ತಮಿಳುನಾಡಿನ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ 28 ಬಗೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಮದ್ರಾಸ್ ಹೈಕೋರ್ಟ್ ನಿಷೇಧ

ನಿಷೇಧಿತ ಪ್ಲಾಸ್ಟಿಕ್ಗಳನ್ನು ಸಾಗಿಸುವ ವಾಹನಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಪ್ರವಾಸಿಗರನ್ನು ಪ್ರವೇಶ ದ್ವಾರಗಳಲ್ಲಿ ಪರಿಶೀಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿತು.
ತಮಿಳುನಾಡಿನ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ 28 ಬಗೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಮದ್ರಾಸ್ ಹೈಕೋರ್ಟ್ ನಿಷೇಧ
Published on

ತಮಿಳುನಾಡಿನ ನೀಲಗಿರಿಯಿಂದ ಹಿಡಿದು ಕನ್ಯಾಕುಮಾರಿಯ ಅಗಸ್ತ್ಯ ಜೀವಗೋಳ ಅಭಯಾರಣ್ಯದವರವೆಗೆ ಪಶ್ಚಿಮ ಘಟ್ಟಗಳು, ಅಭಯಾರಣ್ಯಗಳು ಮತ್ತು ಹುಲಿ ಮೀಸಲು ಪ್ರದೇಶಗಳಲ್ಲಿ 28 ಬಗೆಯ ಪ್ಲಾಸ್ಟಿಕ್ ಮಾರಾಟ, ಖರೀದಿ ಮತ್ತು ಬಳಕೆಯನ್ನು ನಿಷೇಧಿಸಿದೆ, [ಜಿ ಸುಬ್ರಮಣ್ಯ ಕೌಶಿಕ್ ಮತ್ತು ತಮಿಳುನಾಡು ಸರ್ಕಾರದ ಪ್ರಧಾನ ಕಾರ್ಯದರ್ಶಿ ನಡುವಣ ಪ್ರಕರಣ] .

ಪಾಲಿಥಿಲೀನ್ ಟೆರೆಫ್ಥಲೇಟ್ (ಪಿಇಟಿ) ಪ್ಲಾಸ್ಟಿಕ್ ಬಾಟಲಿಗಳು, ತಟ್ಟೆ, ಲೋಟ, ಸ್ಟ್ರಾಗಳು, ಐಸ್‌ಕ್ರೀಮ್ ಸ್ಟಿಕ್‌ಗಳು ಮತ್ತಿತರ ಉತ್ಪನ್ನಗಳು ಸೇರಿದಂತೆ 28 ಬಗೆಯ ಪ್ಲಾಸ್ಟಿಕ್ ವಸ್ತುಗಳಿಗೆ ನಿಷೇಧ ಅನ್ವಯಿಸುತ್ತದೆ ಎಂದು  ನ್ಯಾಯಮೂರ್ತಿಗಳಾದ ಎನ್ ಸತೀಶ್ ಕುಮಾರ್ ಮತ್ತು ಡಿ ಭರತ ಚಕ್ರವರ್ತಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

Also Read
ಹವಾಮಾನ ಬದಲಾವಣೆ ಪರಿಸರ ಮಾತ್ರವಲ್ಲದೆ ಮಾನವ ಹಕ್ಕು ಮತ್ತು ನ್ಯಾಯಕ್ಷೇತ್ರಕ್ಕೂ ಅಪಾಯಕಾರಿ: ಸಿಜೆಐ

