ಆರೋಪಿಗೆ ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳುವಂತೆ ಸೂಚಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ ಆದೇಶ ತಳ್ಳಿಹಾಕಿದ ಸುಪ್ರೀಂ

ಮಹಿಳೆಯರ ಮೇಲಿನ ಅಪರಾಧದ ಪ್ರಕರಣಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಕೆಲವು ನಿರ್ದೇಶನಗಳನ್ನೂ ಸಹ ಇದೇ ವೇಳೆ ಕೆಳಹಂತದ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್‌ ನೀಡಿದೆ.
Justices AM Khanwilkar and S Ravindra Bhat
Justices AM Khanwilkar and S Ravindra Bhat

ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಪುರುಷನಿಗೆ ಜಾಮೀನು ನೀಡಲು ಸಂತ್ರಸ್ತೆಗೆ ರಾಖಿ ಕಟ್ಟುವಂತೆ ಷರತ್ತು ವಿಧಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ ಗುರುವಾರ ತಳ್ಳಿಹಾಕಿದೆ (ಅಪರ್ಣಾ ಭಟ್‌ ವರ್ಸಸ್‌ ಮಧ್ಯಪ್ರದೇಶ ಸರ್ಕಾರ).

ಮಧ್ಯಪ್ರದೇಶ ಹೈಕೋರ್ಟ್‌ ಜುಲೈ 2020ರಲ್ಲಿ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ವಕೀಲೆ ಅಪರ್ಣಾ ಭಟ್‌ ಹಾಗೂ ಇತರ ಎಂಟು ಮಂದಿ ವಕೀಲೆಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎ ಎಂ ಖಾನ್ವಿಲ್ಕರ್ ಮತ್ತು ನ್ಯಾ. ಎಸ್ ರವೀಂದ್ರ ಭಟ್‌ ಅವರಿದ್ದ ಪೀಠವು ಇಂದು ಆದೇಶ ನೀಡಿದ್ದು, ಮಹಿಳೆಯರ ಮೇಲಿನ ಅಪರಾಧದ ಪ್ರಕರಣಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಕೆಲವು ನಿರ್ದೇಶನಗಳನ್ನೂ ಸಹ ಇದೇ ವೇಳೆ ಕೆಳಹಂತದ ನ್ಯಾಯಾಲಯಗಳಿಗೆ ನೀಡಿದೆ.

ಪ್ರಕರಣದ ಹಿನ್ನೆಲೆ: ಮಧ್ಯಪ್ರದೇಶದ ಹೈಕೋರ್ಟ್‌ ನ್ಯಾ. ರೋಹಿತ್‌ ಆರ್ಯಾ ಅವರು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಯಲ್ಲಿ ಆರೋಪಿ ಪುರುಷನಿಗೆ ಜಾಮೀನು ನೀಡುವ ವೇಳೆ ಆರೋಪಿಯು ರಕ್ಷಾ ಬಂಧನದ ದಿವಸ ಸಂತ್ರಸ್ತೆಯ ಮನೆಗೆ ತೆರಳಿ ಸಂತ್ರಸ್ತೆಯಿಂದ ತನ್ನ ಕೈಗೆ ರಾಖಿಯನ್ನು ಕಟ್ಟಿಸಿಕೊಳ್ಳಬೇಕು ಎಂದು ಆದೇಶದಲ್ಲಿ ಹೇಳಿದ್ದರು.

