ಬಿಬಿಎಂಪಿ ಚುನಾವಣೆ: ಎರಡು ತಿಂಗಳಲ್ಲಿ ವಾರ್ಡ್‌ ಪುನರ್‌ ವಿಂಗಡಣೆ, ಮೀಸಲಾತಿ ಅಧಿಸೂಚನೆ ಹೊರಡಿಸಲು ಸುಪ್ರೀಂ ಗಡುವು

“ಒಂದೂವರೆ ವರ್ಷದಿಂದ ಬಿಬಿಎಂಪಿಗೆ ಚುನಾವಣೆ ನಡೆದಿಲ್ಲ. ರಾಜ್ಯ ಸರ್ಕಾರವು ಪಾಲಿಕೆಯಲ್ಲಿ ಆಡಳಿತ ನಡೆಸಲಾಗದು. ಪಾಲಿಕೆ ತನ್ನದೇ ಆದ ಆಡಳಿತವನ್ನು ಹೊಂದಬೇಕು. ಅಲ್ಲಿ ಚುನಾಯಿತರು ಇರಬೇಕು” ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯ.
Supreme Court and BBMP
Supreme Court and BBMP

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ ಪುನರ್‌ ವಿಂಗಡಣೆ ಪ್ರಕ್ರಿಯೆ ಮತ್ತು ಹಿಂದುಳಿದ ವರ್ಗಗಳನ್ನೂ ಒಳಗೊಂಡಂತೆ ಶೇಕಡಾವಾರು ಮೀಸಲಾತಿ ಹಂಚಿಕೆ ಪ್ರಕ್ರಿಯೆಯನ್ನು ಎಂಟು ವಾರಗಳಲ್ಲಿ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್‌ ಗಡುವು ವಿಧಿಸಿದೆ. ಅಲ್ಲದೇ, ವಾರ್ಡ್‌ ಪುನರ್‌ ವಿಂಗಡಣೆ ಮತ್ತು ಮೀಸಲಾತಿಗೆ ಸಂಬಂಧಿಸಿದ ಅಧಿಸೂಚನೆ ಪ್ರಕಟವಾದ ಒಂದು ವಾರದ ಬಳಿಕ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಚುನಾವಣಾ ನಡೆಸುವ ಪ್ರಕ್ರಿಯೆ ಆರಂಭಿಸಿಬೇಕು ಎಂದು ನಿರ್ದೇಶಿಸಿದೆ.

ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಆದೇಶಿಸಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ, ಡಾ. ಬಿ ಆರ್‌ ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿ ಹಾಗೂ ಭಾಸ್ಕರ್‌ ಎಂಬವರು ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ವಿಶೇಷ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಬಿಬಿಎಂಪಿ ವ್ಯಾಪ್ತಿಯಲ್ಲಿನ ವಾರ್ಡ್‌ಗಳ ಪುನರ್‌ ವಿಂಗಡಣೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಇಂದಿನಿಂದ ಎಂಟು ವಾರಗಳ ಕಾಲಾವಕಾಶ ನೀಡಲಾಗಿದೆ. ವಾರ್ಡ್‌ ಪುನರ್‌ ವಿಂಗಡಣೆ ಅಥವಾ ಶೇಕಡವಾರು ಮೀಸಲಾತಿ ಅಧಿಸೂಚನೆ ಪ್ರಕಟಣೆಯನ್ನು ಇಂದಿನಿಂದ ಎಂಟು ವಾರಗಳಲ್ಲಿ ಪ್ರಕಟಿಸಬೇಕು. ಆನಂತರ ಒಂದು ವಾರದ ಬಳಿಕ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ನೂತನ ಚುನಾಯಿತ ಕೌನ್ಸಿಲ್‌ ಆಯ್ಕೆ ಪ್ರಕ್ರಿಯೆ ಆರಂಭಿಸಬೇಕು. ಆಯೋಗವು ಚುನಾವಣೆ ಪ್ರಕ್ರಿಯೆ ಆರಂಭಿಸಿದ ಬಳಿಕ ಕಾನೂನಿನ ಪ್ರಕಾರ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಮುಂದುವರೆದು, “ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಬಿಬಿಎಂಪಿ ಕಾಯಿದೆ 2021ರ ಜನವರಿ 11ರಂದು ಜಾರಿಯಾಗಿದೆ. ಇದರ ಅನ್ವಯ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್‌ಗಳ ಪುನರ್‌ ವಿಂಗಡಣೆಗಾಗಿ ರಾಜ್ಯ ಸರ್ಕಾರವು ಆಯೋಗವನ್ನು ರಚಿಸಿದೆ. ಹಿಂದುಳಿದ ವರ್ಗಗಳನ್ನು ಒಳಗೊಂಡಂತೆ ಮೀಸಲಾತಿ ಕಲ್ಪಿಸಲು ಪ್ರತ್ಯೇಕವಾದ ಆಯೋಗವಿದೆ. ವಾರ್ಡ್‌ಗಳ ಪುನರ್‌ ವಿಂಗಡಣೆ ಪ್ರಕ್ರಿಯೆಯು ಅಂತಿಮ ಹಂತದಲ್ಲಿದ್ದು, ಔಪಚಾರಿಕ ಅಧಿಸೂಚನೆಯನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರ ಹೊರಡಿಸಲಿದೆ” ಎಂಬುದನ್ನು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿತು.

