡಿಗೆ ಪೊಲೀಸ್ ರಕ್ಷಣೆ ನೀಡಲು ನಿರಾಕರಿಸಿತು.
Allahabad high court, Couple
Allahabad high court, Couple

ಲಿವ್‌ ಇನ್‌ (ಸಹಜೀವನ) ಸಂಬಂಧಗಳು ಪ್ರಧಾನವಾಗಿ ಕಾಲಕ್ಷೇಪಕ್ಕಾಗಿ ರೂಪುಗೊಂಡಿದ್ದು ಅವುಗಳಲ್ಲಿ ಸ್ಥಿರತೆ ಮತ್ತು ಪ್ರಾಮಾಣಿಕತೆಯ ಕೊರತೆ ಇದೆ ಎಂದು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಹೇಳಿದೆ.

ಪೊಲೀಸ್ ರಕ್ಷಣೆ ಕೋರಿ ಅಂತರ್ ಧರ್ಮೀಯ ಜೋಡಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ರಾಹುಲ್ ಚತುರ್ವೇದಿ ಮತ್ತು ಮೊಹಮ್ಮದ್ ಅಜರ್ ಹುಸೇನ್ ಇದ್ರಿಸಿ ಅವರಿದ್ದ ಪೀಠ, “ಗೌರವಾನ್ವಿತ ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ, ಲಿವ್-ಇನ್ ಸಂಬಂಧವನ್ನು ಮಾನ್ಯ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ ಆದರೆ 20-22 ವರ್ಷ ವಯಸ್ಸಿನ ಜೋಡಿ ತಮ್ಮ ಎರಡು ತಿಂಗಳ ಅವಧಿಯ ತಾತ್ಕಾಲಿಕ ಸಂಬಂಧದ ಬಗ್ಗೆ ಗಂಭೀರವಾಗಿರುತ್ತದೆ ಎಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಮೇಲೆ ಹೇಳಿದಂತೆ, ಇದು ಯಾವುದೇ ಪ್ರಾಮಾಣಿಕತೆ ಇಲ್ಲದ ಗಾಢ ವ್ಯಾಮೋಹವಾಗಿದೆ. ಜೀವನ ಗುಲಾಬಿಯ ಹಾಸಿಗೆಯಲ್ಲ. ಜೀವನ ಎಂಬುದು ಕಠಿಣ ವಾಸ್ತವದ ಹಿನ್ನೆಲೆಯಲ್ಲಿ ಪ್ರತಿ ದಂಪತಿಯನ್ನೂ ಪರೀಕ್ಷಿಸುತ್ತಿರುತ್ತದೆ. ಈ ರೀತಿಯ ಸಂಬಂಧ ಸಾಮಾನ್ಯವಾಗಿ ಕಾಲಕ್ಷೇಪಕ್ಕಾಗಿ ಇರಲಿದ್ದು ತಾತ್ಕಾಲಿಕ ಮತ್ತು ದುರ್ಬಲವಾಗಿರುತ್ತದೆ. ತನಿಖೆಯ ಹಂತದಲ್ಲಿ ಅರ್ಜಿದಾರರಿಗೆ ಯಾವುದೇ ರಕ್ಷಣೆ ನೀಡುವ ಅಗತ್ಯವಿಲ್ಲ” ಎಂದು ನುಡಿದಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 366 ರ ಅಡಿಯಲ್ಲಿ ಅಪಹರಣ ನಡೆದಿದೆ ಎಂದು ಜೋಡಿ ವಿರುದ್ಧ ಮಹಿಳೆಯ ಚಿಕ್ಕಮ್ಮ ಎಫ್‌ಐಆರ್‌ ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ಹಿಂದೂ ಮಹಿಳೆ ಮತ್ತು ಮುಸ್ಲಿಂ ಪುರುಷ ಜೋಡಿ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ದಂಪತಿಗಳು ತಮ್ಮ ಲಿವ್-ಇನ್ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದ್ದರಿಂದ ಪೊಲೀಸ್ ರಕ್ಷಣೆ ಕೋರಿದ್ದರು. ಮಹಿಳೆಯ ಪರ ವಕೀಲರು ವಾದ ಮಂಡಿಸಿ, ಆಕೆಯ ವಯಸ್ಸು 20 ವರ್ಷಕ್ಕಿಂತ ಹೆಚ್ಚಿದ್ದು, ಆಕೆಗೆ ತನ್ನ ಭವಿಷ್ಯವನ್ನು ನಿರ್ಧರಿಸುವ ಎಲ್ಲ ಹಕ್ಕುಗಳಿವೆ ಮತ್ತು ಆರೋಪಿಯೊಂದಿಗೆ ಲಿವ್-ಇನ್ ಸಂಬಂಧವನ್ನು ಆಯ್ಕೆ ಮಾಡಿಕೊಂಡಿದ್ದಾಳೆ ಎಂದಿದ್ದರು.

ಆಕೆಯ ಸಂಗಾತಿ ವಿರುದ್ಧ ಈಗಾಗಲೇ ಉತ್ತರ ಪ್ರದೇಶದ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಾಗಿದೆ ಎಂದು ಎದುರಾಳಿ ವಕೀಲರು ವಾದಿಸಿದರು. ಅವನು ಓರ್ವ "ರೋಡ್-ರೋಮಿಯೋ" ಆಗಿದ್ದು, ಭವಿಷ್ಯವಿಲ್ಲದ ಅಲೆಮಾರಿಯಾಗಿದ್ದಾನೆ ಮತ್ತು ಇದರಿಂದ ಖಂಡಿತ ಹುಡುಗಿಯ ಜೀವನ ಹಾಳಾಗಲಿದೆ ಎಂದು ವಾದಿಸಲಾಯಿತು.

ವಾಸ್ತವಾಂಶ ಪರಿಗಣಿಸಿದ ನ್ಯಾಯಾಲಯ ಲಿವ್‌ ಇನ್‌ ಸಂಬಂಧಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತಲ್ಲದೆ ಮನವಿಯನ್ನು ವಜಾಗೊಳಿಸಿತು.  

Related Stories

No stories found.
Kannada Bar & Bench
kannada.barandbench.com