ನ್ಯಾ. ವರ್ಮಾ ವಾಗ್ದಂಡನೆ: ಸಲಹೆಗಾಗಿ ಇಬ್ಬರು ವಕೀಲರ ನೇಮಿಸಿಕೊಂಡ ಲೋಕಸಭಾ ಸ್ಪೀಕರ್

ನ್ಯಾ. ವರ್ಮಾ ಅವರ ಅಧಿಕೃತ ನಿವಾಸದಲ್ಲಿ ನಗದು ಪತ್ತೆಯಾದ ಬಗ್ಗೆ ಆಗಸ್ಟ್ 12ರಂದು ತನಿಖೆ ನಡೆಸಲು ಸಮಿತಿ ರಚಿಸುವ ಮೂಲಕ ಸ್ಪೀಕರ್ ಅವರು ನ್ಯಾ. ವರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆ ಆರಂಭಿಸಿದ್ದರು.
Justice Yashwant Varma
Justice Yashwant Varma
Published on

ತಮ್ಮ‌ ದೆಹಲಿ ನಿವಾಸದಲ್ಲಿ ಅಪಾರ ಪ್ರಮಾಣದ ನಗದು‌ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಬಗ್ಗೆ ತನಿಖೆ ಮಾಡಲು ರಚಿಸಲಾದ ಸಮಿತಿಗೆ ಸಹಾಯ ಮಾಡುವುದಕ್ಕಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಕೀಲರಾದ ರೋಹನ್ ಸಿಂಗ್ ಮತ್ತು ಸಮೀಕ್ಷಾ ದುವಾ ಅವರನ್ನು ಸಲಹೆಗಾರರನ್ನಾಗಿ ಔಪಚಾರಿಕವಾಗಿ ನೇಮಿಸಿಕೊಂಡಿದ್ದಾರೆ .

ನ್ಯಾ. ವರ್ಮಾ ಅವರ ಅಧಿಕೃತ ನಿವಾಸದಲ್ಲಿ ನಗದು ಪತ್ತೆಯಾದ ಬಗ್ಗೆ ಆಗಸ್ಟ್ 12ರಂದು ತನಿಖೆ ನಡೆಸಲು ಸಮಿತಿ ರಚಿಸುವ ಮೂಲಕ ಸ್ಪೀಕರ್ ಅವರು ನ್ಯಾ. ವರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆ ಆರಂಭಿಸಿದ್ದರು.

Also Read
ನ್ಯಾ. ವರ್ಮಾ ವಿರುದ್ಧದ ಆರೋಪಗಳ ತನಿಖೆಗೆ ತ್ರಿಸದಸ್ಯ ಸಮಿತಿ ರಚಿಸಿದ ಲೋಕಸಭಾ ಸ್ಪೀಕರ್

ಸುಪ್ರೀಂ ಕೋರ್ಟ್ ರಚಿಸಿದ ಆಂತರಿಕ ಸಮಿತಿ ಈ ಹಿಂದೆ ನ್ಯಾ. ವರ್ಮಾ ಅವರ ವಿರುದ್ಧ ದೋಷಾರೋಪ ವರದಿ ಮಾಡಿ ಅವರನ್ನು ಪದಚ್ಯುತಗೊಳಿಸಲು ಶಿಫಾರಸು ಮಾಡಿತ್ತು.

ಹಾಲಿ ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಶಿಫಾರಸು ಮಾಡಬಹುದಾದರೂ ಅವರಿಗೆ ವಾಗ್ದಂಡನೆ ವಿಧಿಸುವ ಅಧಿಕಾರ ಸಂಸತ್ತಿಗೆ‌ ಮಾತ್ರವೇ ಇರುತ್ತದೆ.

ನಂತರ ಕೇಂದ್ರ ಸರ್ಕಾರ ಪ್ರಸ್ತುತ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾ. ವರ್ಮಾ ಅವರಿಗೆ ವಾಗ್ದಂಡನೆ ವಿಧಿಸುವುದಕ್ಕಾಗಿ ಸಂಸತ್ತಿನಲ್ಲಿ ಪ್ರಸ್ತಾವನೆ ಮಂಡಿಸಿತ್ತು.

146 ಸಂಸತ್ ಸದಸ್ಯರು ಸಹಿ ಮಾಡಿದ ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿದ್ದರು. ನ್ಯಾಯಾಧೀಶರ (ವಿಚಾರಣಾ) ಕಾಯಿದೆಯಡಿ, ಲೋಕಸಭಾ ಸ್ಪೀಕರ್ ಅವರು ಬಳಿಕ ಘಟನೆಯ ತನಿಖೆಗಾಗಿ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ , ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ಕರ್ನಾಟಕ ಮೂಲದ ಹಿರಿಯ ವಕೀಲ ಬಿ ವಾಸುದೇವ ಆಚಾರ್ಯ ಅವರನ್ನು ಒಳಗೊಂಡ ಸಮಿತಿ ರಚಿಸಿದ್ದರು.

ಲೋಕಸಭಾ ಸಚಿವಾಲಯ ಸೆಪ್ಟೆಂಬರ್ 19ರಂದು ಹೊರಡಿಸಿದ ಆದೇಶದ ಪ್ರಕಾರ, ನ್ಯಾಯಮೂರ್ತಿ ವರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ಚಿಂತನೆ ನಡೆಸುತ್ತಿರುವ ಆಧಾರದ ಮೇಲೆ ಸಮಿತಿಗೆ ಸಹಾಯ ಮಾಡಲು ವಕೀಲರಾದ ರೋಹನ್ ಸಿಂಗ್ ಮತ್ತು ಸಮೀಕ್ಷಾ ದುವಾ ಅವರನ್ನು ನೇಮಿಸಲಾಗಿದೆ.

Kannada Bar & Bench
kannada.barandbench.com