[ಲೋಕ್ ಅದಲಾತ್] ವರ್ಷದಲ್ಲಿ ನಿರ್ಧಾರವಾಗಬೇಕಿದ್ದ ಪ್ರಕರಣಗಳು ಒಂದೇ ದಿನದಲ್ಲಿ ಇತ್ಯರ್ಥ: ನ್ಯಾ. ಬಿ ವೀರಪ್ಪ

2021ರಲ್ಲಿ ನಡೆಸಲಾಗಿರುವ 4 ಅದಾಲತ್‌ಗಳಿಂದ ಸರ್ಕಾರಕ್ಕೆ 625 ಕೋಟಿಗೂ ಅಧಿಕ ಉಳಿತಾಯವಾಗಿದೆ ಎಂದು ಅವರು ವಿವರಿಸಿದರು.
[ಲೋಕ್ ಅದಲಾತ್] ವರ್ಷದಲ್ಲಿ ನಿರ್ಧಾರವಾಗಬೇಕಿದ್ದ ಪ್ರಕರಣಗಳು ಒಂದೇ ದಿನದಲ್ಲಿ ಇತ್ಯರ್ಥ: ನ್ಯಾ. ಬಿ ವೀರಪ್ಪ

ರಾಜ್ಯದೆಲ್ಲೆಡೆ ಡಿ.18ರಂದು ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ಒಟ್ಟು 3.37 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಂದು ವರ್ಷದಲ್ಲಿ ಬಗೆಹರಿಸಬಹುದಾದಷ್ಟು ಪ್ರಕರಣಗಳನ್ನು ಒಂದೇ ದಿನದಲ್ಲಿ ಇತ್ಯರ್ಥಪಡಿಸಲಾಗಿದೆ.

ಹೈಕೋರ್ಟ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಬಿ. ವೀರಪ್ಪ ಈ ಕುರಿತು ಮಾಹಿತಿ ನೀಡಿದರು.

ನ್ಯಾಯಾಲಯಗಳಲ್ಲಿ ಬಾಕಿ ಇದ್ದ 3,29,074 ಪ್ರಕರಣಗಳು ಹಾಗೂ 8,606 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 3,37,680 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇದರಿಂದ, ರಾಜ್ಯದ ವಿವಿಧ ನ್ಯಾಯಾಲಯಗಳ ಸುಮಾರು 1,100 ನ್ಯಾಯಾಧೀಶರು ಒಂದು ವರ್ಷದಲ್ಲಿ ಇತ್ಯರ್ಥಪಡಿಸಬಹುದಾದ ಪ್ರಕರಣಗಳನ್ನು ಒಂದೇ ದಿನದಲ್ಲಿ ಬಗೆಹರಿಸಿದಂತಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

Also Read
ಈ ಬಾರಿಯ ಲೋಕ್ ಅದಾಲತ್‌ನಲ್ಲಿ ಗ್ರಾಹಕ ವೇದಿಕೆ, ಸಾಲ ವಸೂಲಾತಿ ನ್ಯಾಯಮಂಡಳಿ ಪ್ರಕರಣ ಕೂಡ ಇತ್ಯರ್ಥ: ನ್ಯಾ. ಬಿ ವೀರಪ್ಪ

3.37 ಲಕ್ಷ ಪ್ರಕರಣ, ರೂ. 862 ಕೋಟಿ ಪರಿಹಾರ

ಲೋಕ ಅದಾಲತ್‌ನಲ್ಲಿ ಒಟ್ಟು 5,53,726 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿತ್ತು. 14,895 ಸಿವಿಲ್ ಪ್ರಕರಣಗಳು, 3,13,849 ಕ್ರಿಮಿನಲ್ ಪ್ರಕರಣಗಳು, ಗ್ರಾಹಕ ನ್ಯಾಯಾಲಯ ಮತ್ತು ಸಾಲ ವಸೂಲಾತಿ ನ್ಯಾಯಾಧಿಕರಣಗಳಲ್ಲಿನ 551 ಪ್ರಕರಣಗಳೂ ಸೇರಿ ಒಟ್ಟು 3,37,680 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಕಕ್ಷಿದಾರರಿಗೆ ಒಟ್ಟು ರೂ. 862,08,20,145 ಪರಿಹಾರ ಕೊಡಿಸಲಾಗಿದೆ.

113 ವಾಣಿಜ್ಯ ಪ್ರಕರಣ, ರೂ. 157 ಕೋಟಿ ಪರಿಹಾರ

ವಾಣಿಜ್ಯ ನ್ಯಾಯಾಲಯಗಳ ಒಟ್ಟು 113 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರೂ. 157,18,21,548 ಪರಿಹಾರ ಕೊಡಿಸಲಾಗಿದ್ದರೆ, ಕೈಗಾರಿಕಾ ನ್ಯಾಯಾಲಯಗಳ 25 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ರೂ. 2,03,74,837 ಪರಿಹಾರದ ಮೊತ್ತ ಪಾವತಿಸಲಾಗಿದೆ.

