ವಿವಿಧ ವ್ಯಕ್ತಿಗಳ ವಿರುದ್ಧ ಐದು ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳೆಗೆ ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಜಾಮೀನು ನಿರಾಕರಿಸಿದೆ.
ವ್ಯಕ್ತಿಯೊಬ್ಬನಿಂದ ಹಣ ಸುಲಿಗೆ ಮಾಡಿ ಆತನ ಅಂಗಡಿ ದೋಚಿದ ಆರೋಪದಡಿ ಮಹಿಳೆ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಳು.
ಕೇಸ್ ಡೈರಿ ಪರಿಶೀಲಿಸಿದ ನ್ಯಾಯಮೂರ್ತಿ ಮಣಿಂದರ್ ಭಟ್ಟಿ ಅವರು ಆರೋಪಿ ವಿರುದ್ಧ ಸುಲಿಗೆಯ ನೇರ ಆರೋಪಗಳಿವೆ ಎಂದರು.
ತನ್ನ ಪತಿಯ ವಿರುದ್ಧದ ಎರಡು ಪ್ರಕರಣ ಸೇರಿದಂತೆ ಅನೇಕ ವ್ಯಕ್ತಿಗಳ ವಿರುದ್ಧ ಮಹಿಳೆ ಈ ಹಿಂದೆಯೂ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು ಎಂಬುದನ್ನು ನ್ಯಾಯಾಲಯ ಗಮನಿಸಿತು.
ಮಹಿಳೆಗೆ ರೂ. 1,80,000/- ಹಣ ನೀಡಿರುವುದನ್ನು ಬೆದರಿಕೆ ಎದುರಿಸಿದ ದೂರುದಾರನ ಹೇಳಿಕೆ ತಿಳಿಸುತ್ತದೆ. ಅರ್ಜಿದಾರ ಮಹಿಳೆ ಐಪಿಸಿ ಸೆಕ್ಷನ್ 376ರ ಅಡಿ 5 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂಬುದು ಕೂಡ ವಿವಾದದ ವಿಚಾರವಾಗಿಲ್ಲ. ಅರ್ಜಿದಾರೆ ಹೇಳಿಕೊಂಡಂತೆ ಆತನ ಗಂಡನಾಗಿರುವ ವ್ಯಕ್ತಿಯ ವಿರುದ್ಧ ಎರಡು ಪ್ರಕರಣ ಸೇರಿದಂತೆ ಆಕೆ ಅನೇಕರ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ ಎಂದು ನ್ಯಾಯಾಲಯ ತಿಳಿಸಿತು.
ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತಿತರ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದ ಬಳಿಕ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದಳು.
ಮಹಿಳೆ ಪರವಾಗಿ ವಾದ ಮಂಡಿಸಿದ ವಕೀಲರು ಯಾವುದೇ ಹಣ ಅಥವಾ ಆಸ್ತಿ ಆಕೆಯ ಬಳಿ ಇಲ್ಲದೇ ಇರುವುದರಿಂದ ಆಕೆಯ ವಿರುದ್ಧ ಸುಲಿಗೆಯ ಆರೋಪ ಹೊರಿಸಲಾಗದು. ಈ ಹಿಂದೆ ಆಕೆಯ ವಿರುದ್ಧದ ಇದೇ ರೀತಿಯ ಪ್ರಕರಣಗಳನ್ನು ಗಮನಿಸಿದ ವಿಚಾರಣಾ ನ್ಯಾಯಾಲಯ ಆಕೆಯ ಜಾಮೀನು ತಿರಸ್ಕರಿಸಿದೆ ಎಂಬುದು ಪ್ರಸ್ತುತ ಅರ್ಜಿಯನ್ನು ತಿರಸ್ಕರಿಸಲು ಆಧಾರವಾಗಬಾರದು ಎಂದರು.
ಇದಕ್ಕೆ ವ್ಯತಿರಿಕ್ತವಾಗಿ, ಮಹಿಳೆಗೆ ಸುಳ್ಳು ಮತ್ತು ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸುವ ಅಭ್ಯಾಸವಿದೆ. ಆಕೆ ಬೆದರಿಕೆ ತಂತ್ರ ಅನುಸರಿಸುತ್ತಾಳೆ ಎಂದು ಸರ್ಕಾರ ಮತ್ತು ದೂರುದಾರರು ವಾದಿಸಿದರು. ವಾದ ಆಲಿಸಿದ ನ್ಯಾಯಾಲಯ ಆಕೆಗೆ ಜಾಮೀನು ನಿರಾಕರಿಸಿತು.