ಹದಿಹರೆಯದ ಬಾಲಕರಿಗೆ ಅನ್ಯಾಯ: ಸಮ್ಮತಿಯ ಲೈಂಗಿಕತೆ ವಯೋಮಿತಿ 16 ವರ್ಷಕ್ಕೆ ಇಳಿಸಲು ಮಧ್ಯಪ್ರದೇಶ ಹೈಕೋರ್ಟ್ ಒತ್ತಾಯ

ಸಾಮಾಜಿಕ ಮಾಧ್ಯಮಗಳಿಗೆ ಒಡ್ಡಿಕೊಳ್ಳುವುದರಿಂದ, ಹದಿಹರೆಯದವರು ʼಚಿಕ್ಕ ವಯಸ್ಸಿಗೇ ಪ್ರೌಢಾವಸ್ಥೆ ತಲುಪುತ್ತಿದ್ದಾರೆʼ, ವಯಸ್ಕರಾಗುವ ಮೊದಲೇ ಒಮ್ಮತದ ಲೈಂಗಿಕ ಸಂಬಂಧ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟ ಪೀಠ.
Justice Deepak Kumar Agarwal and Madhya Pradesh High Court
Justice Deepak Kumar Agarwal and Madhya Pradesh High Court
Published on

ಸಮ್ಮತಿಯ ಲೈಂಗಿಕ ಸಂಬಂಧ ಬೆಳೆಸುವ ʼಹದಿಹರೆಯದ ಹುಡುಗರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದಕ್ಕಾಗಿ ಲೈಂಗಿಕತೆಯ ಸಮ್ಮತಿ ವಯೋಮಿತಿಯನ್ನು ಈಗಿರುವ 18 ವರ್ಷದಿಂದ 16 ವರ್ಷಕ್ಕೆ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮಧ್ಯಪ್ರದೇಶ ಹೈಕೋರ್ಟ್‌ ಇತ್ತೀಚೆಗೆ ಒತ್ತಾಯಿಸಿದೆ [ರಾಹುಲ್‌ ಚಂದೇಲ್‌ ಮತ್ತು ಸರ್ಕಾರ ನಡುವಣ ಪ್ರಕರಣ].

ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯಿದೆ– 2013ನ್ನು ಜಾರಿಗೊಳಿಸಿದ್ದರಿಂದಾಗಿ ಹುಡುಗಿಯರು ಲೈಂಗಿಕ ಕ್ರಿಯೆಗೆ ಸಮ್ಮತಿಸುವ ವಯಸ್ಸನ್ನು 16ರಿಂದ 18 ವರ್ಷಕ್ಕೆ ಹೆಚ್ಚಳ ಮಾಡಲಾಗಿದ್ದು ಇದು ಸಾಮಾಜಿಕ ವ್ಯವಸ್ಥೆಯನ್ನು ವಿಚ್ಛಿದ್ರಗೊಳಿಸಿದೆ. ಅಲ್ಲದೆ ಸಮ್ಮತಿಯ ವಯೋಮಿತಿಯನ್ನು 18 ವರ್ಷಕ್ಕೆ ಹೆಚ್ಚಿಸುವುದು ಹದಿಹರೆಯದ ಹುಡುಗರನ್ನು ಸಮಾಜದಲ್ಲಿ ಅಪರಾಧಿಗಳೆಂದು ಪರಿಗಣಿಸಲು ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿ ದೀಪಕ್ ಕುಮಾರ್ ಅಗರ್‌ವಾಲ್‌ ಅವರಿದ್ದ ಪೀಠ ತಿಳಿಸಿದೆ.

ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು

  • ಸಾಮಾನ್ಯವಾಗಿ ಹದಿಹರೆಯದಲ್ಲಿ ಹುಡುಗ, ಹುಡುಗಿಯರು ಸ್ನೇಹ ಬೆಳೆಸುತ್ತಾರೆ. ಬಳಿಕ ಆಕರ್ಷಣೆಯಿಂದಾಗಿ ದೈಹಿಕ ಸಂಬಂಧ ಬೆಳೆಸುತ್ತಾರೆ. ಆದರೆ ಇದರಿಂದಾಗಿ ಸಮಾಜದಲ್ಲಿ ಅವರನ್ನು ಅಪರಾಧಿ ಎಂದು ಪರಿಗಣಿಸಲಾಗಿದೆ.

  • ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ. ಈ ಅಸಂಗತತೆಯಿಂದಾಗಿ ಹದಿಹರೆಯದ ಹುಡುಗರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಅನ್ಯಾಯ ಸರಿಪಡಿಸಲು ಸಂತ್ರಸ್ತೆಗೆ ವಿಧಿಸಲಾಗಿರುವ ವಯೋಮಿತಿಯನ್ನು 18ರಿಂದ 16 ವರ್ಷಕ್ಕೆ ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಬೇಕು.

  • ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದ ಅರಿವು ಮತ್ತು ಸುಲಭ ಲಭ್ಯವಾಗಿರುವ ಇಂಟರ್ನೆಟ್ ಸಂಪರ್ಕದಿಂದಾಗಿ 14 ವರ್ಷ ವಯಸ್ಸಿನ ಪ್ರತಿಯೊಬ್ಬ ಗಂಡು ಅಥವಾ ಹೆಣ್ಣು ಚಿಕ್ಕ ವಯಸ್ಸಿನಲ್ಲಿಯೇ ಪ್ರೌಢಾವಸ್ಥೆ ತಲುಪುತ್ತಿದ್ದಾರೆ.

  • ಇದರಿಂದಾಗಿ, ಹೆಣ್ಣು ಮತ್ತು ಗಂಡು ಮಕ್ಕಳು ಆಕರ್ಷಣೆಗೆ ಒಳಗಾಗುತ್ತಿದ್ದು ಈ ಆಕರ್ಷಣೆಗಳು ಸಮ್ಮತಿಯೊಂದಿಗೆ ದೈಹಿಕಸಂಬಂಧ ಬೆಳೆಸಲು ಇಂಬು ನೀಡುತ್ತಿವೆ. ಇಂತಹ ಸನ್ನಿವೇಶಗಳಲ್ಲಿ ಪುರುಷರು ಅಪರಾಧಿಗಳಲ್ಲ. ಅವರು ಹೆಣ್ಣಿನ ಸಂಪರ್ಕಕ್ಕೆ ಬಂದಾಗ ಮತ್ತು ದೈಹಿಕ ಸಂಬಂಧ ಬೆಳೆಸಿದಾಗ ಅದು ವಯಸ್ಸಿಗೆ ಸಂಬಂಧಿಸಿದ ವಿಚಾರವಾಗಿರುತ್ತದೆ.

  • ಪ್ರಕರಣದ ಸಂತ್ರಸ್ತೆ ರೀತಿಯ ಹದಿಹರೆಯದವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯು ಅವರು ತಮ್ಮ ಯೋಗಕ್ಷೇಮದ ಬಗ್ಗೆ ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆಂದು ಸೂಚಿಸುತ್ತದೆ.

  • ಮೇಲ್ನೋಟಕ್ಕೆ ಪ್ರಸುತ ಪ್ರಕರಣದಲ್ಲಿ ಆರೋಪಿಗೆ ದುಷ್ಕೃತ್ಯ ಎಸಗುವ ಉದ್ದೇಶ ಇರಲಿಲ್ಲ.

ಅತ್ಯಾಚಾರ ಮತ್ತಿತರ ಅಪರಾಧಗಳಿಗಾಗಿ ಐಪಿಸಿ, ಪೋಕ್ಸೊ ಕಾಯಿದೆ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ  (ಐಟಿ) ಕಾಯಿದೆ ಅಡಿಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ 23 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಜೊತೆಗೆ ಪ್ರಕರಣದ ಸಂದರ್ಭ ಮತ್ತು ಸನ್ನಿವೇಶ ಪರಿಗಣಿಸಿ ಎಫ್‌ಐಆರ್‌ ರದ್ದುಗೊಳಿಸುವುದು ಸೂಕ್ತ ಎಂದು ನ್ಯಾಯಾಲಯ ಹೇಳಿತು.  

Kannada Bar & Bench
kannada.barandbench.com