“ಮೀಸಲಾತಿ ನಿಗದಿಪಡಿಸಲು ನೇಮಕ ಮಾಡಿರುವ ಆಯೋಗವು ಇದೇ ಸಂದರ್ಭದಲ್ಲಿ ಮೀಸಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅಧಿಸೂಚನೆ ಹೊರಡಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂಬ ಖಾತರಿಯನ್ನು ರಾಜ್ಯ ಸರ್ಕಾರ ನೀಡಿದ್ದು, ಅದರ ಅಧಿಸೂಚನೆಯನ್ನೂ ಹೊರಡಿಸಲಾಗುವುದು ಎಂಬ ರಾಜ್ಯ ಸರ್ಕಾರದ ಭರವಸೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಅದನ್ನು ಒಪ್ಪಿಕೊಳ್ಳಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ನಾಲ್ಕು, ಆರು, ಎಂಟು ವಾರ ಕೇಳಿದ ರಾಜ್ಯ ಸರ್ಕಾರ

ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ತುಷಾರ್‌ ಮೆಹ್ತಾ ಅವರು “ಕಳೆದ ವರ್ಷದ ಜನವರಿ 11ರಂದು ಬಿಬಿಎಂಪಿ 2021 ಕಾಯಿದೆಯನ್ನು ಜಾರಿಗೊಳಿಸಲಾಗಿದೆ. 198ರಿಂದ 243 ವಾರ್ಡ್‌ಗಳಿಗೆ ಹೆಚ್ಚಿಸುವ ಸಂಬಂಧ ಪುನರ್‌ ವಿಂಗಡಣೆ ನಡೆಯುತ್ತಿದೆ. ಈಗ ಆಂತರಿಕ ಪುನರ್‌ ವಿಂಗಡಣೆ ನಡೆಯುತ್ತಿರಬಹುದು. ವಾರ್ಡ್‌ ಪುನರ್‌ ವಿಂಗಡಣೆ ನಡೆಯುತ್ತಿದ್ದು, ನಾಲ್ಕು ವಾರಗಳಲ್ಲಿ ಅದು ಮುಗಿಯಲಿದೆ ಎಂಬುದನ್ನು ಪೀಠವು ಪರಿಗಣಿಸಬಹುದು. ಪುನರ್‌ ವಿಂಗಡಣೆ ಪೂರ್ಣಗೊಳಿಸುವಂತೆ ಆಯೋಗಕ್ಕೆ ನಿರ್ದೇಶಿಸಬಹುದು. ಮೀಸಲಾತಿಯ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಸೂಚನೆ ಪಡೆಯಬೇಕಿದೆ. ಏಕೆಂದರೆ, ಮೀಸಲಾತಿ ಕುರಿತು ಆಯೋಗವು ಕಾರ್ಯನಿರತವಾಗಿದೆ. ಆರರಿಂದ ಎಂಟು ವಾರ ನೀಡಿದರೆ ಇಡೀ ಪ್ರಕ್ರಿಯೆ ಮುಗಿಯಲಿದೆ” ಎಂದು ಹೇಳಿದರು. ಅಂತಿಮವಾಗಿ ಎಂಟು ವಾರ ಕಾಲಾವಕಾಶ ನೀಡುವಂತೆ ಕೋರಿದರು.