ಸಂತ್ರಸ್ತೆಯ ಮನೆಗೆ ಆರೋಪಿಯು ತನ್ನ ಪತ್ನಿಯ ಸಮೇತ, ಸಿಹಿ ಪೊಟ್ಟಣದೊಂದಿಗೆ ತೆರಳಬೇಕು. ಸಹೋದರ ಸಹೋದರಿಯರ ಸಂಬಂಧದ ದ್ಯೋತಕವಾದ ರಾಖಿ ಕಟ್ಟಿಸಿಕೊಳ್ಳುವ ವೇಳೆ ಆಕೆಗೆ ರೂ.11 ಸಾವಿರ ಹಣವನ್ನು ‘ಸಹೋದರರು ಸಹೋದರಿಯರಿಗೆ ನೀಡುವ ರೀತಿಯಲ್ಲಿ’ ಕೊಡುಗೆಯಾಗಿ ನೀಡಬೇಕು. ಅಲ್ಲದೆ ಸಂತ್ರಸ್ತೆಯ ಮಗನಿಗೆ ರೂ. 5 ಸಾವಿರವನ್ನು ಹೊಸ ಬಟ್ಟೆ, ಸಿಹಿ ತಿನಿಸಿಗಾಗಿ ನೀಡಬೇಕು ಎಂದೂ ನ್ಯಾಯಾಲವು ಆದೇಶದಲ್ಲಿ ಹೇಳಿತ್ತು. ಮುಂದುವರೆದು, ಆರೋಪಿಯು ಸಂತ್ರಸ್ತೆಯನ್ನು ಯಾವುದೇ ಸಂದರ್ಭದಲ್ಲಿಯೂ ತನ್ನ ಶಕ್ತ್ಯಾನುಸಾರ ರಕ್ಷಿಸುವುದಾಗಿ ಪ್ರಮಾಣ ಮಾಡಬೇಕು ಎಂದು ಸೂಚಿಸಿತ್ತು.

ಮಧ್ಯಪ್ರದೇಶ ಹೈಕೋರ್ಟ್‌ ನ ಈ ತೀರ್ಪು ದೇಶಾದ್ಯಂತ ವಿವಾದಕ್ಕೆ ಕಾರಣವಾಗಿತ್ತು. ಮಹಿಳೆಯರ ಮೇಲಿನ ದೌರ್ಜನ್ಯದಂತಹ ಗಂಭೀರ ಸ್ವರೂಪದ ಅಪರಾಧಗಳನ್ನು ಈ ಬಗೆಯ ಆದೇಶ ಕ್ಷುಲ್ಲಕವಾಗಿಸುತ್ತದೆ ಎಂದು ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಯಲ್ಲಿ ತಿಳಿಸಲಾಗಿತ್ತು. ಅಲ್ಲದೆ, ಆದೇಶದಲ್ಲಿನ ಅಂತಹ ಅಭಿಪ್ರಾಯಗಳು ಮತ್ತು ನಿರ್ದೇಶನಗಳು ಕಾನೂನಾತ್ಮಕವಾಗಿ ಅಪರಾಧವಾದುದನ್ನು ಸಾಮಾನ್ಯೀಕರಿಸುವುದಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿತ್ತು.

ಪ್ರಕರಣದ ಸಂಬಂಧ ಅಟಾರ್ನಿ ಜನಲರ್‌ ಕೆ ಕೆ ವೇಣುಗೋಪಾಲ್‌ ಅವರಿಗೆ ನೋಟಿಸ್‌ ನೀಡಿದ್ದ ಸುಪ್ರೀಂ ಕೋರ್ಟ್‌ನ ಪೀಠವು ಈ ಸಂಬಂಧ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಸೂಚಿಸುವಂತೆ ಅವರಿಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ವಿವರವಾದ ಹೇಳಿಕೆಯೊಂದನ್ನು ಸಲ್ಲಿಸಿದ್ದ ಎಜಿಯವರು ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ನ್ಯಾಯಾಧೀಶರು ತೋರುವ ಗಂಭೀರರಹಿತ ನಡೆಯನ್ನು ಸರಿಪಡಿಸಲು ಅಗತ್ಯವಾದ ಕ್ರಮಗಳ ಬಗ್ಗೆ ತಿಳಿಸಿದ್ದರು.

