ವಾಗ್ದಂಡನೆ ಪ್ರಕ್ರಿಯೆ ಪ್ರಶ್ನಿಸಿದ್ದ ನ್ಯಾ. ಯಶವಂತ್ ವರ್ಮಾ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಸ್‌ ಪಿ ಶರ್ಮಾ ಅವರಿದ್ದ ಪೀಠ ಆದೇಶ ನೀಡಿತು.
Justice Yashwant Varma and Supreme Court
Justice Yashwant Varma and Supreme Court
Published on

ದೆಹಲಿ ಹೈಕೋರ್ಟ್‌ನಲ್ಲಿ ತಾವು ಕಾರ್ಯನಿರ್ವಹಿಸುತ್ತಿದ್ದಾಗ ತಮ್ಮ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ರಾಶಿ ಪತ್ತೆಯಾದ ಪ್ರಕರಣದ ತನಿಖೆಗಾಗಿ ತ್ರಿಸದಸ್ಯ ಸಮಿತಿ ರಚಿಸಿ ಲೋಕಸಭಾ ಸ್ಪೀಕರ್ ತೆಗೆದುಕೊಂಡ ನಿರ್ಧಾರ ರದ್ದುಪಡಿಸಬೇಕೆಂದು ಕೋರಿ ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.

ಈ ಸಂಬಂಧ ಜನವರಿ 8ರಂದು ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಈ ಆದೇಶ ನೀಡಿದೆ.

Also Read
[ನ್ಯಾ. ವರ್ಮಾ ವಾಗ್ದಂಡನೆ ವಿಚಾರ] ಪ್ರಕ್ರಿಯಾ ಲೋಪದತ್ತ ಬೆರಳು ಮಾಡಿದ ಸುಪ್ರೀಂ: ಲೋಕಸಭೆ, ರಾಜ್ಯಸಭೆಗೆ ನೋಟಿಸ್

ಆರೋಪದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಅಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು ನ್ಯಾ. ವರ್ಮಾ ರಾಜೀನಾಮೆ ನೀಡಬೇಕು ಇಲ್ಲವೇ ವಾಗ್ದಂಡನೆ ಎದುರಿಸಬೇಕು ಎಂದು ಶಿಫಾರಸ್ಸು ಮಾಡಿದ್ದರು. ಆದರೆ ನ್ಯಾಯಮೂರ್ತಿ ವರ್ಮಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿದ್ದರು.

ಕಳೆದ ಆಗಸ್ಟ್‌ನಲ್ಲಿ ಸಂಸತ್‌ ಸದಸ್ಯರು ವಾಗ್ದಂಡನೆ ಪ್ರಸ್ತಾವನೆ ಅಂಗೀಕರಿಸಿದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಅವರು ಹೈಕೋರ್ಟ್ ನ್ಯಾಯಾಧೀಶರ ಹುದ್ದೆಯಿಂದ ನ್ಯಾ. ವರ್ಮಾ ಅವರನ್ನು ವಜಾಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದರು. ನ್ಯಾಯಾಧೀಶರ ವಿಚಾರಣೆ ಕಾಯಿದೆಯಡಿ ಘಟನೆಗೆ ಸಂಬಂಧಿಸಿದ ತನಿಖೆ ನಡೆಸಲು ಸ್ಪೀಕರ್‌ ಅವರು ತ್ರಿಸದಸ್ಯ ಸಮಿತಿ ರಚಿಸಿದ್ದರು. ಇದನ್ನು ಪ್ರಶ್ನಿಸಿ ನ್ಯಾ. ವರ್ಮಾ ಸುಪ್ರೀಂ ಕೋರ್ಟ್‌ ಮೊರೆ ಹೋಗದಿದ್ದರು.

ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ತಮ್ಮ ವಾಗ್ದಂಡನೆಗೆ ನೋಟಿಸ್‌ಗಳನ್ನು ನೀಡಲಾಗಿದ್ದರೂ, ರಾಜ್ಯಸಭೆಯ ಸಭಾಪತಿಗಳು ಆ ಗೊತ್ತುವಳಿಯನ್ನು ಪರಿಗಣಿಸುವುದಕ್ಕೂ ಮುನ್ನವೇ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಏಕಪಕ್ಷೀಯವಾಗಿ ಸಮಿತಿ ರಚಿಸಿರುವುದನ್ನು ವರ್ಮಾ ಪ್ರಕ್ರಿಯಾ ಲೋಪವೆಂದು ಹೇಳಿ ಪ್ರಶ್ನಿಸಿದ್ದರು.