ರಾಜ್ಯ ಸರ್ಕಾರ ನಿರ್ಧರಿಸಿದಾಗ ಚುನಾವಣೆ ನಡೆಸಬೇಕೆ?

ನ್ಯಾಯಮೂರ್ತಿ ಖಾನ್ವಿಲ್ಕರ್‌ ಅವರು “ಬಿಬಿಎಂಪಿಗೆ 2021ರಿಂದ ಚುನಾವಣೆ ನಡೆದಿಲ್ಲ. ನೂತನ ಕಾಯಿದೆ ಮತ್ತು ಅದರ ನಿಬಂಧನೆಗಳನ್ನು ವಿವರಿಸಿ. ಇದಕ್ಕೆ ಪ್ರತಿವಾದಿಗಳಿಂದ ತೀವ್ರ ವಿರೋಧವಿದೆ. ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆ. ಪುನರ್‌ ವಿಂಗಡಣೆ ಮುಗಿದಿದ್ದರೆ ಚುನಾವಣೆಯನ್ನು ಇನ್ನೂ ಏಕೆ ಮುಂದಕ್ಕೆ ಹಾಕಬೇಕು. ಪಾಲಿಕೆ ಹೊಸ ವಾರ್ಡ್‌ಗಳನ್ನು ಸೇರಿಸಿದ ಮಾತ್ರಕ್ಕೆ ಚುನಾವಣೆ ನಡೆಸಬಾರದು ಅಥವಾ ರಾಜ್ಯ ಸರ್ಕಾರ ನಿರ್ಧರಿಸಿದಾಗ ಚುನಾವಣೆ ನಡೆಸಬೇಕು ಎಂದೇನಿಲ್ಲ” ಎಂದರು.

“ವಾರ್ಡ್ ಪುನರ್‌ ವಿಂಗಡಣೆ ನಡೆಯುತ್ತಿದೆ ಎಂದಾದರೆ ನಾವು ಅದು ಯಾವಾಗ ಮುಗಿಯುತ್ತದೆ ಎಂಬುದರ ಕಾಲಮಿತಿ ತಿಳಿಯಲು ಬಯಸುತ್ತೇವೆ. ನೀವು ಆ ಹಾದಿಯಲ್ಲಿ ಕೆಲಸ ಮಾಡಲು ಇದು ಅನುಕೂಲ ಮಾಡಿಕೊಡುತ್ತದೆ. ಹೊಸ ಕೌನ್ಸಿಲ್‌ ರಚಿಸಲು ಅನುವಾಗುತ್ತದೆ. ನೀವು ಹೇಳಿದಂತೆ ನಾಲ್ಕು ವಾರಗಳಲ್ಲಿ ಅದು (ಪುನರ್‌ ವಿಂಗಡಣೆ) ಮುಗಿದರೆ ಚುನಾವಣೆ ಪ್ರಕ್ರಿಯೆ ಆರಂಭಿಸಬಹುದು. ಇದನ್ನು ನಾವು ದಾಖಲಿಸುತ್ತೇವೆ. ನೀವು ಎಷ್ಟು ಸಮಯ ಕೇಳುತ್ತೀರೊ ಅದನ್ನು ನಾವು ದಾಖಲಿಸುತ್ತೇವೆ. ಇಡೀ ಪ್ರಕ್ರಿಯೆಯನ್ನು ಆರು ವಾರಗಳಲ್ಲಿ ಪೂರ್ಣಗೊಳಿಸಿ” ಎಂದು ಪೀಠ ರಾಜ್ಯ ಸರ್ಕಾರಕ್ಕೆ ಹೇಳಿತು.

ಒಂದೂವರೆ ವರ್ಷದಿಂದ ಬಿಬಿಎಂಪಿಗೆ ಚುನಾವಣೆ ನಡೆದಿಲ್ಲ. ಈ ವಿಚಾರವನ್ನು ನಾವು ಪರಿಗಣಿಸಬೇಕಿದೆ. ರಾಜ್ಯ ಸರ್ಕಾರವು ಪಾಲಿಕೆಯಲ್ಲಿ ಆಡಳಿತ ನಡೆಸಲಾಗದು. ಪಾಲಿಕೆ ತನ್ನದೇ ಆದ ಆಡಳಿತವನ್ನು ಹೊಂದಬೇಕು. ಅಲ್ಲಿ ಚುನಾಯಿತರು ಇರಬೇಕು” ಎಂದು ಪೀಠ ಹೇಳಿತು.

