
ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ರಾಶಿ ಪತ್ತೆಯಾದ ಪ್ರಕರಣದ ತನಿಖೆಗಾಗಿ ಸಮಿತಿ ರಚಿಸುವ ಮೂಲಕ , ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ನ್ಯಾ. ವರ್ಮಾ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ಪದಚ್ಯುತಗೊಳಿಸುವ ಪ್ರಕ್ರಿಯೆಯನ್ನು ಔಪಚಾರಿಕವಾಗಿ ಆರಂಭಿಸಿದ್ದಾರೆ.
ಈ ಹಿಂದೆ ಹೈಕೋರ್ಟ್ ಮೂವರು ನ್ಯಾಯಮೂರ್ತಿಗಳ ಸಮಿತಿ (ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನೊಳಗೊಂಡ ಸಮಿತಿ) ನ್ಯಾ. ವರ್ಮಾ ಅವರ ವಿರುದ್ಧ ವಾಗ್ದಂಡನೆಗೆ (ಮಹಾಭಿಯೋಗ) ಶಿಫಾರಸ್ಸು ಮಾಡಿತ್ತು. ನಂತರ ಕೇಂದ್ರ ಸರ್ಕಾರ ನ್ಯಾ. ವರ್ಮಾ ಅವರಿಗೆ ವಾಗ್ದಂಡನೆ ವಿಧಿಸಲು ಸಂಸತ್‌ನಲ್ಲಿ ಪ್ರಸ್ತಾವನೆ ಮಂಡಿಸಿತ್ತು.
ಸಂಸತ್ತಿನ 146 ಸದಸ್ಯರು ಸಹಿ ಮಾಡಿದ ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿದರು. ನ್ಯಾಯಾಧೀಶರ (ವಿಚಾರಣಾ) ಕಾಯಿದೆಯ ಪ್ರಕಾರ, ಲೋಕಸಭಾ ಸ್ಪೀಕರ್ ಅವರು ಇದೀಗ ಘಟನೆಯ ತನಿಖೆಗಾಗಿ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ಹಿರಿಯ ನ್ಯಾಯವಾದಿ ಬಿ ವಾಸುದೇವ ಆಚಾರ್ಯ ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ರಚಿಸಿದ್ದಾರೆ. ಇವರಲ್ಲಿ ನ್ಯಾ. ಅರವಿಂದ್ ಕುಮಾರ್ ಮತ್ತು ಬಿ ವಿ ಆಚಾರ್ಯ ಅವರು ಕರ್ನಾಟಕ ಮೂಲದವರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಾಭಿಯೋಗ ಪ್ರಕ್ರಿಯೆ ನಡೆಸದೆ ನ್ಯಾಯಾಧೀಶರನ್ನು ಪದಚ್ಯುತಗೊಳಿಸಲು ಸಾಧ್ಯವಿಲ್ಲ. ಅಂತೆಯೇ ಸಂವಿಧಾನದ 124(4)ನೇ ವಿಧಿ ಪ್ರಕಾರ ರಾಷ್ಟ್ರಪತಿಗಳ ಆದೇಶವಿಲ್ಲದೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸಲಾಗುವುದಿಲ್ಲ.
ಸಂಸತ್ತಿನ ಪ್ರತಿಯೊಂದು ಸದನದಲ್ಲಿ ಹಾಜರಿದ್ದ ಸದಸ್ಯರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರು ಈ ನಿರ್ಣಯಕ್ಕೆ ಬೆಂಬಲ ನೀಡಿದ ನಂತರವೇ ರಾಷ್ಟ್ರಪತಿಗಳು ಪದಚ್ಯುತಿಗೆ ಮುಂದಾಗಬಹುದು. 218ನೇ ವಿಧಿ ಈ ಷರತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಪದಚ್ಯುತಿಗೆ ಸಂಬಂಧಿಸಿದಂತೆಯೂ ಅನ್ವಯವಾಗಲಿದೆ ಎನ್ನುತ್ತದೆ.
ಸೆಕ್ಷನ್ 3(9)ರ ಪ್ರಕಾರ ಕೇಂದ್ರ ಸರ್ಕಾರ ಅಗತ್ಯಬಿದ್ದರೆ ಸ್ಪೀಕರ್ ಅಥವಾ ಸಭಾಪತಿ ಅಥವಾ ಇಬ್ಬರೂ, ನ್ಯಾಯಾಧೀಶರ ವಿರುದ್ಧದ ಪ್ರಕರಣವನ್ನು ನಡೆಸಲು ವಕೀಲರನ್ನು ನೇಮಿಸಬಹುದು. ನಂತರ ಈ ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
" ಸಂಸತ್ತಿನ ಪ್ರತಿಯೊಂದು ಸದನವೂ 124 ರ (4) ನೇ ವಿಧಿಗೆ ಅನುಗುಣವಾಗಿ ಅಥವಾ ಸಂದರ್ಭಾನುಸಾರವಾಗಿ, ಸಂವಿಧಾನದ 218 ನೇ ವಿಧಿಯೊಂದಿಗೆ ಸಹವಾಚನ ಮಾಡಿದ ಷರತ್ತಿಗೆ ಅನುಸಾರವಾಗಿ ನಿರ್ಣಯವನ್ನು ಅಂಗೀಕರಿಸಿದರೆ, ನ್ಯಾಯಾಧೀಶರ ಲೋಪ ಅಥವಾ ಅಸಮರ್ಥತೆ ಸಾಬೀತಾಗಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ನಿರ್ಣಯವನ್ನು ಅಂಗೀಕರಿಸಿದ ಅದೇ ಅಧಿವೇಶನದಲ್ಲಿ ಸಂಸತ್ತಿನ ಪ್ರತಿಯೊಂದು ಸದನವು ಅದನ್ನು ಮುಂದಿನ ಕ್ರಮಕ್ಕಾಗಿ ರಾಷ್ಟ್ರಪತಿಗಳ ಮುಂದೆ ನಿಗದಿತ ರೀತಿಯಲ್ಲಿ ಅದನ್ನು ಇರಿಸಬೇಕು " ಎಂದು ಕಾಯಿದೆಯ ಸೆಕ್ಷನ್ 6(3) ಹೇಳುತ್ತದೆ.