ಅಲ್‌-ಫಲಾಹ್‌ ವಿವಿ ಸಂಸ್ಥಾಪಕ ಸಿದ್ದಿಕಿಯ ಪೂರ್ವಜರ ಮನೆ ಧ್ವಂಸಕ್ಕೆ ತಡೆ ನೀಡಿದ ಮಧ್ಯಪ್ರದೇಶ ಹೈಕೋರ್ಟ್‌

ಇತ್ತೀಚಿಗೆ ದೆಹಲಿಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣ ಮತ್ತು ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್-ಫಲಾಹ್ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯಕೀಯ ವೃತ್ತಿಪರರನ್ನು ಬಂಧಿಸಿಲಾಗಿತ್ತು.
Madhya Pradesh High Court, Indore Bench
Madhya Pradesh High Court, Indore Bench
Published on

ಇಂದೋರ್‌ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿ ಅವರ ಪೂರ್ವಜರ ಆಸ್ತಿಯನ್ನು ಕೆಡವಲು ಮೊವ್ ಕಂಟೋನ್ಮೆಂಟ್ ಮಂಡಳಿಯ ನಿರ್ಧಾರವನ್ನು ಮಧ್ಯಪ್ರದೇಶ ಹೈಕೋರ್ಟ್ ತಾತ್ಕಾಲಿಕವಾಗಿ ತಡೆಹಿಡಿದಿದೆ [ಅಬ್ದುಲ್ ಮಜೀದ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು].

ಮನೆಯನ್ನು ಪ್ರಸ್ತುತ ಹೊಂದಿರುವ ಅರ್ಜಿದಾರ ಅಬ್ದುಲ್ ಮಜೀದ್ ಅವರು ಕಂಟೋನ್ಮೆಂಟ್ ಮಂಡಳಿ ಹೊರಡಿಸಿದ ಧ್ವಂಸ ನೋಟಿಸ್‌ಗೆ 15 ದಿನಗಳ ಒಳಗೆ ಎಲ್ಲಾ ಸಂಬಂಧಿತ ದಾಖಲೆಗಳೊಂದಿಗೆ ಪ್ರತಿಕ್ರಿಯಿಸಬೇಕು ಎಂದು ನ್ಯಾಯಮೂರ್ತಿ ಪ್ರಣಯ್ ವರ್ಮಾ ನಿರ್ದೇಶಿಸಿದ್ದಾರೆ.

ಮಜೀದ್ ಅವರು ಉತ್ತರವನ್ನು ಸಲ್ಲಿಸಿದ ನಂತರ ಹಾಗೂ ಅವರನ್ನು ಆಲಿಸಿದ ಮೇಲಷ್ಟೇ ಅಧಿಕಾರಿಗಳು ಈ ವಿಷಯದಲ್ಲಿ ಕಾರಣ ಸಹಿತ ಆದೇಶವನ್ನು ಹೊರಡಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ. "ಮೇಲಿನ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಹಾಗೂ ಒಂದೊಮ್ಮೆ ಆದೇಶವು ಅರ್ಜಿದಾರರ ವಿರುದ್ಧವಿದ್ದರೆ ಆನಂತರ ಹತ್ತು ದಿನಗಳ ಅವಧಿಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು" ಎಂದು ನ್ಯಾಯಾಲಯವು ನವೆಂಬರ್ 20 ರಂದು ಆದೇಶಿಸಿತು.

ಇತ್ತೀಚಿಗೆ ದೆಹಲಿಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣ ಮತ್ತು ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯಕೀಯ ವೃತ್ತಿಪರರನ್ನು ಬಂಧಿಸಿಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ವಿಶ್ವವಿದ್ಯಾಲಯವನ್ನು ತೀವ್ರ ನಿಗಾದಲ್ಲಿರಿಸಿವೆ.

ವಿಶ್ವವಿದ್ಯಾನಿಲಯದ ಕಾರ್ಯಚಟುವಟಿಕೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಸಿದ್ದಿಕಿ ಪ್ರಸ್ತುತ ಜಾರಿ ನಿರ್ದೇಶನಾಲಯ (ಇ ಡಿ) ಬಂಧನದಲ್ಲಿದ್ದಾರೆ. ನವೆಂಬರ್ 19 ರಂದು, ಮೊವ್‌ ಕಂಟೋನ್ಮೆಂಟ್ ಮಂಡಳಿಯು ಮೂಲತಃ ಸಿದ್ದಿಕಿ ಅವರ ತಂದೆಗೆ ಸೇರಿದ ಆಸ್ತಿಯನ್ನು ಕೆಡವಲು ನೋಟಿಸ್ ನೀಡಿತು. ಕಟ್ಟಡದ ಕೆಲವು ಭಾಗಗಳನ್ನು ಯಾವುದೇ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಗುರುವಾರ ಪ್ರಕರಣದ ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಕಂಟೋನ್ಮೆಂಟ್ ಮಂಡಳಿಯು ಅರ್ಜಿದಾರರಿಗೆ ಆಕ್ಷೇಪಿತ ಕಟ್ಟಡವನ್ನು ತೆರವುಗೊಳಿಸಲು ಕೇವಲ ಮೂರು ದಿನಗಳ ಕಾಲವಕಾಶ ನೀಡಿತ್ತು ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.

ಅರ್ಜಿದಾರರಿಗೆ ವಿಚಾರಣೆಯ ಅವಕಾಶವನ್ನು ನೀಡದೆಯೇ ತಕ್ಷಣ ಕಟ್ಟಡ ತೆರವುಗೊಳಿಸುವ ಆದೇಶವನ್ನು ಹೊರಡಿಸಲಾಗಿದೆ ಎಂದು ವಾದಿಸಲಾಯಿತು. 1996–97ರಲ್ಲಿ ಅರ್ಜಿದಾರರಿಗೆ ಇದೇ ರೀತಿಯ ನೋಟಿಸ್‌ಗಳನ್ನು ನೀಡಲಾಗಿತ್ತು ಮತ್ತು ಈಗ ಹೊಸ ನೋಟಿಸ್ ನೀಡಲಾಗಿದೆ ಎನ್ನುವ ಅಂಶವನ್ನು ನ್ಯಾಯಾಲಯವು ಗಮನಿಸಿತು.

"ಹಿಂದಿನ ನೋಟಿಸ್ ಜಾರಿಯಾದ ದಿನಾಂಕದಿಂದ ಸುಮಾರು 30 ವರ್ಷಗಳ ನಂತರ ಅರ್ಜಿದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಕಾದರೆ, ಅವರಿಗೆ ವಿಚಾರಣೆಗೆ ಅವಕಾಶ ನೀಡಬೇಕಾಗಿತ್ತು" ಎಂದು ನ್ಯಾಯಾಲಯವು ಅರ್ಜಿದಾರರಿಗೆ ಮಧ್ಯಂತರ ಪರಿಹಾರವನ್ನು ನೀಡುತ್ತಾ ಹೇಳಿದೆ. ಪ್ರಕರಣದ ವಿಚಾರಣಾರ್ಹತೆಯ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿತು.

Kannada Bar & Bench
kannada.barandbench.com