ಐಪಿಎಸ್‌ ಅಧಿಕಾರಿ ಚಂದ್ರಶೇಖರ್‌ಗೆ ಎಚ್‌ಡಿಕೆ ಬೆದರಿಕೆ: ಆದೇಶದಲ್ಲಿ ಮಾರ್ಪಾಡು ಕೋರಿ ಹೈಕೋರ್ಟ್‌ ಎಡತಾಕಿದ ಲೋಕಾಯುಕ್ತ

ಸಂಜಯನಗರ ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಎಚ್‌ಡಿಕೆ ಪರವಾಗಿ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶವು ಕರ್ನಾಟಕ ಲೋಕಾಯುಕ್ತದ ಎಸ್‌ಐಟಿ ದಾಖಲಿಸಿರುವ ಮತ್ತೊಂದು ಪ್ರಕರಣಕ್ಕೆ ಅಡ್ಡಿಯಾಗಿದೆ ಎಂದು ಆಕ್ಷೇಪಿಸಿದ ವಕೀಲ ಅರಬಟ್ಟಿ.
IPS officer M Chandrashekar , H D Kumaraswamy & Karnataka HC
IPS officer M Chandrashekar , H D Kumaraswamy & Karnataka HC
Published on

ಕರ್ನಾಟಕ ಲೋಕಾಯುಕ್ತ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ವಿರುದ್ದ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಮಾಡಿರುವ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಕೋರಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಬೆದರಿಕೆ ಪ್ರಕರಣ ರದ್ದತಿ ಕೋರಿ ಎಚ್‌ ಡಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್‌ ಹಾಗೂ ಜೆಡಿಎಸ್‌ ಮುಖಂಡ ಸುರೇಶ್‌ ಬಾಬು ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು.

Justice Pradeep Singh Yerur
Justice Pradeep Singh Yerur

ಈ ವೇಳೆ ವಿಚಾರಣೆಗೆ ಹಾಜರಾಗಿದ್ದ ಲೋಕಾಯುಕ್ತ ಪರ ವಕೀಲ ವೆಂಕಟೇಶ್‌ ಅರಬಟ್ಟಿ ಅವರು “ಸಂಜಯನಗರ ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಎಚ್‌ ಡಿ ಕುಮಾರಸ್ವಾಮಿ ಪರವಾಗಿ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶವು ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ದಳ ದಾಖಲಿಸಿರುವ ಮತ್ತೊಂದು ಪ್ರಕರಣಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಆ ಪ್ರಕರಣಕ್ಕೆ ಸಮಸ್ಯೆಯಾಗದಂತೆ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಮಾಡಬೇಕಿದೆ. ಏಕೆಂದರೆ, ಇಲ್ಲಿ ಲೋಕಾಯುಕ್ತ ಎಸ್‌ಐಟಿಯ (2014ರಲ್ಲಿ ದಾಖಲಾಗಿರುವ ಜಂತಕಲ್‌ ಗಣಿಗಾರಿಕೆ ಕುರಿತಾದ ಪ್ರಕರಣ) ಎಫ್‌ಐಆರ್‌ ಅನ್ನು ಪ್ರಶ್ನಿಸಿಲಾಗಿಲ್ಲ” ಎಂದರು.

“ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಬೆದರಿಕೆ ಪ್ರಕರಣ ರದ್ದತಿ ಕೋರಿರುವ ಹಾಲಿ ಪ್ರಕರಣದಲ್ಲಿ ಲೋಕಾಯುಕ್ತ ಎಸ್‌ಐಟಿ ಪಕ್ಷಕಾರರಾಗಿಲ್ಲ. ಆದರೆ, ಹಾಲಿ ಪ್ರಕರಣದಲ್ಲಿನ ಮಧ್ಯಂತರ ಆದೇಶವು ಎಸ್‌ಐಟಿ ಪ್ರಕರಣಕ್ಕೆ ಅಡ್ಡಿಯಾಗಿರುವುದರಿಂದ ನ್ಯಾಯಾಲಯದ ಮಧ್ಯಪ್ರವೇಶ ಕೋರುತ್ತಿದ್ದೇವೆ. ನಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ಮಾಡಲಾಗಿದೆ” ಎಂದರು.

ಈ ಹಂತದಲ್ಲಿ ಕುಮಾರಸ್ವಾಮಿ ಪರ ವಕೀಲರು ಕಾಲಾವಕಾಶ ಕೋರಿದ್ದರಿಂದ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

2024ರ ನವೆಂಬರ್‌ 6ರಂದು ಲೋಕಾಯುಕ್ತ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ದಾಖಲಾಗಿರುವ ಎಫ್‌ಐಆರ್‌ ಸಂಬಂಧ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್‌ ಮತ್ತು ಜೆಡಿಎಸ್‌ ಶಾಸಕ ಸುರೇಶ್‌ ಬಾಬು ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿತ್ತು. ಅಲ್ಲದೇ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ದಶಕದ ಹಿಂದೆ ಕುಮಾರಸ್ವಾಮಿ ಅವರಿಗೆ ಮಂಜೂರಾಗಿರುವ ನಿರೀಕ್ಷಣಾ ಜಾಮೀನು ರದ್ದತಿಯ ವಿಚಾರದಲ್ಲೂ ಹಸ್ತಕ್ಷೇಪ ಮಾಡಬಾರದು. ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರವು ಬಲವಂತದ ಕ್ರಮಕೈಗೊಂಡರೆ ಅರ್ಜಿದಾರರು ನ್ಯಾಯಾಲಯದ ಮುಂದೆ ಬರುವ ಸ್ವಾತಂತ್ರ್ಯ ಕಲ್ಪಿಸಲಾಗಿದೆ ಎಂದೂ ನಿರ್ದೇಶಿಸಿತ್ತು.

ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಮಾಧ್ಯಮಗೋಷ್ಠಿಯಲ್ಲಿ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡುವುದರ ಜೊತೆಗೆ ಬೆದರಿಕೆ ಹಾಕಲಾಗಿದೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮತ್ತು ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥರಾದ ಎಂ ಚಂದ್ರಶೇಖರ್‌ ದೂರು ಆಧರಿಸಿ ಬೆಂಗಳೂರಿನ ಸಂಜಯ್‌ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಆಧರಿಸಿ ಬೆಂಗಳೂರಿನ ಸಂಜಯ್‌ ನಗರ ಠಾಣಾಧಿಕಾರಿಯು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ನಿಖಿಲ್‌ ಮತ್ತು ಸುರೇಶ್‌ ಬಾಬು ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 224 (ಸರ್ಕಾರಿ ಅಧಿಕಾರಿಗೆ ಬೆದರಿಕೆ) ಅಡಿ ಪ್ರಕರಣ ದಾಖಲಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ?: ಆಂಧ್ರಪ್ರದೇಶ ಮೂಲದ ಜಂತಕಲ್‌ ಮೈನಿಂಗ್‌ ಕಂಪನಿಯ ಸಹವರ್ತಿ ಸಂಸ್ಥೆಯಾಗಿರುವ ಶ್ರೀ ಸಾಯಿ ವೆಂಕಟೇಶ್ವರ್‌ ಮಿನರಲ್ಸ್‌ ಕಂಪನಿಗೆ ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿ 550 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಲೀಸ್‌ ನೀಡಲು ಪರವಾನಗಿಗೆ ಅನುಮೋದನೆ ಕಡತಕ್ಕೆ ಸಹಿ ಹಾಕಿದ್ದರು. 2007ರ ಅಕ್ಟೋಬರ್‌ 5ರಂದು ಸಹಿ ಹಾಕಲಾಗಿತ್ತು. ಈ ವೇಳೆ ಸಲ್ಲಿಕೆಯಾಗಿದ್ದ 29 ಅರ್ಜಿಗಳ ಪೈಕಿ ಕೊನೆಯದಾಗಿ ಸಲ್ಲಿಕೆಯಾಗಿದ್ದ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಅರ್ಜಿಯನ್ನು ಸರ್ಕಾರ ನಿಯಮಾವಳಿ ಉಲ್ಲಂಘಿಸಿ ಅನುಮೋದಿಸಿ ಮಂಜೂರು ಮಾಡಲಾಗಿತ್ತು ಎಂಬುದು ಕುಮಾರಸ್ವಾಮಿ ಅವರ ಮೇಲಿರುವ ಆರೋಪವಾಗಿದೆ.

ಈ ಪ್ರಕರಣದಲ್ಲಿ ಹೆಚ್ಚುವರಿ ಸಾಕ್ಷ್ಯಾಧಾರಗಳು ದೊರೆತಿದ್ದರಿಂದ ಕಾನೂನು ಕ್ರಮಕೈಗೊಳ್ಳಲು ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಎಸ್‌ಐಟಿ ಮುಖ್ಯಸ್ಥರಾಗಿರುವ ಎಂ ಚಂದ್ರಶೇಖರ್‌ ಮನವಿ ಮಾಡಿದ್ದರು.

Also Read
ಎಚ್‌ಡಿಕೆ, ನಿಖಿಲ್‌ ವಿರುದ್ಧ ಬಲವಂತದ ಕ್ರಮವಿಲ್ಲ ಎಂದ ಸರ್ಕಾರ; ನಿರೀಕ್ಷಣಾ ಜಾಮೀನು ರದ್ದತಿಗೆ ಹೈಕೋರ್ಟ್‌ ನಿರ್ಬಂಧ

ಇದರಿಂದ ಕೆರಳಿದ ಕುಮಾರಸ್ವಾಮಿ ಅವರು ಸೆಪ್ಟೆಂಬರ್‌ 28 ಮತ್ತು 29ರಂದು ಮಾಧ್ಯಮಗೋಷ್ಠಿ ನಡೆಸಿ ತನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪ ಮಾಡಿ, ಬೆದರಿಕೆ ಹಾಕಿದ್ದಾರೆ. ಕರ್ನಾಟಕ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿದ್ದು, ತಮ್ಮ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿ, ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ತಾನು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ನಕಲಿ ವೈದ್ಯಕೀಯ ದಾಖಲೆ ಪಡೆದು ಕರ್ನಾಟಕ ಕೇಡರ್‌ಗೆ ಸೇರ್ಪಡೆಯಾಗಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೇ, ತಾನು ಲಂಚ ಸ್ವೀಕರಿಸುತ್ತಿರುವುದಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಚಂದ್ರಶೇಖರ್‌ ದೂರಿನಲ್ಲಿ ತಿಳಿಸಿದ್ದರು.

ಸೆಪ್ಟೆಂಬರ್‌ 29ರಂದು ನಿಖಿಲ್‌ ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾಧ್ಯಮ ಗೋಷ್ಠಿಯಲ್ಲಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆನಂತರ ಜೆಡಿಎಸ್‌ ಶಾಸಕ ಸುರೇಶ್‌ ಬಾಬು ಅವರು ತನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಕ್ರಮಕ್ಕೆ ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್‌ ಅವರ ದೂರಿನಲ್ಲಿ ವಿವರಿಸಿದ್ದರು.

Kannada Bar & Bench
kannada.barandbench.com