ನೈಸ್‌ ʼಘನತೆಗೆ ಚ್ಯುತಿʼ: ರೂ. 2 ಕೋಟಿ ಪರಿಹಾರ ಪಾವತಿಸಲು ದೇವೇಗೌಡರಿಗೆ ಆದೇಶಿಸಿದ ನ್ಯಾಯಾಲಯ

ನೈಸ್‌ ವಿರುದ್ಧ ಮುಂದೆಂದೂ ಯಾವುದೇ ಮಾನಹಾನಿಕಾರ ಹೇಳಿಕೆ ನೀಡಿದಂತೆ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರಿಗೆ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಮಲ್ಲನಗೌಡರು ನಿರ್ಬಂಧ ವಿಧಿಸಿದ್ದಾರೆ.
ನೈಸ್‌ ʼಘನತೆಗೆ ಚ್ಯುತಿʼ: ರೂ. 2 ಕೋಟಿ ಪರಿಹಾರ ಪಾವತಿಸಲು ದೇವೇಗೌಡರಿಗೆ ಆದೇಶಿಸಿದ ನ್ಯಾಯಾಲಯ
H D Devegowda and NICE

ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಘನತೆಗೆ ಚ್ಯುತಿ ಉಂಟಾಗುವಂತಹ ಆರೋಪ ಮಾಡಿರುವುದರಿಂದ ಸಂಸ್ಥೆಗೆ ರೂ. 2 ಕೋಟಿ ಪಾವತಿಸುವಂತೆ ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್‌ ಡಿ ದೇವೇಗೌಡ ಅವರಿಗೆ ಬೆಂಗಳೂರಿನ ನಗರ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

2011ರಲ್ಲಿ ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ದೇವೇಗೌಡರು ನೀಡಿದ್ದ ಹೇಳಿಕೆಗಳನ್ನು ಆಧರಿಸಿ ನೈಸ್‌ ಸಂಸ್ಥೆಯು ದೇವೇಗೌಡರ ವಿರುದ್ಧ ಮೊಕದ್ದಮೆ ಹೂಡಿತ್ತು. “ದೇವೇಗೌಡರ ಹೇಳಿಕೆಯಿಂದ ಸಂಸ್ಥೆಯ ಘನತೆಗೆ ಚ್ಯುತಿಯಾಗಿದ್ದು, ಅದಕ್ಕಾಗಿ ರೂ. 10 ಕೋಟಿ ಪರಿಹಾರ ಕೊಡಿಸಬೇಕು” ಎಂದು ಮನವಿಯಲ್ಲಿ ನೈಸ್‌ ಕೋರಿತ್ತು.

“ಪ್ರತಿವಾದಿಯಾದ ದೇವೇಗೌಡರು ಆಕ್ಷೇಪಾರ್ಹವಾದ ಸಂದರ್ಶನದಲ್ಲಿ ಫಿರ್ಯಾದುದಾರ ಸಂಸ್ಥೆ ನೈಸ್‌ ವಿರುದ್ಧ ಮಾಡಿದ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಯಾವುದೇ ತೆರನಾದ ದಾಖಲೆಗಳನ್ನು ನೀಡಿಲ್ಲ” ಎಂದು ನ್ಯಾಯಾಧೀಶ ಮಲ್ಲನಗೌಡ ಹೇಳಿದ್ದಾರೆ.

Also Read
ಬಾಲಿವುಡ್‌ ನಟಿ ಜೂಹಿ ಚಾವ್ಲಾರ 5ಜಿ ತರಂಗಾಂತರ ವಿರೋಧಿಸಿದ್ದ ಅರ್ಜಿ ವಜಾ- ₹20 ಲಕ್ಷ ದಂಡ ವಿಧಿಸಿದ ದೆಹಲಿ ಹೈಕೋರ್ಟ್‌

ನೈಸ್‌ ಸಂಸ್ಥೆ ಮತ್ತು ಅದು ಕೈಗೊಂಡಿದ್ದ ಕಾಮಗಾರಿಯ ವಿರುದ್ಧ ದೇವೇಗೌಡರು ಆರೋಪ ಮಾಡಿದ್ದರು. ಆದರೆ, ಕರ್ನಾಟಕ ಹೈಕೋರ್ಟ್‌ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಹಲವು ಸಂದರ್ಭಗಳಲ್ಲಿ ಯೋಜನೆಯನ್ನು ಎತ್ತಿ ಹಿಡಿದಿವೆ ಎಂದು ನ್ಯಾಯಾಲಯ ಹೇಳಿದೆ. “ದೇವೇಗೌಡರು ಮಾಡಿರುವ ಮಾನಹಾನಿಕಾರಕ ಆರೋಪಗಳನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರೆ ಸಾರ್ವಜನಿಕರ ಹಿತಾಸಕ್ತಿಯಿಂದ ಕೈಗೊಳ್ಳಲಾಗಿರುವ ಇಂಥ ಮಹತ್ವದ ಯೋಜನೆ ಜಾರಿಗೊಳಿಸಲು ತಡವಾಗಲಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಹೀಗಾಗಿ, ಮುಂದೆಂದೂ ನೈಸ್‌ ವಿರುದ್ಧ ಮಾಧ್ಯಮಗಳಲ್ಲಿ ಯಾವುದೇ ತೆರನಾದ ಹೇಳಿಕೆಗಳನ್ನು ನೀಡಬಾರದು ಎಂದು ದೇವೇಗೌಡರಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.

ಆದೇಶ ಓದಲು ಇಲ್ಲಿ ಕ್ಲಿಕ್ಕಿಸಿ

Attachment
PDF
HD Devegowda Case NICE.pdf
Preview

Related Stories

No stories found.
Kannada Bar & Bench
kannada.barandbench.com