"ಬಹು-ಪದರದ ಹೊದಿಕೆಗಳು, ಫಾಯಿಲ್‌ಗಳು, ಬಹು-ಪದರದ ಕವರ್‌, ಸ್ಯಾಷೇ, ಪೌಚ್‌ ಅಥವಾ ಇತರ ಜೈವಿಕ ವಿಘಟನೀಯವಲ್ಲದ ಪ್ಯಾಕೇಜಿಂಗ್ ವಸ್ತುಗಳಲ್ಲಿ ಪ್ಯಾಕ್ ಮಾಡಲಾದ ತಿಂಡಿ, ಬಿಸ್ಕತ್ತು ಅಥವಾ ಯಾವುದೇ ಉಪಭೋಗ್ಯ ವಸ್ತುಗಳ ವಿತರಣೆಯಲ್ಲಿ ತೊಡಗಿರುವ ಅಂಗಡಿ ಮಾಲೀಕರು, ಮಾರಾಟಗಾರರು ಅಥವಾ ವ್ಯಕ್ತಿಗಳು ಪ್ಯಾಕೇಜಿಂಗ್ ಕತ್ತರಿಸಿ ಅವುಗಳನ್ನು ಬೆಣ್ಣೆ ಕಾಗದದಂತಹ ಜೈವಿಕ ವಿಘಟನೀಯ ಕವರ್‌ಗಳಿಗೆ ವರ್ಗಾಯಿಸಬೇಕು, ಅವು ಪ್ಲಾಸ್ಟಿಕ್ ಅಥವಾ ಕೊಳೆಯಲು ದೀರ್ಘಕಾಲ ತೆಗೆದುಕೊಳ್ಳುವ ವಸ್ತುಗಳನ್ನು ಹೊಂದಿರುವುದಿಲ್ಲ. ಪರ್ಯಾಯವಾಗಿ, ಅವರು ಎಲೆ ಉತ್ಪನ್ನ, ಹುಲ್ಲು, ಮಣ್ಣು ಮುಂತಾದ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ನಿಷೇಧಿತ ಪ್ಯಾಕೇಜಿಂಗ್ ವಸ್ತುಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬೇಕು" ಎಂದು ನ್ಯಾಯಾಲಯ ಹೇಳಿದೆ.  

ಪ್ಲಾಸ್ಟಿಕ್‌ ವಸ್ತುಗಳನ್ನು ಸಾಗಿಸುವ ವಾಹನಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಕೂಡ ನ್ಯಾಯಾಲಯ ಇದೇ ವೇಳೆ ಹೇಳಿದೆ.

ನೀಲಗಿರಿ, ಕೊಡೈಕನಾಲ್ ಬೆಟ್ಟ ಹಾಗೂ ಪಶ್ಚಿಮ ಘಟ್ಟಗಳ ಇತರ ಪ್ರವೇಶ ದ್ವಾರಗಳು ಮತ್ತು ಅಭಯಾರಣ್ಯಗಳನ್ನು ಪ್ರವೇಶಿಸುವ ಪ್ರವಾಸಿಗರು ತರುವ ಪ್ಲಾಸ್ಟಿಕ್ ವಸ್ತುಗಳನ್ನು ಪರಿಶೀಲಿಸಬೇಕು ಎಂದು ಅದು ಆದೇಶಿಸಿದೆ. ಬಟ್ಟೆಯಿಂದ ತಯಾರಿಸಿದ ಪ್ರವಾಸಿ ಕಿಟ್ ಬ್ಯಾಗ್ ಅಭಿವೃದ್ಧಿಪಡಿಸುವಂತಹ ನವೀನ ವಿಧಾನಗಳನ್ನು ಜಾರಿಗೆ ತರಬಹುದು ಎಂದು ಪೀಠ ಹೇಳಿದೆ.

"ಈ ಕಿಟ್‌ನಲ್ಲಿ ಸುಸ್ಥಿರ ಪ್ರವಾಸೋದ್ಯಮ ಪದ್ಧತಿಯನ್ನು ಪ್ರೋತ್ಸಾಹಿಸುವಂತಹ ಮರುಬಳಕೆ ಮಾಡಬಹುದಾದ ಬಾಟಲಿಗಳು, ಖರೀದಿಗೆ ಬೇಕಾದ ಬಟ್ಟೆ ಚೀಲಗಳು ಮತ್ತು ಸುಸ್ಥಿರ ಆಹಾರ ಪದ್ಧತಿಯನ್ನು ಉತ್ತೇಜಿಸುವ ಕಟ್ಲರಿಗಳು, ಪರಿಸರ ಸ್ನೇಹಿ ಸ್ಟ್ರಾ, ನ್ಯಾಪ್‌ಕಿನ್‌ ಮತ್ತು ಆಹಾರ ಸಂಗ್ರಹಣೆಗಾಗಿ ಸಣ್ಣ ಪಾತ್ರೆಗಳಂತಹ ಮಾರಾಟ ಮಾಡಬಹುದಾದ ವಸ್ತುಗಳು ಇರಬೇಕು" ಎಂದು ನ್ಯಾಯಾಲಯ ಹೇಳಿದೆ. 

