ಮಡಿಲು ವಿಶೇಷ ದತ್ತು ಕೇಂದ್ರದಲ್ಲಿ ಅಪ್ರಾಪ್ತ ಅನಾಥೆಗೆ ಆಶ್ರಯ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಮುರುಘಾ ಶರಣರ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದ್ದು, ಅಕ್ರಮ ಬಂಧನ, ಶೋಷಣೆ ಮತ್ತು  ತಪ್ಪಾದ ಗಳಿಕೆ ಆರೋಪಗಳಿಗೆ ಪೂರಕ ಸಾಕ್ಷ್ಯಾಧಾರಗಳಿಲ್ಲ ಎಂದು ವಾದಿಸಲಾಗಿದೆ.
Shivamurthy Murugha Sharanaru and Karnataka HC
Shivamurthy Murugha Sharanaru and Karnataka HC
Published on

ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ನಡೆಸುತ್ತಿರುವ ಮಡಿಲು ವಿಶೇಷ ದತ್ತು ಕೇಂದ್ರದಲ್ಲಿ ಅಪ್ರಾಪ್ತ ಅನಾಥೆಗೆ ಆಶ್ರಯ ಕಲ್ಪಿಸಿದ ಬಗ್ಗೆ ಮಾಹಿತಿ ನೀಡದ ಆರೋಪದ ಮೇಲೆ ತಮ್ಮ ವಿರುದ್ಧ ಬಾಲ ನ್ಯಾಯ ಕಾಯಿದೆ ಅಡಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಡಾ.ಶಿವಮೂರ್ತಿ ಮುರುಘಾ ಶರಣ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ಡಾ.ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ‌ ಕಾಲ ವಿಚಾರಣೆ ನಡೆಸಿದ ಪೀಠವು ಪ್ರತಿವಾದಿಗಳಾದ  ಚಿತ್ರದುರ್ಗದ ಗ್ರಾಮಾಂತರ ಠಾಣಾ‌ ಪೋಲೀಸರು ಹಾಗೂ ದೂರುದಾರರಾಗಿರುವ ಜಿಲ್ಲಾ ಮಕ್ಕಳ ಕಲ್ಯಾ ಸಮಿತಿ ಅಧಿಕಾರಿ ಲೋಕೇಶ್ವರಪ್ಪ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಲೋಕೇಶ್ವರಪ್ಪ ಅವರು 2022ರ ಆಗಸ್ಟ್ 27ರಂದು ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆ ದೂರು ನೀಡಿ, ಚಿತ್ರದುರ್ಗದ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠ ನಡೆಸುತ್ತಿರುವ ಮಡಿಲು ವಿಶೇಷ ದತ್ತು ಕೇಂದ್ರದಲ್ಲಿ ಅಪ್ರಾಪ್ತೆ ಅನಾಥೆಗೆ ಆಶ್ರಯ ಕಲ್ಪಿಸಲಾಗಿದೆ. ಮತ್ತೊಂದು ಬಾಲಕಿಯನ್ನು ಮಠದ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಇಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿಲ್ಲ. ಅದು ಬಾಲ ನ್ಯಾಯ ಕಾಯಿದೆ ಸೆಕ್ಷನ್ 33 ಮತ್ತು 34ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು.

Also Read
ಪೋಕ್ಸೊ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಖುಲಾಸೆಗೊಳಿಸಿದ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ

ಈ ದೂರಿನ ಅನ್ವಯ 2022ರ ಅಕ್ಟೋಬರ್‌ 18ರಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಪೊಲೀಸರು, ಪ್ರಕರಣದ ಕುರಿತು ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಅನುಮತಿ ನೀಡಿತ್ತು.‌ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ ಪೊಲೀಸರು, ಬಾಲ ನ್ಯಾಯ ಕಾಯಿದೆ ಸೆಕ್ಷನ್ 33 ಮತ್ತು 34ರಡಿ ಅರ್ಜಿದಾರರು ಹಾಗೂ ಇತರೆ ಏಳು ಮಂದಿ ಆರೋಪ ಪಟ್ಟಿ ಸಲ್ಲಿಸಿತ್ತು. ಅದನ್ನು ಅಂಗೀಕರಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ 2024ರ ಜುಲೈ 15ರಂದು ಅರ್ಜಿದಾರರಿಗೆ  ಸಮನ್ಸ್ ಜಾರಿ ಮಾಡಿತ್ತು.

ಇದರಿಂದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯ ವಿಚಾರಣೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ‌ ಡಾ.ಶಿವಮೂರ್ತಿ ಮರುಘಾ ಶರಣರು, ಪ್ರಕರಣದಲ್ಲಿ ತಾವು ಅಮಾಯಕರಾಗಿದ್ದೇವೆ. ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದ್ದು, ಅಕ್ರಮ ಬಂಧನ, ಶೋಷಣೆ ಮತ್ತು  ತಪ್ಪಾದ ಗಳಿಕೆ ಆರೋಪಗಳಿಗೆ ಪೂರಕ ಸಾಕ್ಷ್ಯಾಧಾರಗಳಿಲ್ಲ ಎಂದು ಆಕ್ಷೇಪಿಸಿದ್ದಾರೆ.

Kannada Bar & Bench
kannada.barandbench.com