ವಿಚಾರಣೆ ವೇಳೆ ಆರೋಪಿ ವಿರುದ್ಧ ನೀಡಿರುವ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ, ಪ್ರತಿಕೂಲ ಸಾಕ್ಷಿಯಾಗುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿದರೆ ಮಾತ್ರ ಗರ್ಭಪಾತಕ್ಕೆ ಅವಕಾಶ ನೀಡುವುದಾಗಿ ಪ್ರಕರಣವೊಂದರಲ್ಲಿ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ತಂದೆಗೆ ಮಧ್ಯಪ್ರದೇಶ ಹೈಕೋರ್ಟ್ ಈಚೆಗೆ ವಿಭಿನ್ನ ಷರತ್ತು ವಿಧಿಸಿದೆ.
ಈ ಕುರಿತು ತನಿಖಾಧಿಕಾರಿಗೆ ಅಫಿಡವಿಟ್ ಸಲ್ಲಿಸುವಂತೆ 17 ವರ್ಷದ ಸಂತ್ರಸ್ತೆ ಮತ್ತು ಆಕೆಯ ತಂದೆಗೆ ನ್ಯಾಯಮೂರ್ತಿ ಜಿ ಎಸ್ ಅಹ್ಲುವಾಲಿಯಾ ನಿರ್ದೇಶಿಸಿದರು.
ಸಂತ್ರಸ್ತೆಯಿಂದ ಅಫಿಡವಿಟ್ ಪಡೆದ ನಂತರ ಅದನ್ನು ವೈದ್ಯಕೀಯ ಮಂಡಳಿ ಎದುರು ಹಾಜರುಪಡಿಸುವಂತೆ ತನಿಖಾಧಿಕಾರಿಗೆ ನಿರ್ದೇಶಿಸಿದ ನ್ಯಾಯಾಲಯ ಆನಂತರವೇ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಆದೇಶಿಸಿದೆ.
ಸಂತ್ರಸ್ತೆ ಪ್ರತಿಕೂಲ ಸಾಕ್ಷಿಯಾದರೆ, ಆರೋಪಿ ಅತ್ಯಾಚಾರ ನಡೆಸಿಲ್ಲ ಎಂದು ಹೇಳಿಕೊಂಡರೆ ಇಲ್ಲವೇ ತಾನು ಪ್ರೌಢ ವಯಸ್ಕಳು ಎಂದು ಸಮಜಾಯಿಷಿ ನೀಡಿದರೆ ಆಗ ತನ್ನ ವರದಿಯನ್ನು ರಿಜಿಸ್ಟ್ರಾರ್ ಜನರಲ್ ಅವರ ಹೇಳಿಕೆ ಪತ್ರದೊಂದಿಗೆ ಸಲ್ಲಿಸುವಂತೆಯೂ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.
ಸುಮಾರು ಒಂಬತ್ತು ವಾರಗಳ ಗರ್ಭಧಾರಣೆಯನ್ನು ಕೊನೆಗೊಳಿಸುವಂತೆ ಕೋರಿ 17 ವರ್ಷದ ಅಪ್ರಾಪ್ತೆ ಕಳೆದ ತಿಂಗಳು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ಬಳಿಕ ಗರ್ಭಪಾತಕ್ಕೆ ಷರತ್ತುಬದ್ಧ ಸಮ್ಮತಿ ಸೂಚಿಸಿದ ನ್ಯಾಯಾಲಯ ಗರ್ಭಪಾತಕ್ಕೆ ಒಪ್ಪಿಗೆ ನೀಡುವ ಅಫಿಡವಿಟ್ ಸಲ್ಲಿಸುವಂತೆ ಸಂತ್ರಸ್ತೆಯ ತಂದೆಗೆ ನಿರ್ದೇಶನ ನೀಡಿತು.
ಅಲ್ಲದೆ, ಗರ್ಭಪಾತದ ನಂತರ ಅಪ್ರಾಪ್ತ ಸಂತ್ರಸ್ತೆಯ ಭ್ರೂಣವನ್ನು ಸಂರಕ್ಷಿಸಿ ಅದನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಬೇಕು, ಇದಕ್ಕಾಗಿ ಸಂತ್ರಸ್ತೆ ಮತ್ತು ಆರೋಪಿಯ ರಕ್ತದ ಮಾದರಿಯನ್ನೂ ಕಳುಹಿಸಿಕೊಡಬೇಕು ಎಂದು ನ್ಯಾಯಾಲಯ ಸೂಚಿಸಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]