[ಕಲಾಪ ನೇರ ಪ್ರಸಾರ] ವಾರದಲ್ಲಿ ನಿಯಮಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ನ್ಯಾಯಾಲಯದ ಕಲಾಪವನ್ನು ಲೈವ್‌ ಸ್ಟ್ರೀಮಿಂಗ್‌ ಮಾಡುವುದಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ನಿಯಮಗಳಿಗೆ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠವು ಸೆಪ್ಟೆಂಬರ್‌ 17ರಂದು ಒಪ್ಪಿಗೆ ನೀಡಿತ್ತು.
Karnataka High Court and YouTube
Karnataka High Court and YouTube

ಹೈಕೋರ್ಟ್‌ ಕಲಾಪಗಳನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡುವುದಕ್ಕೆ ಸಂಬಂಧಿಸಿದ ಲೈವ್‌ ಸ್ಟ್ರೀಮಿಂಗ್‌ ಮತ್ತು ಕಲಾಪದ ಪ್ರಕ್ರಿಯೆ ರೆಕಾರ್ಡಿಂಗ್‌ ನಿಯಮಗಳಿಗೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಒಂದು ವಾರದಲ್ಲಿ ಅವುಗಳ ಕುರಿತು ಗೆಜೆಟ್‌ ಪ್ರಕಟಣೆ ಹೊರಡಿಸುವಂತೆ ಸರ್ಕಾರಕ್ಕೆ ಗುರುವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಇ-ಫೈಲಿಂಗ್‌ ಮತ್ತು ಲೈವ್‌ ಸ್ಟ್ರೀಮಿಂಗ್‌ಗೆ ಸಂಬಂಧಿಸಿದಂತೆ ವಕೀಲ ದಿಲ್‌ರಾಜ್‌ ರೋಹಿತ್‌ ಸೀಕ್ವೈರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

Also Read
ಲೈವ್‌ ಸ್ಟ್ರೀಮಿಂಗ್‌, ಕಲಾಪ ರೆಕಾರ್ಡಿಂಗ್‌ ಸಂಬಂಧ ಕರಡು ಮಾದರಿ ನಿಯಮ ಬಿಡುಗಡೆ; ಸಲಹೆ-ಸೂಚನೆಗೆ ಸುಪ್ರೀಂ ಆಹ್ವಾನ

“ಲೈವ್‌ ಸ್ಟ್ರೀಮಿಂಗ್‌ ಮತ್ತು ಕಲಾಪದ ಪ್ರಕ್ರಿಯೆ ರೆಕಾರ್ಡಿಂಗ್‌ ನಿಯಮಗಳಿಗೆ ಯಾವುದೇ ತಿದ್ದುಪಡಿ ಮಾಡದೇ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಈಗ ನಿಯಮಗಳನ್ನು ಹೈಕೋರ್ಟ್‌ಗೆ ತಿಳಿಸಿದ ದಿನವನ್ನು ಉಲ್ಲೇಖಿಸಿ ಗೆಜೆಟ್‌ನಲ್ಲಿ ಪ್ರಕಟಿಸಬೇಕಿದೆ. ಈ ನಿಯಮಗಳು ಜಾರಿಗೆ ಬರುವ ದಿನಾಂಕವನ್ನು ಉಲ್ಲೇಖಿಸಿ ರಿಜಿಸ್ಟ್ರಾರ್‌ ಜನರಲ್‌ ಅಧಿಸೂಚನೆ ಹೊರಡಿಸಬೇಕಿದೆ. ಸದರಿ ನಿಯಮಗಳಿಗೆ ಸಂಬಂಧಿಸಿದಂತೆ ತಕ್ಷಣ ಅಧಿಸೂಚನೆ ಹೊರಡಿಸಿ ಒಂದು ವಾರದಲ್ಲಿ ಅಧಿಕೃತ ಗೆಜೆಟ್‌ನಲ್ಲಿ ರಾಜ್ಯ ಸರ್ಕಾರ ಪ್ರಕಟಿಸಬೇಕು” ಎಂದು ನ್ಯಾಯಾಲಯ ಗಡುವು ವಿಧಿಸಿದೆ.

ನ್ಯಾಯಾಲಯದ ಕಲಾಪವನ್ನು ಲೈವ್‌ ಸ್ಟ್ರೀಮಿಂಗ್‌ ಮಾಡುವುದಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ನಿಯಮಗಳಿಗೆ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠವು ಸೆಪ್ಟೆಂಬರ್‌ 17ರಂದು ಒಪ್ಪಿಗೆ ನೀಡಿತ್ತು. ಪೂರ್ವ ತಯಾರಿಯ ಭಾಗವಾಗಿ ಮುಖ್ಯ ನ್ಯಾಯಮೂರ್ತಿ ಪೀಠದಿಂದ ಆಯ್ದ ಪ್ರಕರಣಗಳನ್ನು ಲೈವ್‌ ಸ್ಟ್ರೀಮ್‌ ಸಹ ಮಾಡಲಾಗಿತ್ತು.

Kannada Bar & Bench
kannada.barandbench.com