
Justice Malasri Nandi, Gauhati High Court
ಮೋಟಾರು ಅಪಘಾತ ಪರಿಹಾರ ಪ್ರಕರಣದ ಕುರಿತು ನಿರ್ಧಾರ ಕೈಗೊಳ್ಳುವಾಗ ಗೃಹಿಣಿಯನ್ನು ಕುಶಲ ಕೆಲಸಗಾರ್ತಿ ಎಂದು ಕರೆಯುವುದು ಮನೆಯಲ್ಲಿ ಆಕೆ ನಿರ್ವಹಿಸುವ ಪಾತ್ರಕ್ಕೆ ನ್ಯಾಯ ಒದಗಿಸುವುದಿಲ್ಲ ಎಂದು ಗುವಾಹಟಿ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ಮೃಣಾಲ್ ಕಾಂತಿ ದೇಬನಾಥ್ ಮತ್ತಿತರರು ಹಾಗೂ ಯುನೈಟೆಡ್ ಇಂಡಿಯಾ ಅಶ್ಯೂರೆನ್ಸ್ ಕಂ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ಮೋಟಾರು ಅಪಘಾತ ಹಕ್ಕು ನ್ಯಾಯಮಂಡಳಿಯ (ಎಂಎಸಿಟಿ) ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಮಾಲಾಶ್ರೀ ನಂದಿ, ಗೃಹಿಣಿಯ ಪಾತ್ರ ಕುಶಲ ಕೆಲಸಗಾರ್ತಿಗಿಂತಲೂ ಹೆಚ್ಚಿದ್ದು ಅಂತಹ ವ್ಯಕ್ತಿ ಮರಣ ಹೊಂದಿದಾಗ ನೀಡಬೇಕಾದ ಪರಿಹಾರದ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದರು.
ಗೃಹಿಣಿಯನ್ನು ಕುಶಲ ಕೆಲಸಗಾರ್ತಿ ಎಂದಷ್ಟೇ ಹಣೆಪಟ್ಟಿ ಹಚ್ಚುವುದರಿಂದ ಆಕೆ ಮನೆಯನ್ನು ನೋಡಿಕೊಳ್ಳುವ ಬಹುಮುಖ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದಂತಾಗುವುದಿಲ್ಲ ಎಂದ ನ್ಯಾಯಾಲಯ ಈಗಿನ ಕಾಲಮಾನಕ್ಕೆ ತಕ್ಕಂತೆ ಪ್ರಸ್ತುತ ಪ್ರಕರಣದಲ್ಲಿ ಯಾವುದೇ ಕಡಿತ ಮಾಡದೆ ತಿಂಗಳಿಗೆ ₹ 5,000 ಮೊತ್ತದಷ್ಟನ್ನು ಗೃಹಿಣಿಯು ತನ್ನ ಕುಟುಂಬಕ್ಕೆ ನೀಡುತ್ತಿದ್ದ ಕೊಡುಗೆಗೆ ಪರಿಹಾರವಾಗಿ ಅಂದಾಜು ಮಾಡುವುದು ಅಸಮಂಜಸವಾದುದೇನೂ ಅಲ್ಲ ಎಂದಿತು.
ಮೃತರ ಮೋಟಾರು ಅಪಘಾತದ ಮರಣಕ್ಕೆ ₹ 4,25,000 ಪರಿಹಾರವನ್ನು ನೀಡಿದ ಎಂಎಸಿಟಿ ಆದೇಶದ ವಿರುದ್ಧ ಮೃತರ ಅಪ್ರಾಪ್ತ ಹೆಣ್ಣುಮಕ್ಕಳು ಮತ್ತು ವಿಧವೆ ತಾಯಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ಏಕಸದಸ್ಯ ಪೀಠದಲ್ಲಿ ನಡೆಯಿತು.
ಗೃಹಿಣಿಯ ಶ್ರಮ ಪರಿಗಣಿಸಿ ಪರಿಹಾರ ಮೊತ್ತವನ್ನು ₹9,70,000ಕ್ಕೆ ಹೆಚ್ಚಿಸಿದ ನ್ಯಾಯಾಲಯ ತಾಯಿ ಮರಣ ಹೊಂದಿದಾಗ ಆಕೆಯ ಇಬ್ಬರು ಹೆಣ್ಣುಮಕ್ಕಳು ಅಪ್ರಾಪ್ತರಾಗಿದ್ದರು. ಈ ಹಿನ್ನೆಲೆಯಲ್ಲಿ ಶೇ 80ರಷ್ಟು ಪರಿಹಾರ ಮೊತ್ತವನ್ನು ಅರ್ಧಭಾಗವಾಗಿ ವಿಂಗಡಿಸಿ ಇಬ್ಬರೂ ಹೆಣ್ಣುಮಕ್ಕಳಿಗೆ ನೀಡಬೇಕು. ಮೃತರ ಪತಿಗೆ ಶೇ 20ರಷ್ಟು ಪರಿಹಾರ ಒದಗಿಸಬೇಕು. ಒಂದು ವೇಳೆ ಗಂಡ ಮರುಮದುವೆಯಾಗಿದ್ದರೆ ಶೇ 100ರಷ್ಟು ಪರಿಹಾರದ ಹಣ ಆ ಹೆಣ್ಣುಮಕ್ಕಳಿಗೇ ದೊರೆಯಬೇಕು ಎಂದು ಅದು ತೀರ್ಪು ನೀಡಿತು.