ಶಾಲಾ ಸಿಬ್ಬಂದಿ ಕೊಠಡಿ ಸಾರ್ವಜನಿಕ ಸ್ಥಳ ಅಲ್ಲ: ಅಲ್ಲಿ ಜಾತಿ ನಿಂದನೆ ಅಪರಾಧವಲ್ಲ ಎಂದ ಮಧ್ಯಪ್ರದೇಶ ಹೈಕೋರ್ಟ್

ಶಾಲೆಯೊಂದರ ಸಿಬ್ಬಂದಿ ಕೊಠಡಿಯಲ್ಲಿ ನಡೆದ ಸಭೆ ವೇಳೆ ವ್ಯಕ್ತಿಯೊಬ್ಬರ ಜಾತಿ ಉಲ್ಲೇಖಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಅರ್ಜಿದಾರರ ಮೇಲಿತ್ತು.
Madhya Pradesh High Court, Jabalpur Bench
Madhya Pradesh High Court, Jabalpur Bench

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ- 1989ರ ಅಡಿಯಲ್ಲಿ ದಾಖಲಿಸಲಾಗಿದ್ದ ಜಾತಿ ನಿಂದನೆ ಪ್ರಕರಣವೊಂದನ್ನು ಇತ್ತೀಚೆಗೆ ರದ್ದು ಪಡಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ ಆರೋಪಿತ ಅಪರಾಧವು ಶಾಲಾ ಸಿಬ್ಬಂದಿಯ ಕೊಠಡಿಯಲ್ಲಿ ನಡೆದಿದ್ದು ಅದು ಸಾರ್ವಜನಿಕ ಸ್ಥಳದ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಕಾಯಿದೆ ಅಡಿ ಅಪರಾಧ ಪ್ರಕರಣ ದಾಖಲಿಸಲಾಗದು ಎಂದು ವಿವರಿಸಿದೆ [ಅಶುತೋಷ್‌ ತಿವಾರಿ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಶಾಲೆಯೊಂದರ ಸಿಬ್ಬಂದಿ ಕೊಠಡಿಯಲ್ಲಿ ನಡೆದ ಸಭೆ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರ ಜಾತಿ ಉಲ್ಲೇಖಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪವನ್ನು ಅರ್ಜಿದಾರರು ಎದುರಿಸುತ್ತಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶಾಲ್ ಧಗತ್ ಅವರು ಯಾವುದೇ ಸ್ಥಳದಲ್ಲಿ ಸಾರ್ವಜನಿಕವಾಗಿ ಪರಿಶಿಷ್ಟ ಜಾತಿ ಅಥವಾ ಪಂಗಡದ ಸದಸ್ಯರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಅಥವಾ ಬೆದರಿಕೆ ಒಡ್ಡುವವರಿಗೆ ಎಸ್‌ಸಿ- ಎಸ್‌ಟಿ ಕಾಯಿದೆಯ ಸೆಕ್ಷನ್ 3(1)(x) ದಂಡ ವಿಧಿಸುತ್ತದೆ. ಆದರೆ ಶಾಲಾ ಸಿಬ್ಬಂದಿ ಕೊಠಡಿ ಸಾರ್ವಜನಿಕ ಸ್ಥಳವಲ್ಲವಾದ್ದರಿಂದ ಆರೋಪಿಗಳ ವಿರುದ್ಧದ ಆರೋಪ ನಿಲ್ಲುವುದಿಲ್ಲ ಎಂದು ತಿಳಿಸಿದರು.  

“…ಕಾಯಿದೆಯ ಸೆಕ್ಷನ್ 3(1)(x) ಅಡಿಯಲ್ಲಿ ಅಪರಾಧ ಮಾಡಿರಬೇಕಾದರೆ ಸಾರ್ವಜನಿಕ ದೃಷ್ಟಿಯಲ್ಲಿ ಕೃತ್ಯ ನಡೆದಿರಬೇಕು ಎಂಬುದು ಸ್ಪಷ್ಟವಾಗಿದೆ. ಸಿಬ್ಬಂದಿ ಕೊಠಡಿ ಸಾರ್ವಜನಿಕ ಸ್ಥಳವಲ್ಲ, ಆದ್ದರಿಂದ ಅರ್ಜಿದಾರರ ವಿರುದ್ಧ ಕಾಯಿದೆಯ ಸೆಕ್ಷನ್ 3 (1) (x) ಅಡಿಯಲ್ಲಿ ಆರೋಪ ನಿರೂಪಿಸಲಾಗದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆಪಾದಿತ ಮೌಖಿಕ ನಿಂದನೆ ಸಾರ್ವಜನಿಕ ಸ್ಥಳದಲ್ಲಿ ನಡೆಯದ ಕಾರಣ ಐಪಿಸಿ ಸೆಕ್ಷನ್‌ 294 (ಅಶ್ಲೀಲ ಕೃತ್ಯ ಮತ್ತು ಹಾಡು) ಅಡಿಯಲ್ಲಿ ಮಾಡಲಾಗಿದ್ದ ಆರೋಪವನ್ನು ಕೂಡ ನ್ಯಾಯಾಲಯ ರದ್ದುಗೊಳಿಸಿದೆ. ಜೊತೆಗೆ ಶಾಲೆಯ ಅನುಮತಿಯಿಲ್ಲದೆ ಸಾರ್ವಜನಿಕರು ಸಿಬ್ಬಂದಿ ಕೊಠಡಿ ಪ್ರವೇಶಿಸುವಂತಿಲ್ಲ ಎಂದು ನ್ಯಾಯಾಲಯ ಅವಲೋಕಿಸಿದೆ.

ಇದಲ್ಲದೆ, ಐಪಿಸಿಯ ಸೆಕ್ಷನ್ 506ರ ಅಡಿಯಲ್ಲಿ ಕ್ರಿಮಿನಲ್ ಬೆದರಿಕೆ ಆರೋಪವನ್ನು ಕೂಡ ಅರ್ಜಿದಾರರ ವಿರುದ್ಧ ಮಾಡಲಾಗದು. ಏಕೆಂದರೆ ದೂರುದಾರ ತನ್ನನ್ನು ನಿಂದಿಸಿದಾಗ ತಾನು ಬೆದರಿದೆ ಎಂದು ವ್ಯಕ್ತಿ ಆರೋಪಿಸಿಲ್ಲ ಎಂದಿತು.  ಪ್ರಕರಣಕ್ಕೆ ಸಂಬಂಧಿಸಿದಂತೆ ಶಹದೋಲ್‌ನಲ್ಲಿರುವ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಬಾಕಿಯಿದ್ದ ಇಡೀ ಕ್ರಿಮಿನಲ್ ವಿಚಾರಣೆಯನ್ನು ನ್ಯಾಯಾಲಯ ರದ್ದುಗೊಳಿಸಿತು.

Related Stories

No stories found.
Kannada Bar & Bench
kannada.barandbench.com