‘ಹಳೆಯ ಚಿಂತನಾಶಾಲೆ’ಯ ಹಾಗೂ ‘ಪಿತೃಪ್ರಧಾನ’ ಚಿಂತನೆಗಳ ಪ್ರಭಾವದಲ್ಲಿರುವ ನ್ಯಾಯಮೂರ್ತಿಗಳಿಗೆ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಮಹಿಳೆಯರನ್ನು ಉಪಭೋಗದ ವಸ್ತುವಿನ ರೀತಿಯಲ್ಲಿ ಪರಿಗಣಿಸಿ ಆದೇಶಿಸದಂತೆ ಸಂವೇದನಾಶೀಲರನ್ನಾಗಿಸಬೇಕಾದ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದ್ದರು. ಇದೇ ವೇಳೆ ನ್ಯಾಯಾಂಗದಲ್ಲಿ ಮಹಿಳೆಯರ ಪಾಲನ್ನು ಗಣನೀಯವಾಗಿ ಹೆಚ್ಚಿಸಬೇಕಾದ ಅಗತ್ಯತೆಯ ಬಗ್ಗೆಯೂ ಅವರು ಮಹತ್ವ ನೀಡಿದ್ದರು.

Also Read
ಲೈಂಗಿಕ ದೌರ್ಜನ್ಯ ಎಸಗಿದವ ರಾಖಿ ಕಟ್ಟಿಸಿಕೊಂಡರೆ ಜಾಮೀನು: ಮಧ್ಯಪ್ರದೇಶ ಹೈಕೋರ್ಟ್ ಷರತ್ತನ್ನು ಪ್ರಶ್ನಿಸಿದ ವಕೀಲೆಯರು

ಮುಂದುವರೆದು ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅವರು ಮಹಿಳೆಯರ ಮೇಲಿನ ಅಪರಾಧದ ಪ್ರಕರಣಗಳಲ್ಲಿ ಜಾಮೀನು ನೀಡುವ ವೇಳೆ ಅನುಸರಿಸಬಹುದಾದ ಕೆಲ ಅಂಶಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದ್ದರು:

  • ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಸಂಪರ್ಕ ಏರ್ಪಡುವಂತಹ ಯಾವುದೇ ಕಡ್ಡಾಯ ಷರತ್ತುಗಳನ್ನು ಜಾಮೀನಿನ ವೇಳೆ ವಿಧಿಸಬಾರದು.

  • ಆರೋಪಿಯಿಂದ ಸಂತ್ರಸ್ತೆಗೆ ಯಾವುದೇ ರೀತಿಯ ಕಿರುಕುಳ ಎದುರಾಗದಂತೆ ಜಾಮೀನಿನಲ್ಲಿ ಷರತ್ತುಗಳಿರುವುದನ್ನು ಖಚಿತಪಡಿಸಿಕೊಳ್ಳಬೇಕು

  • ಮಹಿಳೆಯರ ಬಗೆಗೆ ಹಾಗೂ ಸಮಾಜದಲ್ಲಿನ ಅವರ ಸ್ಥಾನಮಾನದ ಬಗ್ಗೆ ಪಾಲಕರು ಇರಿಸಿಕೊಳ್ಳುವಂತಹ ಸಾಂಪ್ರದಾಯಿಕ ಆಲೋಚನೆಗಳಿಂದ ಮುಕ್ತವಾಗಿ ಹಾಗೂ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಗೆ (ಸಿಆರ್‌ಪಿಸಿ) ಕಡ್ಡಾಯವಾಗಿ ಬದ್ಧವಾಗಿ ಜಾಮೀನಿನ ಷರತ್ತುಗಳಿರಬೇಕು.

  • ಬಹುಮುಖ್ಯವಾಗಿ ಸಂತ್ರಸ್ತೆ ಮತ್ತು ಆರೋಪಿಯ ನಡುವಿನ ಯಾವುದೇ ರೀತಿಯ ರಾಜಿಸಂಧಾನಕ್ಕೆ ಅನುವು ಮಾಡುವ ಯಾವುದೇ ಸಲಹೆಗಳನ್ನು ನೀಡುವುದರಿಂದ ನ್ಯಾಯಾಲಯಗಳು ವಿಮುಖವಾಗಬೇಕು.

Related Stories

No stories found.
Kannada Bar & Bench
kannada.barandbench.com