ಲಾಟರಿಗಳ ಮೇಲೆ ತೆರಿಗೆ ವಿಧಿಸುವ ಕರ್ನಾಟಕ ಮತ್ತು ಕೇರಳದ ಕಾನೂನುಗಳನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಕೇಂದ್ರ ಪಟ್ಟಿ ಅಡಿ ಲಾಟರಿ ಬರುತ್ತದೆ ಎಂಬ ಕಾರಣಕ್ಕೆ ರಾಜ್ಯಪಟ್ಟಿಯ ಪ್ರಕಾರ ರಾಜ್ಯಗಳು ತೆರಿಗೆ ವಿಧಿಸುವುದನ್ನು ತಡೆಯಲಾಗದು. ಏಕೆಂದರೆ ಕೇಂದ್ರದ ಪಟ್ಟಿಯ ನಮೂದು ಇರುವುದು ಲಾಟರಿ ನಿಯಂತ್ರಣಕ್ಕೆ ವಿನಾ ತೆರಿಗೆ ವಿಧಿಸಲು ಅಲ್ಲ ಎಂದ ಪೀಠ.
Justice MR Shah, Justice BV Nagarathna and Supreme Court

Justice MR Shah, Justice BV Nagarathna and Supreme Court


Published on

ಲಾಟರಿ ಎಂಬುದು ಜೂಜಿನ ರೂಪವಾಗಿದ್ದು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಲಾಟರಿಗಳ ಮೇಲೆ ತೆರಿಗೆ ವಿಧಿಸುವ ಕಾನೂನು ರೂಪಿಸಲು ರಾಜ್ಯ ಶಾಸಕಾಂಗಗಳು ಸಂವಿಧಾನದ ರಾಜ್ಯ ಪಟ್ಟಿ II ರ ನಮೂದು 62ರ ಅಡಿ ಅಧಿಕಾರ ಹೊಂದಿವೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಸ್ಪಷ್ಟಪಡಿಸಿದೆ [ಕರ್ನಾಟಕ ಸರ್ಕಾರ ಮತ್ತಿತರರು ಹಾಗೂ ಮೇಘಾಲಯ ಸರ್ಕಾರ ಇನ್ನಿತರರ ನಡುವಣ ಪ್ರಕರಣ]. ಆ ಮೂಲಕ ಲಾಟರಿಗಳ ಮೇಲೆ ತೆರಿಗೆ ವಿಧಿಸಲು ಕರ್ನಾಟಕ ಹಾಗೂ ಕೇರಳ ಸರ್ಕಾರಗಳು ರೂಪಿಸಿದ್ದ ಕಾಯಿದೆಗಳನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

ಲಾಟರಿ ಜೂಜಾಟದ ಒಂದು ವಿಧವಾಗಿದ್ದು ಸಂವಿಧಾನ ಪಟ್ಟಿ II ರಲ್ಲಿ ಪ್ರಸ್ತಾಪಿಸಲಾಗಿರುವ ʼಪಂಥ ಮತ್ತು ಜೂಜಿನʼ ವ್ಯಾಪ್ತಿಗೆ ಲಾಟರಿ ಬರುತ್ತದೆ ಎಂದು ನ್ಯಾಯಮೂರ್ತಿಗಳಾದ ಎಂ.ಆರ್‌ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಹೇಳಿದೆ.

ಕೇಂದ್ರ ಪಟ್ಟಿ ನಮೂದು 40ರ ಅಡಿ ಲಾಟರಿ ಬರುತ್ತದೆ ಎಂಬ ಕಾರಣಕ್ಕೆ ರಾಜ್ಯಪಟ್ಟಿಯ ನಮೂದು 62ರ ಪ್ರಕಾರ ತೆರಿಗೆ ವಿಧಿಸುವುದರಿಂದ ರಾಜ್ಯಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಏಕೆಂದರೆ ಕೇಂದ್ರದ ಪಟ್ಟಿಯಲ್ಲಿರುವ ನಮೂದು ಇರುವುದು ಲಾಟರಿ ನಿಯಂತ್ರಣಕ್ಕೆ ವಿನಾ ತೆರಿಗೆ ವಿಧಿಸಲು ಅಲ್ಲ ಎಂದು ಅದು ವಿವರಿಸಿದೆ.

