
ಕಲಬೆರಕೆ ಕೆಮ್ಮಿನ ಸಿರಪ್ ಸೇವನೆ ಪರಿಣಾಮ ಮೂತ್ರಪಿಂಡ ಸೋಂಕಿಗೆ ತುತ್ತಾಗಿ ಮಧ್ಯಪ್ರದೇಶದಲ್ಲಿ 14 ಮಕ್ಕಳು ಸಾವನ್ನಪ್ಪಿದ ಪ್ರಕರಣದ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ವಿಶಾಲ್ ತಿವಾರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ತಿರಸ್ಕರಿಸಿತು.
ʼನಿತ್ಯ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇಂತಹ ಕಲಬೆರಕೆ ಔಷಧ ಸರಬಾರಾಜಾಗಿರುವುದು ಇದೇ ಮೊದಲಲ್ಲ. ರಾಜ್ಯ ಸರ್ಕಾರಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಸಂಸ್ಥೆಯೊಂದು ತನಿಖೆ ನಡೆಸುವ ಅಗತ್ಯವಿದೆʼ ಎಂದು ಖುದ್ದು ಹಾಜರಿದ್ದ ತಿವಾರಿ ತಿಳಿಸಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅರ್ಜಿಗೆ ವಿರೋಧ ವ್ಯಕ್ತಪಡಿಸಿದರು. ತಿವಾರಿ ಪತ್ರಿಕಾ ವರದಿ ಓದಿ ನ್ಯಾಯಾಲಯಕ್ಕೆ ಓಡಿ ಬರುತ್ತಾರೆ. ಸಂಬಂಧಪಟ್ಟ ರಾಜ್ಯಗಳು ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಿವೆ ಎಂದು ಅವರು ಹೇಳಿದರು.
"ತಮಿಳುನಾಡು, ಮಧ್ಯಪ್ರದೇಶ ಇತ್ಯಾದಿ ರಾಜ್ಯಗಳು ಕ್ರಮ ಕೈಗೊಳ್ಳಲಿವೆ. ನಾವು ರಾಜ್ಯಗಳನ್ನು ನಂಬದೇ ಇರಲು ಸಾಧ್ಯವಿಲ್ಲ. ಖಂಡಿತ ಅವು ಕ್ರಮ ಕೈಗೊಳ್ಳುತ್ತವೆ" ಎಂದು ಎಸ್ ಜಿ ಮೆಹ್ತಾ ಹೇಳಿದರು.
ಸರಿಯಾದ ಪ್ರಯೋಗಾಲಯ ಪರೀಕ್ಷೆ ಅಥವಾ ಕ್ಲಿನಿಕಲ್ ಪ್ರಯೋಗ ನಡೆದಿಲ್ಲ ಎಂದು ತಿವಾರಿ ಹೇಳಿದರು. ಆಗ ಮೆಹ್ತಾ ಅವರು ಎಲ್ಲಾ ಸಂಸ್ಥೆಗಳು ಸಕ್ರಿಯವಾಗಿದ್ದರೂ ಏನಾದರೂ ನಡೆದರೆ ತಿವಾರಿ ಪತ್ರಿಕೆ ಓದಿ ಇಲ್ಲಿಗೇ ಬರುತ್ತಾರೆ ಎಂದು ಮೆಹ್ತಾ ಹೇಳಿದರು. ನಂತರ ನ್ಯಾಯಾಲಯ ಅರ್ಜಿ ವಜಾಗೊಳಿಸಿತು.
ದೇಶ ಔಷಧ ಸುರಕ್ಷತೆ ಕಾಯ್ದುಕೊಳ್ಳಲು ಮತ್ತು ದೋಷಯುಕ್ತ ಔಷಧಗಳನ್ನು ವಾಪಸ್ ಪಡೆಯುವುದಕ್ಕೆ ಸಂಬಂಧಿಸಿದಂತೆ ನೀತಿ ರೂಪಿಸುವಂತೆ ಅರ್ಜಿ ಕೋರಿತ್ತು.
ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾ ಪ್ರೈವೇಟ್ ಲಿಮಿಟೆಡ್ ತಯಾರಿಸಿದ ಕೋಲ್ಡ್‌ರಿಫ್ ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಐದು ವರ್ಷಕ್ಕಿಂತಲೂ ಕಡಿಮೆ ವಯೋಮಾನದ 14 ಮಕ್ಕಳು ಸಾವನ್ನಪ್ಪಿದ್ದರು. ಪ್ರಸ್ತುತ ಈ ಸಂಖ್ಯೆ 22ಕ್ಕೆ ಏರಿದೆ ಎಂದು ವರದಿಯಾಗಿದೆ. ಪ್ರಯೋಗಾಲಯ ಪರೀಕ್ಷೆಗಳಲ್ಲಿ ಡೈಎಥಿಲೀನ್ ಗ್ಲೈಕಾಲ್ (ಡಿಇಜಿ) ಎಂಬ ನಿಷೇಧಿತ ರಾಸಾಯನಿಕದ ಅಂಶ ಇರುವುದು ಪತ್ತೆಯಾಗಿತ್ತು. ಮಧ್ಯಪ್ರದೇಶ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿಯೂ ಔಷಧದ ಪರಿಣಾಮದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತಿವಾರಿ ಅರ್ಜಿ ಸಲ್ಲಿಸಿದ್ದರು.