ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು: ವೈದ್ಯನಿಗೆ ಜಾಮೀನು ನಿರಾಕರಿಸಿದ ಮಧ್ಯಪ್ರದೇಶ ನ್ಯಾಯಾಲಯ

ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ 24 ಮಕ್ಕಳು ಸಾವನ್ನಪ್ಪಿದ್ದರು.
Medical Doctor
Medical Doctor
Published on

ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ಕೋಲ್ಡ್‌ರಿಫ್‌ ಕಲಬೆರಕೆ  ಕೆಮ್ಮಿನ ಸಿರಪ್‌  ಸೇವಿಸಿ  24 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಔಷಧ ಶಿಫಾರಸ್ಸು ಮಾಡಿದ್ದ ವೈದ್ಯನಿಗೆ ಮಧ್ಯಪ್ರದೇಶದ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಆರೋಗ್ಯ ವಿಜ್ಞಾನಗಳ ನಿರ್ದೇಶನಾಲಯ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಔಷಧಿ ಶಿಫಾರಸ್ಸು ಮಾಡಿದ್ದರು ಎಂಬ ಪ್ರಾಸಿಕ್ಯೂಷನ್‌ ವಾದವನ್ನು ಪರಾಸಿಯಾ ಸಿವಿಲ್ ನ್ಯಾಯಾಲಯದ  ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಗೌತಮ್ ಕುಮಾರ್ ಗುಜ್ರೆ  ಗಣನೆಗೆ ತೆಗೆದುಕೊಂಡರು.

Also Read
ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು: ನ್ಯಾಯಾಲಯ ಉಸ್ತುವಾರಿ ತನಿಖೆ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸಾವಿನ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆರೋಪಿ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿವೆ ಎಂದು ಅಕ್ಟೋಬರ್ 8 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿರುವ ನ್ಯಾಯಾಲಯ ವೈದ್ಯ ಸೋನಿ ಅವರಿಗೆ ಜಾಮೀನು ನೀಡಲು ನಿರಾಕರಿಸಿತು.

ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾ ಪ್ರೈವೇಟ್ ಲಿಮಿಟೆಡ್ ತಯಾರಿಸಿದ ಕೋಲ್ಡ್‌ರಿಫ್‌ ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಐದು ವರ್ಷಕ್ಕಿಂತಲೂ ಕಡಿಮೆ ವಯೋಮಾನದ  24 ಮಕ್ಕಳು ಸಾವನ್ನಪ್ಪಿದ್ದರು. ಪ್ರಯೋಗಾಲಯ ಪರೀಕ್ಷೆಗಳಲ್ಲಿ ಡೈಎಥಿಲೀನ್ ಗ್ಲೈಕಾಲ್ (ಡಿಇಜಿ) ಎಂಬ ನಿಷೇಧಿತ ರಾಸಾಯನಿಕದ ಅಂಶ ಇರುವುದು ಪತ್ತೆಯಾಗಿತ್ತು. ಮಧ್ಯಪ್ರದೇಶ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿಯೂ ಔಷಧದ ಪರಿಣಾಮದ ಬಗ್ಗೆ ಶಂಕೆ ವ್ಯಕ್ತವಾಗಿತ್ತು.

ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಸೋನಿ ಅವರನ್ನಷ್ಟೇ ಅಲ್ಲದೆ, ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್‌ನ ಮಾಲೀಕ ಗೋವಿಂದನ್ ರಂಗನಾಥನ್ ಅವರನ್ನು ಸಹ  ಬಂಧಿಸಲಾಗಿತ್ತು. ಘಟನೆ ದೇಶದೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದ್ದು ನಂತರ ವಿವಿಧ ರಾಜ್ಯಗಳು ಔಷಧವನ್ನು ನಿಷೇಧಿಸಿದ್ದವು.

ಆದರೆ  ಭಾರತೀಯ ವೈದ್ಯಕೀಯ ಸಂಘ (ಐಎಂಎ) ಡಾ. ಸೋನಿ ಅವರ ಬಂಧನವನ್ನು ಖಂಡಿಸಿದ್ದು, ಕಲಬೆರಕೆ ಔಷಧವನ್ನು ಮಾರುಕಟ್ಟೆಗೆ  ತಂದ ತಯಾರಕರೆ ಘಟನೆಯ ಹೊಣೆ ಹೊರಬೇಕು. ಮತ್ತೊಂದೆಡೆ ಭಾರತದ ಔಷಧ ಸುರಕ್ಷತಾ ನಿಯಮಗಳಲ್ಲಿನ ಅಂತರಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) "ತೀವ್ರ ಕಳವಳ" ವ್ಯಕ್ತಪಡಿಸಿದೆ ಎಂದು ಬಿಬಿಸಿ ವರದಿ ಮಾಡಿತ್ತು.

Also Read
ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು: ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಇತ್ತ ಸೋನಿ ಅವರ ಪರ ವಾದ ಮಂಡಿಸಿದ ವಕೀಲರು ರಾಜ್ಯ ಸರ್ಕಾರ  ಕೆಮ್ಮಿನ ಸಿರಪ್ ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳುವ ಮೊದಲು, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಅದನ್ನು ಅನುಮೋದಿಸಿ ವೈದ್ಯಕೀಯ ಬಳಕೆಗೆ ಶಿಫಾರಸು ಮಾಡಿದೆ ಎಂದು ದೂರಿದರು.

ಡಾ. ಸೋನಿ ಸರ್ಕಾರಿ ವೈದ್ಯರಾಗಿದ್ದು, ಕಳೆದ 35-40 ವರ್ಷಗಳಿಂದ ವೃತ್ತಿ ನಿರತರಾಗಿದ್ದಾರೆ.  ಅವರನ್ನು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಲಾಗಿದೆ. ಔಷಧದ ಕಲಬೆರಕೆಗೆ ಔಷಧ ಕಂಪನಿಯೇ ಸಂಪೂರ್ಣ ಹೊಣೆ ಎಂದರು. 

ಆದರೆ, ಪೊಲೀಸರು ಈ ವಾದ ನಿರಾಕರಿಸಿದ್ದು ಡಾ. ಸೋನಿ ಕೆಅವರ ಮ್ಮಿನ ಸಿರಪ್ ಶಿಫಾರಸು ಮಾಡಲು ಶೇಕಡಾ 10 ರಷ್ಟು ಲಂಚ ಪಡೆದಿದ್ದಾರೆ. ಅವರ ಖಾಸಗಿ ಕ್ಲಿನಿಕ್ ಬಳಿ ಇರುವ ಅವರ ಸಂಬಂಧಿಕರ ಒಡೆತನದ ವೈದ್ಯಕೀಯ ಅಂಗಡಿಯಲ್ಲಿ ಔಷಧಿ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ. ವಾದ ಆಲಿಸಿದ ನ್ಯಾಯಾಲಯ ಸೋನಿ ಅವರಿಗೆ ಜಾಮೀನು ನಿರಾಕರಿಸಿತು.  

Kannada Bar & Bench
kannada.barandbench.com