ಒಂದೂವರೆ ವರ್ಷದಿಂದ ಬಿಬಿಎಂಪಿಗೆ ಚುನಾವಣೆ ನಡೆದಿಲ್ಲ. ಈ ವಿಚಾರವನ್ನು ನಾವು ಪರಿಗಣಿಸಬೇಕಿದೆ. ರಾಜ್ಯ ಸರ್ಕಾರವು ಪಾಲಿಕೆಯಲ್ಲಿ ಆಡಳಿತ ನಡೆಸಲಾಗದು. ಪಾಲಿಕೆ ತನ್ನದೇ ಆದ ಆಡಳಿತವನ್ನು ಹೊಂದಬೇಕು. ಅಲ್ಲಿ ಚುನಾಯಿತರು ಇರಬೇಕು.

- ಸುಪ್ರೀಂ ಕೋರ್ಟ್‌

“ನಾವು ಮತ್ತೆ ಮತ್ತೆ ಕೇಳುತ್ತಿದ್ದಂತೆ ನೀವು ಸಮಯ ವಿಸ್ತರಣೆ ಕೇಳುತ್ತಿದ್ದೀರಿ. ವಾಸ್ತವವನ್ನು ಅರ್ಥ ಮಾಡಿಕೊಳ್ಳಿ. ಚುನಾವಣೆ ನಡೆಸುವುದು ಸಾಂವಿಧಾನಿಕ ಅಗತ್ಯ” ಎಂದು ಸರ್ಕಾರಕ್ಕೆ ಜವಾಬ್ದಾರಿ ನೆನಪಿಸಿತು.

Also Read
ಸುಪ್ರೀಂ ತೀರ್ಪು: ಬಿಬಿಎಂಪಿ, ಜಿಲ್ಲಾ-ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಎದುರಾಗಿರುವ ಕಾನೂನು ತೊಡಕುಗಳೇನು?

ಚುನಾವಣೆ ನಡೆಸಲು ಆಯೋಗ ಸಿದ್ಧ

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಬಿಬಿಎಂಪಿ ಆಡಳಿತಕ್ಕೆ ಸಂಬಂಧಿಸಿದಂತೆ ನೂತನವಾಗಿ 2021ರಲ್ಲಿ ಕಾಯಿದೆ ಜಾರಿಗೆ ತರಲಾಗಿದೆ. ಕೆಎಂಪಿ ಕಾಯಿದೆ ಮತ್ತು ನೂತನ ಬಿಬಿಎಂಪಿ ಕಾಯಿದೆಗೆ ಯಾವುದೇ ವ್ಯತ್ಯಾಸವಿಲ್ಲ. ವಾರ್ಡ್‌ ಪುನರ್‌ ವಿಂಗಡಣೆ ಮುಗಿದಿದೆ. ಚುನಾವಣೆ ನಡೆಸಬಹುದಾಗಿದೆ. ಆಯೋಗವು 70 ದಿನಗಳಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಸಲು ಸಿದ್ಧವಾಗಿದೆ” ಎಂದರು.

“ನಾಲ್ಕರಿಂದ ಆರು ವಾರಗಳ ಒಳಗೆ ಅವರು ವಾರ್ಡ್‌ ಪುನರ್‌ ವಿಂಗಡಣೆ ಪ್ರಕ್ರಿಯೆ ಮುಗಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಇದೇ ಸಂದರ್ಭದಲ್ಲಿ ಮೀಸಲಾತಿ ಪ್ರಕ್ರಿಯೆಯೂ ಪೂರ್ಣಗೊಳ್ಳಬೇಕು. ಏಕೆಂದರೆ ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನೂ ನಮ್ಮಿಂದ ಕಸಿದುಕೊಳ್ಳಲಾಗಿದೆ. ಪುನರ್‌ ವಿಂಗಡಣೆ ಪ್ರಕ್ರಿಯೆ ಮುಗಿದ ಬಳಿಕ ನಾವು ಮತದಾರರ ಪಟ್ಟಿ ಸಿದ್ಧಪಡಿಸಬೇಕಿದೆ” ಎಂದರು.

ಎಲ್ಲರ ವಾದವನ್ನು ಆಲಿಸಿದ ಪೀಠವು ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿ, ಪ್ರಕರಣದ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com