ಸ್ಥಳೀಯ ಸಂಸ್ಥೆ ಚುನಾವಣೆ: ಸತತ ಕಾನೂನು ಹೋರಾಟಗಳ ಬಗ್ಗೆ ಹೈಕೋರ್ಟ್‌ಗೆ ವಿವರಿಸಿದ ರಾಜ್ಯ ಚುನಾವಣಾ ಆಯೋಗ

ವಾರ್ಡ್‌ಗಳ ಗಡಿ ನಿಗದಿಪಡಿಸಿ ಪಟ್ಟಿ ಕೊಟ್ಟರೆ ಮತದಾರರ ಪಟ್ಟಿ ತಯಾರಿಸುವ ಕೆಲಸ ಆಯೋಗ ಆರಂಭಿಸಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಆಯೋಗ.
Karnataka High Court
Karnataka High Court
Published on

ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆಗಳು ನಡೆಯುವಂತಾಗಬೇಕು ಎಂದು ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ತಾನು ಕಾನೂನು ಹೋರಾಟದಲ್ಲಿ ತೊಡಗಿರುವುದಾಗಿ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ಗೆ ವಿವರಿಸಿದೆ.

ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ವಿಳಂಬವಾದ ಹಿನ್ನೆಲೆಯಲ್ಲಿ 16 ತಿಂಗಳ ಕಾಲ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದ ಅವಧಿಯನ್ನು ತಮ್ಮ ಐದು ವರ್ಷದ ಅಧಿಕಾರವಧಿಗೆ ಪರಿಗಣಿಸಬಾರದು ಹಾಗೂ ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳ ನೇಮಕ ಮಾಡುವ ಕ್ರಮಕ್ಕೆ ಮುಂದಾಗದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ 40ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿದ್ದವು

ಈ ವೇಳೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ವಿಚಾರವಾಗಿ ಚುನಾವಣಾ ಆಯೋಗ ಗಮನಿಸುತ್ತಿಲ್ಲವೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ, "ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಿಗದಿತ ಅವಧಿಯಲ್ಲಿ ನಡೆಯುವಂತಾಗಬೇಕು, ಅದಕ್ಕೆ ಸರ್ಕಾರ ಅನುವು ಮಾಡಿಕೊಡಬೇಕು ಎಂದು ಚುನಾವಣಾ ಆಯೋಗ ನ್ಯಾಯಾಲಯದ ಮೊರೆ ಹೋಗಿದೆ. ನಾಲ್ಕೈದು ವರ್ಷಗಳಿಂದ ಸತತವಾಗಿ ಸುಪ್ರೀಂಕೋರ್ಟ್-ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲಾಗುತ್ತಿದೆ. ಬಿಬಿಎಂಪಿ ಚುನಾವಣೆ ವಿಚಾರವಾಗಿ ನಾಲ್ಕು ವರ್ಷಗಳ ಹಿಂದೆ ಆಯೋಗ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ನಲ್ಲೂ ಹೋರಾಟ ಮಾಡಿದ್ದೇವೆ. ತಾ.ಪಂ ಜಿ.ಪಂ ಚುನಾವಣೆಗಳ ವಿಚಾರವಾಗಿ ಮೂರು ವರ್ಷಗಳ ಹಿಂದೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯ ಸಮಯ ಕೊಡುತ್ತಲೇ ಬಂದಿದೆ. ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿಯೂ ಅರ್ಜಿ ಸಲ್ಲಿಸಲಾಗಿದೆ. ಅಲ್ಲದೇ ಈ ವರ್ಷದ ಕೊನೆಗೆ ಅವಧಿ ಮುಗಿಯಲಿರುವ ಗ್ರಾ.ಪಂ ಚುನಾವಣೆಗಳನ್ನು ನಡೆಸುವ ಬಗ್ಗೆ ಚುನಾವಣಾ ಆಯೋಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದರು.

ಸರ್ಕಾರ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ನನಗೆ ನೀಡಲಾಗಿರುವ ಮಾಹಿತಿ ಪ್ರಕಾರ ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ಆರಂಭವಾಗಿದೆ ಎಂದರು.

ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್, ಅಂತಹದ್ದೇನೂ ನಡೆಯುತ್ತಿಲ್ಲ ಎಂದರು. ವಾರ್ಡ್‌ಗಳ ಗಡಿ ನಿಗದಿಪಡಿಸಿ ಪಟ್ಟಿ ಕೊಟ್ಟರೆ ಮತದಾರರ ಪಟ್ಟಿ ತಯಾರಿಸುವ ಕೆಲಸ ಆಯೋಗ ಆರಂಭಿಸಲಿದೆ ಎಂದು ಫಣೀಂದ್ರ ಹೇಳಿದರು. ಈ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com