“21.07.2025ರಂದು ಲೋಕಸಭೆಯಲ್ಲಿ ಸಲ್ಲಿಸಲಾದ ಗೊತ್ತುವಳಿಯನ್ನು ಅಂಗೀಕರಿಸಿದ ಬಳಿಕ, ಅದೇ ದಿನ ರಾಜ್ಯಸಭೆಯಲ್ಲಿಯೂ ಪ್ರತ್ಯೇಕ ಗೊತ್ತುವಳಿ ಸಲ್ಲಿಸಲಾಗಿದ್ದು, ಅದು ಇನ್ನೂ ಅಂಗೀಕಾರವಾಗದಿದ್ದರೂ, 12.08.2025ರಂದು ಲೋಕಸಭಾ ಸ್ಪೀಕರ್ ಏಕಪಕ್ಷೀಯವಾಗಿ ಸಮಿತಿ ರಚಿಸಿದ್ದಾರೆ. ಇದು ನ್ಯಾಯಮೂರ್ತಿಗಳ (ವಿಚಾರಣಾ) ಕಾಯಿದೆ- 1968ರ ಸೆಕ್ಷನ್ 3ರ  ಸ್ಪಷ್ಟ ಉಲ್ಲಂಘನೆ” ಎಂದು ಅವರು ವಿವರಿಸಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ಲೋಕಸಭೆ ಮಹಾ ಕಾರ್ಯದರ್ಶಿ ಅವರು ರಾಜ್ಯಸಭೆ  ವಾಗ್ದಂಡನೆ ಗೊತ್ತುವಳಿ ಅಂಗೀಕರಿಸಿಲ್ಲವಾದ್ದರಿಂದ ಆ ಸೆಕ್ಷನ್‌ ಅನ್ವಯಿಸುವುದಿಲ್ಲ ಎಂದು ವಾದಿಸಿದರು. ಭಾರತದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷರಾಗಿದ್ದ ಜಗದೀಪ್ ಧನಕರ್ ಜುಲೈನಲ್ಲಿ ರಾಜೀನಾಮೆ ನೀಡಿದ ನಂತರ, ಆಗಸ್ಟ್ 11, 2025ರಂದು ರಾಜ್ಯಸಭೆಯ ಉಪಾಧ್ಯಕ್ಷರು ಈ ವಾಗ್ದಂಡನೆ ಗೊತ್ತುವಳಿ ತಿರಸ್ಕರಿಸಿದ್ದಾರೆ ಎಂದು ಅವರು ತಿಳಿಸಿದರು. 

ಆದ್ದರಿಂದ, ಲೋಕಸಭಾ ಸ್ಪೀಕರ್ ಸ್ವತಂತ್ರವಾಗಿ ವಾಗ್ದಂಡನೆ ಪ್ರಕ್ರಿಯೆಯನ್ನು ಮುಂದುವರಿಸಲು ಸಂಪೂರ್ಣ ಅಧಿಕಾರ ಹೊಂದಿದ್ದಾರೆ ಎಂದು ಲೋಕಸಭೆ ಮಹಾ ಕಾರ್ಯದರ್ಶಿ ವಾದಿಸಿದರು.

Also Read
ನ್ಯಾ. ವರ್ಮಾಗೆ ವಾಗ್ದಂಡನೆ: ರಾಜ್ಯಸಭೆ ನಿರ್ಣಯ ತಿರಸ್ಕರಿಸಿದರೂ ಲೋಕಸಭೆ ಮುಂದುವರೆಸಲಾಗದೆ? ಸುಪ್ರೀಂ ಪ್ರಶ್ನೆ

ವಿಚಾರಣೆಯ ವೇಳೆ, ರಾಜ್ಯಸಭಾ ಉಪಾಧ್ಯಕ್ಷರು ಅದೇ ದಿನ ವಾಗ್ದಂಡನೆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರಿಂದ ಮಾತ್ರ ಲೋಕಸಭಾ ಸ್ಪೀಕರ್ ನ್ಯಾಯಮೂರ್ತಿ ವರ್ಮಾ ವಿರುದ್ಧದ ಪ್ರಕ್ರಿಯೆಯನ್ನು ಮುಂದುವರಿಸಲು ತಡೆಯುವ ಯಾವುದೇ ಕಾನೂನು ಇದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತ್ತು.

ಇಂತಹ ಸಂದರ್ಭಗಳಲ್ಲಿ ವಾಗ್ದಂಡನೆ ಪ್ರಸ್ತಾವನೆ ವಿಫಲವಾಗುತ್ತದೆ ಎಂಬ ಅಭಿಪ್ರಾಯದ ಬಗ್ಗೆ ನ್ಯಾಯಾಲಯ ಪ್ರಾಥಮಿಕವಾಗಿ ಅಸಮ್ಮತಿಯನ್ನು ವ್ಯಕ್ತಪಡಿಸಿತು.

ನ್ಯಾಯಮೂರ್ತಿ ವರ್ಮಾ ಪರವಾಗಿ ಹಿರಿಯ ವಕೀಲರಾದ ಸಿದ್ಧಾರ್ಥ್ ಲೂತ್ರಾ, ಮುಕುಲ್ ರೋಹಟ್ಗಿ ಹಾಗೂ ಜಯಂತ್ ಮೆಹ್ತಾ ಹಾಜರಿದ್ದರು. ಲೋಕಸಭೆ ಮತ್ತು ರಾಜ್ಯಸಭೆಯ ಅಧಿಕಾರಿಗಳನ್ನು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com