ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಸಂಬಂಧಿಸಿದ ಟ್ವೀಟ್ ಮಾಡಿದ್ದಕ್ಕಾಗಿ ಭೋಜ್‌ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆ ರದ್ದುಪಡಿಸಲು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ [ನೇಹಾ ಸಿಂಗ್ ರಾಥೋಡ್ ಮತ್ತು ಮಧ್ಯ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಬುಡಕಟ್ಟು ವರ್ಗಕ್ಕೆ ಸೇರಿದ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತ ವ್ಯಕ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಮವಸ್ತ್ರ ಧರಿಸಿರದೇ ಇದ್ದರೂ ನೇಹಾ ಅವರು ಪ್ರಕಟಿಸಿರುವ ವ್ಯಂಗ್ಯಚಿತ್ರದಲ್ಲಿ ಆ ಸಮವಸ್ತ್ರ ಬಿಂಬಿಸಿರುವುದನ್ನು ಪ್ರಸ್ತಾಪಿಸಿದ ನ್ಯಾ. ಗುರುಪಾಲ್ ಸಿಂಗ್ ಅಹ್ಲುವಾಲಿಯಾ ಅವರು ನಿರ್ದಿಷ್ಟ ಸಿದ್ಧಾಂತದ ಉಡುಪನ್ನು ಏಕೆ ಚಿತ್ರಿಸಲಾಗಿದೆ ಎಂದು ಪ್ರಶ್ನಿಸಿದರು.
ಅರ್ಜಿದಾರರು ತಮ್ಮ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದ ಕಾರ್ಟೂನ್ ನಡೆದ ಘಟನೆಗೆ ಅನುಗುಣವಾಗಿಲ್ಲದ ಕಾರಣ ಮತ್ತು ಕೆಲ ಸಂಗತಿಗಳನ್ನು ಹೆಚ್ಚುವರಿಯಾಗಿ ತಮ್ಮಷ್ಟಕ್ಕೇ ಸೇರ್ಪಡೆ ಮಾಡಿರುವುದರಿಂದ ಅರ್ಜಿದಾರರು ತಮ್ಮ ಮೂಲಭೂತ ಹಕ್ಕಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಿ ಈ ಕಾರ್ಟೂನ್ ಪ್ರಕಟಿಸಿದ್ದಾರೆ ಎಂದು ಹೇಳಲು ಬರುವುದಿಲ್ಲ ಎಂಬುದಾಗಿ ನ್ಯಾಯಾಲಯ ತಿಳಿಸಿತು.
ಕಲಾವಿದನಿಗೆ ವಿಡಂಬನೆಯ ಮೂಲಕ ಟೀಕಿಸುವ ಸ್ವಾತಂತ್ರ್ಯವಿರಬೇಕಾದರೂ ಕಾರ್ಟೂನ್‌ನಲ್ಲಿ ನಿರ್ದಿಷ್ಟ ಉಡುಗೆ ಸೇರಿಸುವುದನ್ನು ವಿಡಂಬನೆ ಎನ್ನಲಾಗದು ಎಂದು ನ್ಯಾ. ಅಹ್ಲುವಾಲಿಯಾ ಹೇಳಿದರು.
ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಮೂಲಭೂತ ಹಕ್ಕು ಆತ್ಯಂತಿಕ ಹಕ್ಕಾಗಿರದೆ ಸಮಂಜಸ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಕೂಡ ನ್ಯಾಯಾಲಯ ಹೇಳಿತು.
ಐಪಿಸಿ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು ನೀಡುವುದು) ಅಡಿಯಲ್ಲಿ ಉತ್ತರ ಪ್ರದೇಶ ಮೂಲದ ಜಾನಪದ ಗಾಯಕಿ ವಿರುದ್ಧ ಕಳೆದ ವರ್ಷ ಪ್ರಕರಣ ದಾಖಲಿಸಲಾಗಿತ್ತು.
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ರಸ್ತೆಬದಿ ಕುಳಿತಿದ್ದ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಾರ್ಮಿಕನೊಬ್ಬನ ಮೇಲೆ ಪ್ರವೇಶ್ ಶುಕ್ಲಾ ಎಂಬಾತ ಧೂಮಪಾನ ಮಾಡುತ್ತಾ ಮೂತ್ರ ವಿಸರ್ಜಿಸಿದ್ದ. ಘಟನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು. ಹಲವರು ಇದೊಂದು ತಲೆತಗ್ಗಿಸುವ ಘಟನೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದೇ ಘಟನೆಯನ್ನು ಟೀಕಿಸಿ ನೇಹಾ ಸಿಂಗ್ ವ್ಯಂಗ್ಯಚಿತ್ರ ಪ್ರಕಟಿಸಿದ್ದರು. ಅರೆನಗ್ನ ವ್ಯಕ್ತಿಯೊಬ್ಬ ನೆಲದ ಮೇಲೆ ಕುಳಿತ ಇನ್ನೊಬ್ಬ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡುವ ವ್ಯಂಗ್ಯಚಿತ್ರ ಅದಾಗಿತ್ತು. ಅಲ್ಲದೆ, ನೆಲದಲ್ಲಿ ಖಾಕಿ ಚೆಡ್ಡಿಯೊಂದು ಬಿದ್ದಿರುವುದನ್ನೂ ಸಹ ಚಿತ್ರಿಸಲಾಗಿತ್ತು. ಈ ಕಾರಣಕ್ಕಾಗಿ ಪ್ರಕರಣದಲ್ಲಿ ಆರ್‌ಎಸ್‌ಎಸ್‌ನ್ನು ವಿನಾಕಾರಣ ಎಳೆದುತರಲಾಗಿದೆ ಎಂದು ನೇಹಾ ವಿರುದ್ಧ ಆರೋಪಿಸಲಾಗಿತ್ತು.