Also Read
ಜೂಜಿನ ಕುರಿತಾದ ಕಾನೂನು ಆಯೋಗದ ವರದಿಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಮದ್ರಾಸ್‌ ಹೈಕೋರ್ಟ್‌

ಕೇಂದ್ರ, ಇತರೆ ರಾಜ್ಯ ಸರ್ಕಾರಗಳು ಹಾಗೂ ಖಾಸಗಿಯವರು ನಡೆಸುವ ಲಾಟರಿಗಳಿಗೆ ತೆರಿಗೆ ವಿಧಿಸಲು ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಕಾಯಿದೆ ಜಾರಿಗೆ ತಂದಿದ್ದವು. ಈ ಕಾಯಿದೆಗಳನ್ನು ಮೇಘಾಲಯ ಮತ್ತು ನಾಗಾಲ್ಯಾಂಡ್‌ ಸರ್ಕಾರಗಳು ಕರ್ನಾಟಕ ಮತ್ತು ಕೇರಳ ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಿದ್ದವು. ಕಾಯಿದೆಗಳ ವಿರುದ್ಧವಾಗಿ ಎರಡೂ ರಾಜ್ಯಗಳ ಹೈಕೋರ್ಟ್‌ಗಳು ತೀರ್ಪು ನೀಡಿದ್ದವು. ಇದನ್ನು ಪ್ರಶ್ನಿಸಿ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕರ್ನಾಟಕ ಲಾಟರಿಗಳ ಮೇಲಿನ ತೆರಿಗೆ ಕಾಯಿದೆ, 2004 ಮತ್ತು ಕೇರಳ ಕಾಗದದ ಲಾಟರಿಗಳ ಮೇಲೆ ತೆರಿಗೆ ಕಾಯಿದೆ 2005ನ್ನು ಎತ್ತಿ ಹಿಡಿಯಿತು.

ಸುಪ್ರೀಂಕೋರ್ಟ್‌ ಅವಲೋಕನದ ಪ್ರಮುಖಾಂಶಗಳು

  • ಲಾಟರಿ ಜೂಜಿನ ಒಂದು ರೂಪ.

  • ಕೇಂದ್ರ ಅಥವಾ ಇತರ ರಾಜ್ಯ ಸರ್ಕಾರ ಅಥವಾ ಖಾಸಗಿಯವರು ನಡೆಸುವ ಲಾಟರಿಗಳ ಮೇಲೆ ರಾಜ್ಯ ಸರ್ಕಾರ ತೆರಿಗೆಗಳನ್ನು ವಿಧಿಸಬಹುದು.

  • ಕರ್ನಾಟಕ ಮತ್ತು ಕೇರಳ ರಾಜ್ಯಗಳು ಲಾಟರಿಗಳ ಮೇಲೆ ತೆರಿಗೆ ವಿಧಿಸುವುದು ಸಿಂಧುವೂ ಸಾಂವಿಧಾನಿಕವೂ ಆಗಿದೆ.

  • ಕರ್ನಾಟಕ ಮತ್ತು ಕೇರಳ ಸರ್ಕಾರಗಳು ರೂಪಿಸಿದ್ದ ಕಾಯಿದೆಯನ್ನು ಅಮಾನ್ಯ ಮಾಡಿದ್ದ ಎರಡೂ ರಾಜ್ಯ ಹೈಕೋರ್ಟ್‌ಗಳ ತೀರ್ಪನ್ನು ರದ್ದುಗೊಳಿಸಲಾಗಿದೆ.

Also Read
ಆನ್‌ಲೈನ್‌ ಗೇಮಿಂಗ್: ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆಯ ಆಕ್ಷೇಪಾರ್ಹ ನಿಬಂಧನೆಗಳನ್ನು ರದ್ದುಗೊಳಿಸಿದ ಹೈಕೋರ್ಟ್‌

ಕರ್ನಾಟಕ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎನ್‌ ವೆಂಕಟರಾಮನ್‌, ಕೇರಳ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಪಲ್ಲವ್‌ ಸಿಸೋಡಿಯಾ, ನಾಗಾಲ್ಯಾಂಡ್‌ ಪರವಾಗಿ ಸಿ ಆರ್ಯಮ ಸುಂದರಂ, ಮೇಘಾಲಯ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿಗಳಾದ ಅರವಿಂದ್‌ ದಾತಾರ್‌ ಮತ್ತು ಅಮಿತ್‌ ಕುಮಾರ್‌, ಸಿಕ್ಕಿಂ ಸರ್ಕಾರದ ಪರವಾಗಿ ಎಸ್‌ ಕೆ ಬಗೇರಿಯಾ ವಾದ ಮಂಡಿಸಿದ್ದರು.

Kannada Bar & Bench
kannada.barandbench.com