ನ್ಯಾ. ವರ್ಮಾ ಪ್ರಕರಣ: ತನಿಖಾ ಸಮಿತಿ ಮರುರಚಿಸಿದ ಲೋಕಸಭಾ ಸ್ಪೀಕರ್‌

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಅವರು ಮಾರ್ಚ್ 6ರಂದು ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಅವರನ್ನು ಸಮಿತಿಗೆ ಸೇರ್ಪಡೆ ಮಾಡಲಾಗಿದೆ.
Justice Yashwant Varma
Justice Yashwant Varma
Published on

--

ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ರಾಶಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧದ  ತನಿಖೆಗಾಗಿ ರಚಿಸಲಾಗಿದ್ದ ತ್ರಿಸದಸ್ಯ ಸಮಿತಿಯನ್ನು ಲೋಕಸಭಾ ಸ್ಪೀಕರ್‌ ಫೆಬ್ರವರಿ 25ರಂದು ಮರು ರಚಿಸಿದ್ದಾರೆ.

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಅವರು ಮಾರ್ಚ್ 6ರಂದು ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಅವರನ್ನು ಸಮಿತಿಗೆ ಸೇರ್ಪಡೆ ಮಾಡಲಾಗಿದೆ.

Also Read
ನ್ಯಾ. ವರ್ಮಾ ಖುಲಾಸೆಯಾದರೂ ಮಾಧ್ಯಮ ವಿಚಾರಣೆಯಿಂದಾಗಿ ಅವರ ಪ್ರಾಮಾಣಿಕತೆಯನ್ನು ಯಾರೂ ನಂಬುವುದಿಲ್ಲ: ಮುಕುಲ್‌ ರೋಹಟ್ಗಿ

2025ರ ಆಗಸ್ಟ್ 12ರಂದು ರಚಿಸಲಾಗಿದ್ದ ಮೂಲ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ಹಿರಿಯ ವಕೀಲ ಬಿ ವಾಸುದೇವ ಆಚಾರ್ಯ ಸದಸ್ಯರಾಗಿದ್ದರು.

ಗಮನಾರ್ಹ ಅಂಶವೆಂದರೆ ಲೋಕಸಭಾ ಸ್ಪೀಕರ್‌ ರಚಿಸಿರುವ ತ್ರಿಸದಸ್ಯ ಸಮಿತಿ ರದ್ದುಗೊಳಿಸುವಂತೆ ನ್ಯಾ. ವರ್ಮಾ ಅವರು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಈಚೆಗೆ ತಿರಸ್ಕರಿಸಿತ್ತು.

ಕೆಲ ದಿನಗಳ ಹಿಂದೆ ನ್ಯಾ. ವರ್ಮಾ ಅವರು, ಅಗ್ನಿ ಅವಘಡ ಸಂಭವಿಸಿದ ವೇಳೆ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಇರಲಿಲ್ಲ. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳ ಆ ಸ್ಥಳದಿಂದ ಯಾವುದೇ ನಗದು ವಶಪಡಿಸಿಕೊಂಡಿರಲಿಲ್ಲ ಎಂದು ತಿಳಿಸಿದ್ದರು.

Also Read
ವಾಗ್ದಂಡನೆ ಪ್ರಕ್ರಿಯೆ ಪ್ರಶ್ನಿಸಿದ್ದ ನ್ಯಾ. ಯಶವಂತ್ ವರ್ಮಾ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು ಘಟನೆಯ ಆಂತರಿಕ ತನಿಖೆಗಾಗಿ ಹೈಕೋರ್ಟ್ ನ್ಯಾಯಮೂರ್ತಿಗಳ ತ್ರಿಸದಸ್ಯ ಸಮಿತಿ ರಚಿಸಿದ್ದರು. ನ್ಯಾಯಮೂರ್ತಿ ವರ್ಮಾ ವಿರುದ್ಧ ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿತು. ಅವರು ರಾಜೀನಾಮೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ವರದಿಯನ್ನು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಕಳುಹಿಸಿ ನ್ಯಾ. ವರ್ಮಾ ವಿರುದ್ಧ ವಾಗ್ದಂಡನೆಗೆ ದಾರಿ ಮಾಡಿಕೊಡಲಾಯಿತು.

ಸಂವಿಧಾನದ ಕಲಂ 124(4) ಮತ್ತು 218ರ ಪ್ರಕಾರ, ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕಾರ ದೊರೆತ ಬಳಿಕವೇ ರಾಷ್ಟ್ರಪತಿಯವರು ಕಳಂಕಿತ ನ್ಯಾಯಮೂರ್ತಿಗಳನ್ನು ತೆರವುಗೊಳಿಸಬಹುದು. ನ್ಯಾಯಮೂರ್ತಿಗಳ (ತನಿಖೆ) ಕಾಯಿದೆ 1986 ಪ್ರಕಾರ ಸಮಿತಿ ವರದಿ ಸಂಸತ್ತಿನಲ್ಲಿ ಪರಿಗಣನೆಗೆ ಬರುತ್ತದೆ. ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅವರ ಮೂಲ ಹೈಕೋರ್ಟ್‌ ಆದ ಅಲಾಹಾಬಾದ್‌ ಹೈಕೋರ್ಟ್‌ಗೆ ವರ್ಗಾಯಿಸಲಾಗಿದ್ದು, ಮುಂದಿನ ಕ್ರಮದ ನಿರೀಕ್ಷೆಯಲ್ಲಿ ಅವರ ನ್ಯಾಯಾಂಗ ಕಾರ್ಯಗಳನ್ನು ತಡೆಹಿಡಿಯಲಾಗಿದೆ.

Kannada Bar & Bench
kannada.barandbench.com