ಕುಡಿಯುವ ನೀರಿನ ಕೇಂದ್ರಗಳು, ಠೇವಣಿ ವಾಪಸಾತಿ ಕಿಟ್‌ಗಳು, ವಿದ್ಯುತ್ ಚಾರ್ಜಿಂಗ್ ಪಾಯಿಂಟ್‌ಗಳು ಇತ್ಯಾದಿಗಳ ಲಭ್ಯತೆಗೆ ಬಳಕೆದಾರರಿಗೆ ಮಾರ್ಗದರ್ಶನ ನೀಡುವ ಸ್ಥಳೀಯ ಸಮುದಾಯ ಮತ್ತು ವ್ಯವಹಾರಗಳನ್ನು ಒಳಗೊಂಡ ಮೊಬೈಲ್ ಅಪ್ಲಿಕೇಶನ್ ಅಥವಾ ಜಾಲತಾಣ ರೂಪಿಸಬಹುದು. ಎಂದು ಅದು ಸೂಚಿಸಿದೆ.

Also Read
ಪರಿಸರ ಕಾನೂನು ಉಲ್ಲಂಘನೆಗೆ ದಂಡ ವಿಧಿಸುವಿಕೆ ಕಂಪೆನಿ ಆದಾಯ ಆಧರಿಸಿರಬಾರದು: ಎನ್‌ಜಿಟಿಗೆ ಸುಪ್ರೀಂ ತರಾಟೆ

"ಸಂಗ್ರಹಿಸಿದ ಘನತ್ಯಾಜ್ಯವನ್ನು ಸುರಕ್ಷಿತವಾಗಿ ಮತ್ತು ಯೋಜಿತ ರೀತಿಯಲ್ಲಿ ವಿಲೇವಾರಿ ಮಾಡಬೇಕು, ಈ ತ್ಯಾಜ್ಯಗಳನ್ನು ಸರಿಯಾಗಿ ಸಂಗ್ರಹಿಸಿ, ಪುಡಿಮಾಡಿ, ಮರುಬಳಕೆಗಾಗಿ ಸೂಕ್ತ ಸಂಸ್ಥೆಗಳಿಗೆ ಪೂರೈಸಬೇಕು" ಎಂದು ನ್ಯಾಯಾಲಯ ಆದೇಶಿಸಿತು.

ಜಿ ಸುಬ್ರಮಣ್ಯ ಕೌಶಿಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿದೆ. 2019ರಿಂದ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರ ಮಾಲಿನ್ಯಕಾರಕ ವಸ್ತುಗಳನ್ನು ನಿಷೇಧಿಸುವ ಆದೇಶ ನೀಡಲಾಗಿದ್ದರೂ, ಅದು ಯಾವುದೇ ಪರಿಣಾಮ ಬೀರಿಲ್ಲ ಎಂದ ಪೀಠ ಹೇಳಿತು. ಪ್ಲಾಸ್ಟಿಕ್ ನಿಷೇಧಿಸಲು ವಿವರವಾದ ನಿರ್ದೇಶನಗಳನ್ನು ಹೊರಡಿಸಿದ ಅದು ಜೂನ್ 6ರೊಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ತಮಿಳುನಾಡು ಸರ್ಕಾರ ಮತ್ತು ವಿವಿಧ ಅಧಿಕಾರಿಗಳಿಗೆ ಆದೇಶಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
G_Subramania_Koushik_v_The_Principal_Secretary_to_Government_of_Tamil_Nadu______Ors
Preview
Kannada Bar & Bench
kannada.barandbench.com