4 ಅದಾಲತ್, ರೂ.625 ಕೋಟಿ ಉಳಿತಾಯ

ಲೋಕ ಅದಾಲತ್‌ನಲ್ಲಿ ವಿವಿಧ ಪ್ರಕರಣಗಳಿಂದ ಸರ್ಕಾರಕ್ಕೆ ಬರಬೇಕಿದ್ದ ರೂ.79,72,09,655 ದಂಡ ವಸೂಲಿ ಮಾಡಿಕೊಡಲಾಗಿದೆ. ಜತೆಗೆ, ಇಷ್ಟೊಂದು ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಗಳು ಕಲಾಪ ನಡೆಸಿದ್ದರೆ ನ್ಯಾಯಾಧೀಶರು ಮತ್ತು ಸಿಬ್ಬಂದಿ ವೇತನ ಮತ್ತಿತರ ಕಾರಣಗಳಿಗಾಗಿ ಸರ್ಕಾರ 132,60,52,698 ರೂ. ಗಳನ್ನು ವೆಚ್ಚ ಮಾಡಬೇಕಿತ್ತು. ಆದರೆ, ಒಂದೇ ದಿನದಲ್ಲಿ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಂಡಿರುವ ಕಾರಣ ಸರ್ಕಾರಕ್ಕೆ ಆ ಹಣ ಉಳಿತಾಯವಾದಂತಾಗಿದೆ. 2021ರಲ್ಲಿ ನಡೆಸಲಾಗಿರುವ 4 ಅದಾಲತ್‌ಗಳಿಂದ ಸರ್ಕಾರಕ್ಕೆರೂ. 625 ಕೋಟಿಗೂ ಅಧಿಕ ಉಳಿತಾಯವಾಗಿದೆ ಎಂದು ಅವರು ವಿವರಿಸಿದರು.

ವೈವಾಹಿಕ ವಿರಸದಿಂದ ಸಮರಸದೆಡೆಗೆ

ಈ ಬಾರಿಯ ಲೋಕ ಅದಾಲತ್‌ನಲ್ಲಿ ಒಟ್ಟು 1,528 ಕೌಟುಂಬಿಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗಿದ್ದು, ಅವುಗಳಲ್ಲಿ ಮೈಸೂರಿನ 25, ಹುಬ್ಬಳ್ಳಿ- ಧಾರವಾಡದ 2, ಗದಗದ 8, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರದ ತಲಾ 1 ಸೇರಿ ಒಟ್ಟು 37 ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಸತಿ-ಪತಿ ಮತ್ತೆ ಒಂದಾಗಿದ್ದಾರೆ. ಇದರೊಂದಿಗೆ 2021ರಲ್ಲಿ ಲೋಕ ಅದಾಲತ್ ಮೂಲಕ 100ಕ್ಕೂ ಅಧಿಕ ದಂಪತಿ ವ್ಯಾಜ್ಯ ತೊರೆದು ಸಹಬಾಳ್ವೆ ನಡೆಸಲು ಮುಂದಾದಂತಾಗಿದೆ.

ಕುತೂಹಲಕಾರಿ ಅಂಶಗಳು

  • ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿದ್ದು, 52 ಸಾವಿರ ಪ್ರಕರಣಗಳಲ್ಲಿ ಕಕ್ಷಿದಾರರು ರಾಜೀ ಸಂಧಾನ ಮಾಡಿಕೊಂಡಿದ್ದಾರೆ.

  • ತುಮಕೂರಿನಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ದಾಖಲೆಯ 80 ಲಕ್ಷ ರೂ. ಪರಿಹಾರ ವಿತರಣೆಯಾಗಿದೆ.

  • ಧಾರವಾಡ ಜಿಲ್ಲೆಯ ಕುಂದಗೋಳ ಹಿರಿಯ ಸಿವಿಲ್ ಕೋರ್ಟ್‌ನಲ್ಲಿದ್ದ 35 ವರ್ಷಗಳ ಹಿಂದಿನ ಆಸ್ತಿ ವ್ಯಾಜ್ಯ ಇತ್ಯರ್ಥ..

  • ಬೆಂಗಳೂರಿನ 39ನೇ ಸಿಸಿಎಚ್ ಕೋರ್ಟ್‌ನಲ್ಲಿ 87 ವರ್ಷದ ವೃದ್ಧೆಯ ಆಸ್ತಿ ಪಾಲು ಪ್ರಕರಣ ವಿಲೇವಾರಿ. 8ನೇ ಸಿಸಿಎಚ್ ನ್ಯಾಯಾಲಯದಲ್ಲಿ 22 ವರ್ಷಗಳ ಹಳೇ ಪ್ರಕರಣ ಇತ್ಯರ್ಥ.

  • ಹಾಸನದ ಹೊಳೆನರಸೀಪುರದಲ್ಲಿ 17 ವರ್ಷಗಳಿಂದ ಬಾಕಿ ಇದ್ದ ಜೀವನಾಂಶ ಪ್ರಕರಣದಲ್ಲಿ ಪತ್ನಿಗೆ 1.28 ಗುಂಟೆ ಜಮೀನು ನೀಡುವ ಮೂಲಕ ಇತ್ಯರ್ಥ.

Related Stories

No stories found.
Kannada Bar & Bench
kannada.barandbench.com